ಕರ್ನಾಟಕ

ಕೋಟ್ಯಂತರ ರೂಪಾಯಿ ಮೌಲ್ಯದ ಕೊಂಬು ವಶ

Pinterest LinkedIn Tumblr

kombuಬೆಳಗಾವಿ: ಇಲ್ಲಿನ ಶೆಟ್ಟಿಗಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸಾರಂಗ ಹಾಗೂ ಜಿಂಕೆ ಕೊಂಬುಗಳು, ಒಂದು ಜೊತೆ ಆನೆ ದಂತ ಮತ್ತು ಚಿಪ್ಪುಹಂದಿಯ ಚಿಪ್ಪುಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ಕೊಂಬುಗಳನ್ನು ವಶಪಡಿಸಿಕೊಂಡ ಘಟನೆ ಇದೇ ಮೊದಲು ಎನ್ನಲಾಗುತ್ತಿದೆ.

ಕೊತ್ವಾಲ್‌ಗಲ್ಲಿಯ ನಿವಾಸಿ 45 ವರ್ಷದ ಸಲೀಂಖಾನ್‌ ಸೌದಾಗಾರ್‌ ಅಲಿಯಾಸ್‌ ಚಮಡೆವಾಲೆ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಎಸಿಪಿ ಶಂಕರ ಮಾರಿಹಾಳ, ಇನ್‌ಸ್ಪೆಕ್ಟರ್‌ಗಳಾದ ಜಾವೇದ್‌ ಮುಸಾಪುರಿ ಹಾಗೂ ಅಡಿವೇಶ ಗುದಿಗೊಪ್ಪ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ‘ಒಂದು ಜೊತೆ ದಂತ, ಚಿಪ್ಪು ಹಾಗೂ ಕೊಂಬುಗಳು ಸೇರಿ ಸುಮಾರು ಒಂದು ಟನ್‌ನಷ್ಟಾಗುತ್ತದೆ. ದೇಶಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ಕೊಂಬುಗಳನ್ನು ವಶಪಡಿಸಿಕೊಂಡಿದ್ದು ಇದೇ ಮೊದಲು ಎನಿಸುತ್ತದೆ. ಈಗ ವಶಪಡಿಸಿಕೊಂಡಿರುವ ಕೊಂಬುಗಳನ್ನು ಗಮನಿಸಿದರೆ, ಹಲವು ವರ್ಷಗಳಿಂದಲೂ ಸಂಗ್ರಹಿಸಿದವಂತೆ ಕಾಣುತ್ತಿವೆ. ದಂತವು ಮರಿ ಆನೆಯದ್ದಿರಬಹುದು. ಆರೋಪಿಯು ಚರ್ಮದ ವ್ಯಾಪಾರ ಮಾಡು ತಿಳಿಸಿದ್ದಾರೆ. ಒಬ್ಬರಿಂದ ಇಷ್ಟೊಂದು ಪ್ರಮಾಣದ ಕೊಂಬುಗಳನ್ನು ಸಂಗ್ರಹಿಸುವುದು ಸಾಧ್ಯವಾಗಿರಲಿಕ್ಕಿಲ್ಲ. ಇದರ ಹಿಂದೆ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಶಂಕೆ ಇದೆ. ಇದಕ್ಕಾಗಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಡಿಸಿಪಿ ಅಮರನಾಥರೆಡ್ಡಿ ಅವರು ಪತ್ರಕರ್ತರಿಗೆ ತಿಳಿಸಿದರು.

‘ಆರೋಪಿಯು ಕೊತ್ವಾಲ್‌ಗಲ್ಲಿ ನಿವಾಸಿಯಾಗಿದ್ದು, ಶೆಟ್ಟಿಗಲ್ಲಿಯಲ್ಲಿರುವ ಮನೆಯಲ್ಲಿ ಕೊಂಬುಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಬೇರೆ ಬೇರೆ ಅರಣ್ಯ ಪ್ರದೇಶಗಳಿಂದ ಈ ಕೊಂಬುಗಳನ್ನು ತಂದಿರಬಹುದು. ಹೈದರಾಬಾದ್‌, ಗೋವಾ ಹಾಗೂ ವಿಯೆಟ್ನಾಂ ಮೊದಲಾದ ಕಡೆಗಳಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ’ ಎಂದ ಮಾಹಿತಿ ನೀಡಿದರು.

‘ಈ ಕೊಂಬುಗಳಿಗೆ ದೇಶಿ ಮಾರುಕಟ್ಟೆಯಲ್ಲಿ ಅಂದಾಜು ₹ 1ರಿಂದ ₹ 2 ಕೋಟಿ ಮೌಲ್ಯವಿರಬಹುದು. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೂರಾರು ಕೋಟಿ ಬೆಲೆ ಬಾಳಬಹುದು. ಸಾರಂಗ, ಜಿಂಕೆ ಕೊಂಬುಗಳನ್ನು, ಆನೆ ದಂತಗಳನ್ನು ವಿದೇಶಗಳಲ್ಲಿ ಶ್ರೀಮಂತರು ಮನೆಗಳಲ್ಲಿ ಅಲಂಕಾರಕ್ಕೆ ಇಟ್ಟುಕೊಳ್ಳುತ್ತಾರೆ. ಚಿಪ್ಪು ಹಂದಿಯ ಚಿಪ್ಪನ್ನು ಬುಲೆಟ್‌ಪ್ರೂಫ್‌ ಜಾಕೆಟ್‌ಗಳಲ್ಲಿ ಬಳಸುತ್ತಾರೆ. ಇದರಿಂದಾಗಿ ಇವುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೆಲೆ ಬಾಳುತ್ತವೆ. ಆದರೆ, ಸಂರಕ್ಷಿತ ಪ್ರಾಣಿಗಳ ಕೊಂಬುಗಳು ಇವಾಗಿರುವುದರಿಂದ ಕಾನೂನು ಪ್ರಕಾರ ಬೆಲೆ ಕಟ್ಟುವುದಕ್ಕೆ ಬರುವುದಿಲ್ಲ. ಹಿಂದಿನ ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕೊಂಬುಗಳನ್ನು ನ್ಯಾಯಾಲಯದ ಆದೇಶದಂತೆ ಸುಟ್ಟು ನಾಶಪಡಿಸಲಾಗಿದೆ’ ಎಂದು ಆರ್‌ಎಫ್‌ಒ ಶ್ರೀನಾಥ್‌ ಕಡೋಲ್ಕರ್‌ ತಿಳಿಸಿದರು.

ಮುಖ್ಯಾಂಶಗಳು
* ಬೆಳಗಾವಿ ಪೊಲೀಸರ ಕಾರ್ಯಾಚರಣೆ
* ಟನ್‌ನಷ್ಟು ಜಿಂಕೆ, ಸಾರಂಗ ಕೊಂಬುಗಳು ಪತ್ತೆ!
* ಎರಡು ಆನೆ ದಂತ, ಚಿಪ್ಪುಹಂದಿಯ ಚಿಪ್ಪು ವಶ

Comments are closed.