ಕರ್ನಾಟಕ

ಈಗಿನ ಮೈಸೂರು ಅರಮನೆಯ ಭವ್ಯ ಬಂಗಲೆಯಾಗಲು ಕಾರಣ……. ಗೊತ್ತೇ.?

Pinterest LinkedIn Tumblr

old_mysore_place

ಮೈಸೂರು : ಕರುನಾಡ ಹೆಮ್ಮೆಯ ರಾಜಮನೆತನಗಳಲ್ಲಿ ಮೈಸೂರು ಒಡೆಯರ ವಂಶವೂ ಒಂದು. ಕರ್ನಾಟಕದ ಇಂದಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಗಳ ನಗರಿ ಎಂದು ಖ್ಯಾತವಾಗಿದ್ದೇ ಒಡೆಯರ ಕಾಲದಲ್ಲಿ. ಮೈಸೂರು ದಸರೆಯಷ್ಟೇ ಮೈಸೂರು ಅರಮನೆಯೂ ವಿಶ್ವವಿಖ್ಯಾತ.

ಇಂದು ಎಲ್ಲರ ಮನಸೆಳೆದಿರುವ ಸುಂದರ ಅರಮನೆ ನಿರ್ಮಾಣವಾದದ್ದು 1912ರಲ್ಲಿ. ಇದಕ್ಕೂ ಮುನ್ನ ಮರದಿಂದ ನಿರ್ಮಿಸಲಾಗಿದ್ದ ಅರಮನೆ ಜಯಲಕ್ಷ್ಮಣ್ಣಿಯವರ ಮದುವೆಯ ಸಂದರ್ಭದಲ್ಲಿ 1897ರಲ್ಲಿ ಸುಟ್ಟು ಭಸ್ಮವಾದ ಬಳಿಕ ಈಗಿನ ಅರಮನೆ ನಿರ್ಮಿಸಲಾಯಿತು.

old_mysore_place1

ಕರುನಾಡ ನೆಲದಲ್ಲಿ ಕಟ್ಟಲಾದ ಅತ್ಯಂತ ಇತ್ತೀಚಿನ ಅರಮನೆ ಎಂಬ ಖ್ಯಾತಿಯೂ ಇದಕ್ಕಿದೆ. ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಿಂದ ಒಡಮೂಡಿದ ಈ ಸುಂದರ ಸೌಧ. ಬ್ರಿಟಿಷರು ಭಾರತದಲ್ಲಿ ಬಲವಾದ ಹಿಡಿತ ಹೊಂದಿದ್ದ ಕಾಲದಲ್ಲಿ ಹಾಗೂ ಆಧುನಿಕತೆಯ ಗಾಳಿ ಬೀಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದ ಭವ್ಯ ಬಂಗಲೆ.

ಆ ಸಮಯದಲ್ಲಿ ಒಡೆಯರು ಸ್ವಲ್ಪ ಎಚ್ಚರ ತಪ್ಪಿದ್ದರೂ, ಮೈಸೂರಿನ ಸುಂದರ ಅರಮನೆ ಸಾಂಪ್ರದಾಯಿಕತೆಯಿಂದ ಹೊರತಾಗಿ ಬ್ರಿಟಿಷರ ಮತ್ತೊಂದು ಬಂಗ್ಲೋ ಆಗುವ ಆಪಾಯವಿತ್ತು. ಆದರೆ, ಒಡೆಯರು ವಾಸ್ತುಶಿಲ್ಪ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರು.

