ರಾಷ್ಟ್ರೀಯ

ಉಭಯ ದೇಶಗಳ ಗಡಿಭಾಗದಲ್ಲಿ ಹೆಚ್ಚಾದ ಮಿಲಿಟರಿ ಚಲನವಲನ

Pinterest LinkedIn Tumblr

indian-armyನವದೆಹಲಿ, ಅ. ೫- ಪಾಕ್ ಆಕ್ರಮಿತ ಪ್ರದೇಶದ ಮೇಲೆ ಭಾರತದ ಸೈನಿಕರ ಕಮಾಂಡೋ ಕಾರ್ಯಾಚರಣೆಯ ನಂತರ ತಲೆದೋರಿರುವ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಉಭಯ ದೇಶಗಳ ಗಡಿಭಾಗದಲ್ಲಿ ಮಿಲಿಟರಿ ಚಲನವಲನ ಹೆಚ್ಚಾಗಿದೆ.
ಸೈನಿಕ ಕಾರ್ಯಾಚರಣೆಗೆ ಸಜ್ಜಾಗುವ ರೀತಿಯಲ್ಲಿ ಎರಡೂ ದೇಶಗಳ ಮಿಲಿಟರಿ ತುಕಡಿಗಳು ಆಯಾಕಟ್ಟಿನ ಜಾಗದಲ್ಲಿ ನಿಯೋಜನೆಗೊಂಡಿವೆ. ಇದರಿಂದಾಗಿ ಭಾರತ ಗಡಿಭಾಗದ ಗ್ರಾಮಗಳ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ಉಗ್ರರ ರಹಸ್ಯ ಮಾರ್ಗ
ಪಾಕಿಸ್ತಾನದ ಉಗ್ರರು ನದಿ ಮಾರ್ಗದಲ್ಲಿ ಬೋಟ್ ಮೂಲಕ ಭಾರತಕ್ಕೆ ಒಳನುಸುಳಬಹುದು ಎಂಬ ಗುಪ್ತಚರ ಎಚ್ಚರಿಕೆ ಬೆನ್ನಲ್ಲೇ, ಮಂಗಳವಾರ ಪಂಜಾಬ್ ಗಡಿ ಭಾಗದ ರಾವಿ ನದಿಯಲ್ಲಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದೆ. ಆದರೆ ಈ ಬೋಟ್ ಖಾಲಿಯಾಗಿದ್ದು, ಇದರಲ್ಲಿ ಬಂದವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಬಿಎಸ್ಎಫ್ ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಾಕಿಸ್ತಾನದ ಸೇನೆಯಲ್ಲಿ ಬಳಸಲಾಗುವ ಬೋಟ್ ಮಾದರಿಯನ್ನೇ ಇದು ಹೋಲುತ್ತಿದ್ದು, ಮತ್ತೆ ಭಾರತದೊಳಗೆ ಉಗ್ರರು ನುಗ್ಗಿದರೇ ಎಂಬ ಆತಂಕ ಸೃಷ್ಟಿಯಾಗಿದೆ.

