ಕರ್ನಾಟಕ

ಕರ್ನಾಟಕ, ತಮಿಳುನಾಡು ಗಡಿಭಾಗದಲ್ಲಿ ಬಸ್ ಸಂಚಾರ ಆರಂಭ

Pinterest LinkedIn Tumblr

bmtc-ksrtcಬೆಂಗಳೂರು, ಅ. ೫ – ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉದ್ವಿಗ್ನ ಹಾಗೂ ಬಿಗುವಿನ ವಾತಾವರಣ ಸೃಷ್ಟಿ ಮಾಡಿದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ಸು, ಲಾರಿ, ಟ್ರಕ್ ಸೇರಿದಂತೆ ಇನ್ನಿತರ ವಾಹನಗಳ ಸಂಚಾರ ಇಂದಿನಿಂದ ಆರಂಭವಾಗಿದೆ.
ಕರ್ನಾಟಕದ ಗಡಿ ಭಾಗ ಅತ್ತಿಬೆಲೆಯಿಂದ ತಮಿಳುನಾಡಿಗೆ, ತಮಿಳುನಾಡಿನ ಗಡಿ ಭಾಗ ಹೊಸೂರಿನಿಂದ ಕರ್ನಾಟಕದ ಕಡೆಗೆ ಬಸ್ಸು, ಲಾರಿ, ದ್ವಿಚಕ್ರ ವಾಹನ, ಕಾರುಗಳು ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ಆರಂಭವಾಗಿದ್ದು, ವ್ಯಾಪಾರ ವಹಿವಾಟುಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಲಾರಿ, ಟ್ರಕ್ ಸೇರಿದಂತೆ ಇನ್ನಿತರೆ ಸರಕು ಸಾಗಣೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಯಾವುದೇ ಸರಕು ಸರಂಜಾಮುಗಳು ಸಾಗಣೆಯಾಗದೆ ಜನರು ಸೇರಿದಂತೆ ವ್ಯಾಪಾರಗಾರರು ತೊಂದರೆ ಎದುರಿಸುವಂತಾಯಿತು. ಇಂದಿನಿಂದ ವಾಹನ ಸಂಚಾರ ಪುನರಾರಂಭವಾಗಿರುವುದರಿಂದ ತುಸು ನಿಟ್ಟುಸಿರು ಬಿಟ್ಟಿದ್ದಾರೆ.
ಅತ್ತಿಬೆಲೆ ಹಾಗೂ ಹೊಸೂರು ಗಡಿ ಭಾಗದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರವಾಗುತ್ತಿದ್ದು, ಅದು ಇಂದಿನಿಂದ ಆರಂಭವಾಗಿದೆ.
ದಿಪಾವಳಿಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳನ್ನು ದಕ್ಷಿಣ ಭಾರತಕ್ಕೆ ತಮಿಳುನಾಡಿನ ಸಿವಗಾಸಿಯಿಂದ ರಾಜ್ಯ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲು ಆಗದೆ ಪಟಾಕಿ ಮಾರಾಟಗಾರರು ಆತಂಕಕ್ಕೆ ಒಳಗಾಗಿದ್ದರು. ವಾಹನಗಳ ಸಂಚಾರ ಪುನರಾರಂಭವಾಗಿರುವುದರಿಂದ ಅಲ್ಲಿನ ಪಟಾಕಿ ಮಾರಾಟಗಾರರು ಸಲೀಸಾಗಿ ಕರ್ನಾಟಕ ಸೇರಿದಂತೆ ವಿವಿಧೆಡೆ ಪಟಾಕಿಗಳನ್ನು ಸರಬರಾಜು ಮಾಡಲು ಅನುಕೂಲವಾದಂತಾಗಿದೆ.
ಕಾವೇರಿಯ ಗಲಾಟೆ ಉಲ್ಭಣಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ವಾಹನಗಳು ಕರ್ನಾಟಕಕ್ಕೆ, ಕರ್ನಾಟಕದ ವಾಹನಗಳು ತಮಿಳುನಾಡಿಗೆ ಸಂಚಾರ ಮಾಡುವುದನ್ನು ಸಿಲ್ಲಿಸಲಾಗಿತ್ತು. ಗಲಭೆ ಹಿನ್ನೆಲೆಯಲ್ಲಿ ಕರ್ನಾಟಕದ ವಾಹನಗಳನ್ನು ತಮಿಳುನಾಡಿನಲ್ಲಿ, ತಮಿಳುನಾಡಿನ ವಾಹನಗಳ ಮೇಲೆ ಕರ್ನಾಟಕದ ಕೆಲ ಭಾಗಗಳಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಎದುರಾಗುವ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ರಾಜ್ಯಗಳಿಂದ ಬರುವ ವಾಹನಗಳನ್ನು ಗಡಿ ಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು.
ಇಂದಿನಿಂದ ವಾಹನ ಸಂಚಾರ ಪುನರಾರಂಭವಾಗಿರುವುದರಿಂದ ಅತ್ತಿಬೆಲೆ ಹಾಗೂ ಹೊಸೂರಿನಲ್ಲಿ ವಾಹನಗಳು ಸಂಚಾರ ಆರಂಭಿಸಿದ್ದರಿಂದ ಲಾರಿ, ಟ್ರಕ್ ಸೇರಿದಂತೆ ಇತರೆ ಸರಕು ಸಾಗಾಣೆಯ ವಾಹನಗಳ ಚಾಲಕರು ಸಂಚಾರ ಆರಂಭಿಸಿದರು. ಮತ್ತೊಂದೆಡೆ ವಾಹನಗಳು ಹಾಗೂ ಸರಕುಗಳ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Comments are closed.