ಕರ್ನಾಟಕ

ಮೊಮ್ಮಗನ ಜಾಗ್ವಾರ್ ಚಿತ್ರ ವೀಕ್ಷಿಸಿದ ದೇವೇಗೌಡ

Pinterest LinkedIn Tumblr

deve

ಬೆಂಗಳೂರು, ಅ. ೬ – ನವ ನಟ ನಿಖಿಲ್ ಅಭಿನಯದ `ಜಾಗ್ವಾರ್’ ಚಿತ್ರಕ್ಕೆ ರಾಜ್ಯದೆಲ್ಲೆಡೆ ಹಾಗೂ ವಿದೇಶದಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಎಲ್ಲೆಡೆ `ಜಾಗ್ವಾರ್‌’ ಜಗಮಗಿಸುವಂತಾಗಿದೆ.
ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಭ್ರಮ, ಹರ್ಷೋದ್ಘಾರ, ಪೂಜೆ – ಪುನಸ್ಕಾರಗಳ ಮೂಲಕ ಜಾಗ್ವಾರ್ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿರುವುದು ನಿಖಿಲ್‌ಗೆ ಮೊದಲ ಪ್ರವೇಶದಲ್ಲೇ ಚಂದನವನದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
ದಿನದ 24 ಗಂಟೆಗಳ ಕಾಲ ರಾಜಕಾರಣದಲ್ಲಿ ತಲ್ಲೀನರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಅಪರೂಪಕ್ಕೆ ಎನ್ನುವಂತೆ ತಮ್ಮ ಮೊಮ್ಮಗ ನಿಖಿಲ್‌ ಅಭಿನಯದ ಚಿತ್ರ ವೀಕ್ಷಿಸಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯುವಂತೆ ಶುಭ ಕೋರಿದರು.
ಬೆಳಗಿನ ಪ್ರದರ್ಶನಕ್ಕೆ ಮೊಮ್ಮಗ ನಿಖಿಲ್‌ನೊಂದಿಗೆ ಚಿತ್ರಮಂದಿರಕ್ಕೆ ಆಗಮಿಸಿದ ದೇವೇಗೌಡರು, ಸಿನಿಮಾ ನೋಡಿ ಅಲ್ಲಿಂದ ನಿರ್ಗಮಿಸಿದರು.
ಕನ್ನಡ ಮತ್ತು ತೆಲುಗಿನಲ್ಲಿ ಸುಮಾರು 65 ಕೋಟಿ ವೆಚ್ಚದಲ್ಲಿ ಏಕ ಕಾಲದಲ್ಲಿ ತಯಾರಾಗಿರುವ ಚಿತ್ರ `ಜಾಗ್ವಾರ್’ ಸರಿ ಸುಮಾರು 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕನ್ನಡದ ಚಿತ್ರವೊಂದು ಇಷ್ಟೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದು ಇದೇ ಮೊದಲು ಹಾಗೂ ದಾಖಲೆ ಎನ್ನುತ್ತಿದ್ದಾರೆ ಚಿತ್ರರಂಗದ ಮಂದಿ.
ಭಾರಿ ಸಂಖ್ಯೆಯಲ್ಲಿ ಜನಜಂಗುಳಿ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವಂತಾಯಿತು. ಇದರಿಂದಾಗಿ ಕೆಜಿ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಗಡಿ ರಸ್ತೆಯ ಚಿತ್ರಮಂದಿರದಲ್ಲಿ ಸ್ನೇಹಿತರು, ಪಕ್ಷದ ಕಾರ್ಯಕರ್ತ ಸಮ್ಮುಖದಲ್ಲಿ ಜಾಗ್ವಾರ್ ಸಿನಿಮಾ ವೀಕ್ಷಿಸಿ ಮಗನ ಮೊದಲ ಚಿತ್ರಕ್ಕೆ ಇಷ್ಟೊಂದು ಬೆಂಬಲ, ಪ್ರೀತಿ ಅಭಿಮಾನ ಸಿಗುತ್ತದೆ ಎಂದು ಕನಸು -ಮನಸಿನಲ್ಲೂ ಎಣಿಸಿರಲಿಲ್ಲ. ಜನರ ಪ್ರೀತಿ, ಅಭಿಮಾನಕ್ಕೆ ಸದಾ ಋಣಿಯಾಗಿರುತ್ತೇವೆ. ಮುಂದೆಯೂ ನಿಖಿಲ್‌ಗೆ ಸಹಕಾರ, ಬೆಂಬಲ ಇರಲಿ ಎಂದು ವಿನಮ್ರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದರು.
ಮೈಸೂರಿನಲ್ಲಿ ನಿಖಿಲ್ ಹೆಸರಿನವರು ತಮ್ಮ ಐಡಿ ತೋರಿಸಿದರೆ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ ಉದಾಹರಣೆಗಳೂ ಇವೆ.
ಡಿ.ಕೆ. ಶಿವಕುಮಾರ್ ಶುಭ ಹಾರೈಕೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದೊಂದಿಗೆ ರಾಜಕಾರಣದಲ್ಲಿ ಸದಾ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು, ನಿಖಿಲ್ ಅಭಿನಯದ ಜಾಗ್ವಾರ್ ಚಿತ್ರಕ್ಕೆ ಶುಭ ಹಾರೈಸಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿರುವುದು ಅಚ್ಚರಿಗೆ ಕಾರಣವಾಗಿದೆ.
ಯಾವುದೇ ರಂಗಕ್ಕೆ ಯಾರು ಬೇಕಾದರೂ ಬರಬಹುದು ಯಾರನ್ನೂ ತಡೆಯಲು ಆಗುವುದಿಲ್ಲ. ನಿಖಿಲ್ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಲಿ, ರಾಜ್ಯದಾದ್ಯಂತ ಅಭಿಮಾನಿ ಬಳಗವನ್ನು ಹೊಂದಲಿ ಎಂದು ಹಾರೈಸಿದ್ದಾರೆ.
ನಾನೂ ಕೂಡ ಪ್ರದರ್ಶಕ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳನ್ನು ನಿರ್ಮಾಣ ಮಾಡುತ್ತೇನೆ. ನನ್ನ ಮಕ್ಕಳಾದರೂ ಅವುಗಳನ್ನು ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಕ್ಕಳನ್ನು ಚಿತ್ರರಂಗಕ್ಕೆ ತರುವ ಸುಳಿವು ನೀಡಿದ್ದಾರೆ.

Comments are closed.