ಪಾಕಿಸ್ತಾನದ ಉಗ್ರರು ಬೋಟ್ ಮೂಲಕ ಆಗಮಿಸಿ ಭಾರತದೊಳಗೆ ನುಸುಳಿದ್ದಾರೆಯೇ ಎಂಬ ಶಂಕೆ ಈಗ ವ್ಯಕ್ತವಾಗುತ್ತಿದೆ. ಪಂಜಾಬ್‌ನ ರಾವಿ ನದಿಯ ತೀರದಲ್ಲಿ ಬೋಟ್ ಒಂದರಿಂದ ಕೆಲ ವ್ಯಕ್ತಿಗಳು ಇಳಿಯುತ್ತಿರುವುದನ್ನು ನೋಡಿದ್ದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉರಿ ಉಗ್ರ ದಾಳಿಯ ಬಳಿಕ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿರುವ ಸರ್ಜಿಕಲ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ದಾಳಿಗೆ ಯೋಜನೆ ರೂಪಿಸಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಾಶ್ಮೀರ ಗಡಿಯಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಾವಿ ನದಿ ತೀರದಲ್ಲಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದು, ಭಾರಿ ಭದ್ರತೆ ಏರ್ಪಡಿಸಲಾಗಿದೆ.
26/11ರ ನೆನಪು
2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದ ಉಗ್ರರೂ ಬೋಟ್ ಮೂಲಕ ಪಾಕಿಸ್ತಾನದಿಂದ ಆಗಮಿಸಿದ್ದರು. ಮಾರ್ಗ ಮಧ್ಯೆ ಭಾರತೀಯ ಮೀನುಗಾರರ ನೆರವು ಕೇಳುವ ನೆಪದಲ್ಲಿ ಅವರ ಬೋಟ್ ಹತ್ತಿ ಬಳಿಕ ಅವರನ್ನು ಹತ್ಯೆಗೈದಿದ್ದರು. ಆ ಭಾರತದ ಬೋಟ್ ಮೂಲಕವೇ ಅಜ್ಮಲ್ ಕಸಬ್ ಸೇರಿ 8 ಉಗ್ರರು ಮುಂಬೈಗೆ ಆಗಮಿಸಿದ್ದರು. ಈ ಘಟನೆ ಬಳಿಕ ದೇಶಾದ್ಯಂತ ಕರಾವಳಿಯಲ್ಲಿ ಕಟ್ಟೆಚ್ಚರ ಹೆಚ್ಚಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಭಾರತ ಕರಾವಳಿಗೆ ಆಗಮಿಸಲು ಯತ್ನಿಸಿದ ಪಾಕಿಸ್ತಾನದ ಬೋಟ್ ಅನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಅರ್ಧದಲ್ಲೇ ತಡೆದು ನಿಲ್ಲಿಸಿದ್ದರು. ಆ ಸಂದರ್ಭ ಬೋಟ್‌ನಲ್ಲಿದ್ದ ಉಗ್ರರು ಸ್ವತಃ ಸ್ಫೋಟಿಸಿಕೊಂಡು ಸತ್ತಿದ್ದರು. ಈ ಎರಡು ಘಟನೆಗಳ ಹಿನ್ನೆಲೆಯಲ್ಲಿ ಇದೀಗ ಪಂಜಾಬ್ ಗಡಿಯಲ್ಲಿ ಸಿಕ್ಕಿರುವ ಬೋಟ್ ಆತಂಕಕ್ಕೆ ಕಾರಣವಾಗಿದೆ.
9 ಪಾಕ್ ನಾಗರಿಕರ ವಿರುದ್ಧ ಎಫ್ಐಆರ್
ಗುಜರಾತ್ ಕರಾವಳಿ ಬಳಿ ಭಾರತದ ಜಲಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ 9 ನಾಗರಿಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭಾನುವಾರ ಭಾರತದ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನ ಬೋಟ್ ಒಂದನ್ನು ವಶಕ್ಕೆ ಪಡೆದಿದ್ದ ಕರಾವಳಿ ರಕ್ಷಣಾ ಪಡೆ, ಅದರಲ್ಲಿದ್ದ 9 ಜನರನ್ನು ವಶಕ್ಕೆ ಪಡೆದಿತ್ತು. ಬೋಟ್‌ನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಸಾಮಗ್ರಿಗಳು ದೊರೆತಿದ್ದು, ಯಾವುದೇ ಸಂಶಯಾಸ್ಪದ ಅಥವಾ ಸ್ಫೋಟಕ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೀಡಿಯೋ ಬಿಡುಗಡೆಗೆ ಸೇನೆ ಸಿದ್ಧ
ಉರಿ ಮೇಲಿನ ದಾಳಿಯ ಪ್ರತಿಕಾರವಾಗಿ ನಡೆದ ಇಂಡಿಯನ್ ಆರ್ಮಿಯ ಸರ್ಜಿಕಲ್ ಸ್ಟ್ರೈಕ್ ದಾಳಿ ಸಾಕ್ಷ್ಯ ಒದಗಿಸುವಂತೆ ಕೆಲವರು ಕೇಳಿರುವ ಬೆನ್ನಲ್ಲೆ ದಾಳಿ ನಡೆಸಿರುವುದನ್ನು ಸಾಬೀತುಪಡಿಸುವ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಲು ಇಂಡಿಯನ್ ಭಾರತದ ಸೇನೆ ಸಿದ್ಧವಾಗಿದೆ.
ದಾಳಿ ನಡೆಸಿರುವ ಕುರಿತು ವಿಡಿಯೋ ಹಾಗೂ ಇತರೆ ದಾಖಲೆಗಳನ್ನು ಸೇನೆ ಹೊಂದಿದ್ದು, ಈಗಾಗಲೇ ದಾಖಲೆ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದೆಯಂತೆ. ಸರ್ಕಾರದ ಗ್ರೀನ್ ಸಿಗ್ನಲ್‌‌ಗಾಗಿ ಸೇನಾ ಅಧಿಕಾರಿಗಳು ಕಾಯುತ್ತಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದೆಯಾದರೆ ತತ್‌ಕ್ಷಣ ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸೇನೆ ಬಿಡುಗಡೆ ಮಾಡಲಿದೆ ಎಂಬುದಾಗಿ ತಿಳಿದು ಬಂದಿದೆ.
ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ಉಗ್ರರ ಅಡಗು ತಾಣಗಳ ಮೇಲೆ ನಿರ್ಧಿಷ್ಟ ದಾಳಿ ನಡೆಸಿತ್ತು. ಪ್ರಾರಂಭದಲ್ಲಿ ಈ ದಾಳಿ ನಡೆದಿದೆ ಎಂದು ಪಾಕ್ ಒಪ್ಪಿಕೊಂಡಿತ್ತಾದರೂ. ಬಳಿಕ ಕೆಲ ಮಾಧ್ಯಮಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ನಮ್ಮ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂಬುದನ್ನು ಸಾಬೀತು ಪಡಿಸಲು ಪ್ರಯತ್ನಿಸಿದೆ.

