ಕರ್ನಾಟಕ

ಜೆಡಿಎಸ್ ನಾಯಕರ ಭೂ ಕಬಳಿಕೆ ಆರೋಪ: ತನಿಖೆಗೆ ಶೆಟ್ಟರ್ ಆಗ್ರಹ 

Pinterest LinkedIn Tumblr

Jagadish-shettar1

ಬೆಂಗಳೂರು, ಸೆ. ೩೦- ಬೆಂಗಳೂರು ನಗರ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ಅಡಿಗಾರಕಲ್ಲಹಳ್ಳಿಯಲ್ಲಿ ೬೭ ಎಕರೆ ಸರ್ಕಾರಿ ಭೂಮಿಯನ್ನು ಜೆಡಿಎಸ್ ಮುಖಂಡ ಸಿ.ಆರ್. ಮನೋಹರ್ ಸೇರಿ ೪೧ ಮಂದಿ ಪ್ರಭಾವಿಗಳು ಕಬಳಿಸಿದ್ದು, ಈ ಬಗ್ಗೆ ಸರ್ಕಾರ ಸಿಐಡಿ ತನಿಖೆ ನಡೆಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದು ಇಲ್ಲಿ ಆಗ್ರಹಿಸಿದ್ದಾರೆ.
ಅಡಿಗಾರಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ ೪೭ರಲ್ಲಿ ೧೦೩.೩೨ ಎಕರೆ ಜಮೀನಿನಲ್ಲಿ ೬೭ ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಯಾವುದೇ ಭೂ ಮಂಜೂರಾತಿ ಆದೇಶವಿಲ್ಲದೆ ಪೋಡಿ ದುರಸ್ತಿ ಮಾಡಿಕೊಂಡು ಸುಮಾರು ೩೦೦ ಕೋಟಿ ರೂ. ಬೆಲೆಬಾಳುವ ಗೋಮಾಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು
ಒತ್ತುವರಿಯಾದ ಜಮೀನಿನಲ್ಲಿ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘ ರೆಂಕೋ ಬಿಎಚ್‌ಐಎಲ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಮಂಡಳಿ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಸದಸ್ಯರಿಂದ ೨೦೦೯ರಲ್ಲಿ ಸುಮಾರು ೨೪.೬೫ ಕೋಟಿ ರೂ. ಹಣವನ್ನು ಮುಂಗಡವಾಗಿ ಪಡೆದು ಸದಸ್ಯರಿಗೆ ನಿವೇಶನ ನೀಡದೆ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ದೂರಿದರು.
ಕೆಲವು ಸದಸ್ಯರಿಗೆ ನಿರ್ದೇಶನ ಮಂಡಳಿಯು ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ಕಾನೂನು ಬಾಹಿರವಾಗಿ ನಿವೇಶನ ನೋಂದಣಿ ಮಾಡಿಕೊಟ್ಟು ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ನೂರಾರು ಕೋಟಿ ರೂ ವಂಚನೆ ಮಾಡಿದ್ದಾರೆ. ಇದೊಂದು ಬಹುಕೋಟಿ ಹಗರಣವಾಗಿದೆ. ರೆಂಕೋ ಸಂಸ್ಥೆ ತನ್ನ ಸದಸ್ಯರಿಗೆ ನಿವೇಶನ ಹಂಚಿಕೆಗಾಗಿ ನಾಲ್ಕನೇ ಹಂತದ ಬಡಾವಣೆ ನಿರ್ಮಾಣಕ್ಕೆ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ ೨೦೦೬ ಜನವರಿಯಲ್ಲಿ ಸಿಆರ್ ಮನೋಹರ್ ಒಡೆತನದ ಲ್ಯಾನ್ಸ್ ಎಸ್ಟೇಟ್ ಆಂಡ್ ಪ್ರಾಪರ್ಟಿ ಸಂಸ್ಥೆ ೨೫ ಲಕ್ಷ ರೂ.ಮುಂಗಡ ಹಣ ಪಾವತಿಸಿ ೧೨೧ ಕೋಟಿ ರೂ. ಗೆ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದರು.

ವಿ.ಶಂಕರ್ ಕೈವಾಡ
ಈ ಹಗರಣದ ಸಂಬಂಧ ಸೊಸೈಟಿಯ ಸದಸ್ಯರು ಕೆಲವು ದಿನಗಳ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರಿಗೆ ಲಿಖಿತ ದೂರು ನೀಡಿದ್ದರು. ನಂತರ ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಭೂ ದಾಖಲೆಗಳ ಜಂಟಿ ನಿರ್ದೇಶಕರು ಸೇರಿ ಒಟ್ಟು ಐದು ಅಧಿಕಾರಿಗಳ ತಂಡವನ್ನು ರಚಿಸಿ ಈ ಬಗ್ಗೆ ವರದಿ ನೀಡುವಂತೆ ವಿ.ಶಂಕರ್ ಸೂಚಿಸಿದ್ದರು. ಈ ಅಧಿಕಾರಿಗಳು ತನಿಖೆ ನಡೆಸಿ ೨೦೧೬ ಜೂನ್ ೨೦ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ, ಅವ್ಯವಹಾರ ನಡೆದಿರುವುದನ್ನು ತಿಳಿಸಿತ್ತು. ಮಾತ್ರವಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆಯೂ ಕೋರಲಾಗಿತ್ತು. ಆದರೆ ಜಿಲ್ಲಾಧಿಕಾರಿ ಕೇವಲ ೨೪ ಎಕರೆ ಜಮೀನನ್ನು ಮರು ವಶಪಡಿಸಿಕೊಂಡು ಉಳಿದ ೬೭ ಎಕರೆ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಮಾತ್ರವಲ್ಲ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದು ಮನೋಹರ್ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ತಪ್ಪು ಮಾಹಿತಿ ನೀಡಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಈ ಸಂಬಂಧ ಭೂ ದಾಖಲೆಗಳ ಅಧಿಕಾರಿ ಮನೀಶ್ ಮುದ್ಗಲ್ ಅವರು ಕೂಡ ವರದಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದರು. ಆದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶೆಟ್ಟರ್ ಹೇಳಿದರು.
ಈ ಹಗರಣಗಳ ಬಗ್ಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಶೆಟ್ಟರ್, ಸರ್ಕಾರ ಈ ಕೂಡಲೇ ನಿವೇಶನಗಳ ನೋಂದಣಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

Comments are closed.