ಕರ್ನಾಟಕ

ಈಶ್ವರಪ್ಪ ಬ್ರಿಗೇಡ್ ಸಮಾವೇಶದ ಅಭೂತಪೂರ್ವ ಯಶಸ್ಸಿನ ನಿರೀಕ್ಷೆ ಹುಸಿ

Pinterest LinkedIn Tumblr

eshಹಾವೇರಿ, ಅ ೧- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಯ ನೆಪದಲ್ಲಿ ಹಿಂದ್ ಸಮಾವೇಶ ನಡೆಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಗುಟುರು ಹಾಕಲು ಕಳೆದ 3 ತಿಂಗಳಿಂದ ಅಹೋ ರಾತ್ರಿ ಶ್ರಮಿಸಿದ ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪನವರ ಇಂದಿನ ಸಮಾವೇಶಕ್ಕೆ ಅಭೂತಪೂರ್ವ ಯಶಸ್ಸು ದೊರೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು.
ಬಿಜೆಪಿ ಕಾರ್ಯಕಾರಿಣಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ನಂತರ, ಯಡಿಯೂರಪ್ಪನವರೊಂದಿಗೆ ಮುನಿಸಿಕೊಂಡು ಅವರೊಂದಿಗೆ ಹಗ್ಗಜಗ್ಗಾಟದಲ್ಲಿ ತೊಡಗಿ ಮುಸುಕಿನ ಗುದ್ದಾಟ ನಡೆಸಿದ್ದ ಈಶ್ವರಪ್ಪನವರು ಹಿಂದ್ ಸಮಾವೇಶ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಯ ಕನಸು ಕಂಡು ಅದನ್ನು ನನಸು ಮಾಡಲು, 3 ತಿಂಗಳಿಂದ ಒಂದಿಲ್ಲಒಂದು ಹೇಳಿಕೆ ನೀಡುತ್ತಾ ಅಪಾರ ಬೆಂಬಲದ ನಿರೀಕ್ಷೆಯ ಆಸೆಯ ಮೂಟೆ ಹೊತ್ತಿದ್ದರು.
ಹಲವಾರು ಕಾರಣಗಳಿಂದ ಸಮಾವೇಶವನ್ನು ಮುಂದೂಡುತ್ತಾ ಬಂದು, ಇಂದು ನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಿದ್ದ ರಾಯಣ್ಣ ಬ್ರಿಗೇಡ್ ಸಮಾವೇಶ ನ ಭೂತೋ ನ ಭವಿಷ್ಯದ ಸಮಾವೇಶವಾಗಲಿದೆ ಎಂಬ ಈಶ್ವರಪ್ಪನವರ ಆಸೆಯ ಮೂಟೆಗೆ ಇಂದು ಸೂಜಿ ಚುಚ್ಚಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅದಕ್ಕೆ ಕಾರಣವೆಂದರೆ ಮೊದಲಿನಿಂದಲೂ ಲಕ್ಷಾಂತರ ಜನರು ಸೇರುತ್ತಾರೆಂದು ಈಶ್ವರಪ್ಪನವರು ಹೇಳಿಕೆಗಳನ್ನು ನೀಡುತ್ತಾ ಬಂದರಾದರೂ, ಇಂದು ಸೇರಿದ್ದು ಮಾತ್ರ ಕೇವಲ 10 ರಿಂದ 15 ಸಾವಿರ ಜನ. ನೂರಾರು ಮಠಾಧೀಶರು, ಹಿಂದುಳಿದ ವರ್ಗದ ಮುಖಂಡರು ಆಗಮಿಸುವ ಲೆಕ್ಕಾಚಾರದಲ್ಲಿದ್ದ ಈಶ್ವರಪ್ಪನವರ ಪಕ್ಕಾ ಲೆಕ್ಕಾಚಾರ ಇಲ್ಲಿ ಕಚ್ಚಾ ಎನಿಸಿಕೊಂಡಿತು.
ಯಾವೊಬ್ಬ ಮಠಾಧೀಶರು ಸಮಾವೇಶದತ್ತ ಸುಳಿಯದಿರುವುದು, ಹಿಂದುಳಿದ ಗಣ್ಯಾತಿಗಣ್ಯರು ಮುಖಂಡರು ಸಮಾವೇಶಕ್ಕೆ ಆಗಮಿಸದಿರುವುದು ಎದ್ದು ಕಾಣುತ್ತಿತ್ತು. ಹಿಂದ್ ಸಮಾವೇಶದ ಹಿಂದೆ ಲಕ್ಷಾಂತರ ಜನರ ಬೆಂಬಲವಿದೆ ಎಂಬ ಈಶ್ವರಪ್ಪನವರ ನಿರೀಕ್ಷೆಯ ಪರೀಕ್ಷೆ ಸಫಲವಾಗಲಿಲ್ಲ.
ಸಮಾವೇಶಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲೂ ಬಿಜೆಪಿಯ ಸ್ಥಳೀಯ ಮುಖಂಡ, ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೊರತು ಪಡಿಸಿದರೆ ಪಕ್ಷದ ಯಾವ ಮುಖಂಡರು ಈಶ್ವರಪ್ಪನವರತ್ತ ಹೆಜ್ಜೆ ಹಾಕಿ ಸಮಾವೇಶಕ್ಕೆ ಆಗಮಿಸದಿರುವುದು ಕೂಡ ಸಮಾವೇಶ ಯಶಸ್ವಿ ಎನಿಸಿಕೊಳ್ಳದಿರಲು ಕಾರಣವಾಯಿತು.
ಈ ಸಮಾವೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಟಾಂಗ್ ನೀಡಲು ಯತ್ನ ಮಾಡಿದ್ದ ಈಶ್ವರಪ್ಪನವರ ಕನಸು ಕಮರಿತೆ ಎಂಬುದು ಸೇರಿದ ಜನರಲ್ಲಿಯೇ ಚರ್ಚೆಯ ವಸ್ತುವಾಗಿ ಅಲ್ಲಲ್ಲಿ ಚರ್ಚೆಗಳು ನಡೆದಿರುವ ದೃಶ್ಯಗಳು ಕಂಡು ಬಂದವು.

Comments are closed.