ಪ್ರಧಾನಿ ಪರಾಮರ್ಶೆ
ಈ ಮಧ್ಯೆ ಭಾರತದಲ್ಲಿ ವಿವಿಧ ಹಂತದ ಸಮಾಲೋಚನಾ ಸಭೆಗಳು ನಡೆಯುತ್ತಿವೆ.
ಭಾರತ- ಪಾಕ್ ಹತೋಟಿ ರೇಖೆ ದಾಳಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಒಳನುಗ್ಗಿ ಭಯೋತ್ಪಾದಕರ ಮೂಲ ತಾಣಗಳ ಮೇಲೆ ನಿಖರ ದಾಳಿ ನಡೆಸಿದ್ದಕ್ಕೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಹೆಚ್ಚಾಗುತ್ತಿರುವ ಒತ್ತಾಯಗಳ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು.
ಲಡಾಖ್ ಪ್ರವಾಸದಿಂದ ಇಂದು ಹಿಂದಿರುಗಿದ ಗೃಹ ಸಚಿವ ರಾಜನಾಥ್ ಸಿಂಗ್ ಇತರ ಹಿರಿಯ ಸಚಿವರೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿದರು.
ಸೆ. 29 ರಂದು ನಡೆಸಲಾದ ನಿಖರ ದಾಳಿಯ ವೀಡಿಯೋ ದೃಶ್ಯಗಳನ್ನು ಬಹಿರಂಗಗೊಳಿಸುವಂತೆ ಮಾಡಿರುವ ಎಲ್ಲಾ ಮನವಿಗಳನ್ನು ಸರ್ಕಾರ ಈವರೆಗೆ ತಿರಸ್ಕರಿಸಿದೆ. ಉರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸಿ 19 ಮಂದಿ ಯೋಧರನ್ನು ಹತ್ಯೆ ಮಾಡಿದ 15 ದಿನಗಳ ನಂತರ ಪಿಒಕೆಯಲ್ಲಿ ಈ ದಾಳಿ ನಡೆಸಲಾಗಿತ್ತು.
ದಾಳಿಯನ್ನು ನಿರಾಕರಿಸುತ್ತಿರುವ ಪಾಕಿಸ್ತಾನದ ಮುಸುಕು ತೆಗೆಯಲು ವೀಡಿಯೋಗಳನ್ನು ಬಿಡುಗಡೆ ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
`ಕೇಜ್ರಿವಾಲ್ ಸಾಕ್ಷ್ಯಾಧಾರ ಕೇಳುತ್ತಿದ್ದಾರೆ’ ಎಂದು ಪಾಕಿಸ್ತಾನದ ಪತ್ರಿಕೆಗಳು ಬೊಬ್ಬೆ ಹೊಡೆಯುತ್ತಿವೆ. ಎ‌ಎಪಿ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಕೇಜ್ರಿವಾಲ್, ರಾಜಕೀಯ ಮಾಡುತ್ತಿರುವುದು ಬಿಜೆಪಿ, ನಾನು ಕೇಳಿದ್ದಿಷ್ಟೆ. ಪಾಕಿಸ್ತಾನದ ಸುಳ್ಳು ವದಂತಿಗಳ ಮುಸುಕು ತೆಗೆಯುವಂತೆ ಪ್ರಧಾನಿಯವರನ್ನು ಕೋರಿದ್ದೇನೆ. ಹೀಗೆ ಮಾಡಲು ಬಿಜೆಪಿಗೇಕೆ ಭಯ? ಎಂದು ಪ್ರಶ್ನಿಸಿದ್ದಾರೆ.

Comments are closed.