ಮೈಸೂರು ಅರಮನೆ72 ಎಕರೆ ಪ್ರದೇಶದಲ್ಲಿ ಹಿಂದೂ, ಇಸ್ಲಾಮಿಕ್ ಹಾಗೂ ಪಾಶ್ಚಿಮಾತ್ಯ ವಾಸ್ತುಶೈಲಿಯ ಸಮ್ಮಿಲನದಿಂದ ವೇಸರ (ಇಂಡೋ ಸಾರ್‌ಸಾನಿಕ್) ಶೈಲಿಯಲ್ಲಿ ಮೈಸೂರು ಅರಮನೆ ಸುಂದರವಾಗಿ ಮೈದಳೆಯಿತು. ವಿಭಿನ್ನ ಸಂಸ್ಕೃತಿಗಳ ಸಂಗಮವಾಯ್ತು. ವಾಸ್ತವವಾಗಿ ಅರಮನೆ ನಿರ್ಮಾಣಕಾರ್ಯ ಆರಂಭವಾಗಿದ್ದು, 1897ರಲ್ಲೇ. ಆಗ ಮೈಸೂರು ಸಂಸ್ಥಾನದ ಆಳ್ವಿಕೆಯ ಹೊಣೆಯನ್ನು ಹೊತ್ತಿದ್ದ ವಾಣಿವಿಲಾಸ ಸನ್ನಿಧಾನ ಬಿರುದಾಂಕಿತರಾದ ಕೆಂಪನಂಜಮ್ಮಣ್ಣಿಯವರು ಅರಮನೆ ನಿರ್ಮಾಣದ ದಿಟ್ಟ ನಿರ್ಧಾರ ತಳೆದರೆಂಬುದು ವಿಶೇಷ ಅಂಶ.

ಈ ಅರಮನೆಗೆ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ನಕಾಶೆ ತಯಾರಿಸಿದರೆಂದು ಇತಿಹಾಸ ಹೇಳುತ್ತದೆ. ಈ ವಾಸ್ತು ವಿನ್ಯಾಸಕ್ಕಾಗಿ ಆತ ಆಗಿನ ಕಾಲದಲ್ಲೇ ೧೨ ಸಾವಿರ ರುಪಾಯಿಗಳನ್ನು ವಾಸ್ತುಶುಲ್ಕವಾಗಿ ಪಡೆದಿದ್ದನಂತೆ. ಅರಮನೆ ನಿರ್ಮಾಣಕ್ಕೆ ಮುನ್ನ ಚಿತ್ರಕಲಾವಿದರನ್ನು ಅಧ್ಯಯನಾರ್ಥ ಯುರೋಪ್ ರಾಷ್ಟ್ರಕ್ಕೆ ಹಾಗೂ ಭಾರತದ ಹೆಸರಾಂತ ಹಳೆಬೀಡು, ಬೇಲೂರು, ತಂಜಾವೂರು, ಮಧ್ಯಪ್ರದೇಶ, ಜಯಪುರ ಸೇರಿದಂತೆ ವಿವಿಧೆಡೆಗೆ ಕಳುಹಿಸಲಾಗಿತ್ತು.

ಉತ್ತರ ಭಾರತ, ದಕ್ಷಿಣ ಭಾರತ , ಪಾಶ್ಚಾತ್ಯ ಹಾಗೂ ಪೌರ್ವಾತ್ಯ ರಾಷ್ಟ್ರಗಳ ವಾಸ್ತು ಶಿಲ್ಪದ ಸಂಗಮವಾದ ಆದರೆ, ದ್ರಾವಿಡ ಮತ್ತು ನಾಗರ ಶೈಲಿಯ ಸಮ್ಮಿಲನವಾದ ಈ ವಿನ್ಯಾಸಕ್ಕೆ ವೇಸರ ಶೈಲಿ ಎಂದು ನಾಮಕರಣ ಮಾಡಲಾಯಿತು. ಇಷ್ಟಾದರೂ ಮೈಸೂರು ಅರಮನೆ ತನ್ನದೇ ಆದ ವಿನೂತನ ಶೈಲಿಯಲ್ಲಿ ಕರ್ನಾಟಕ ಪರಂಪರೆಯನ್ನು ಎತ್ತಿ ಹಿಡಿದಿದೆ. ಕರ್ನಾಟಕದ ಗ್ರಾಮೀಣ ಸೊಗಡಿನ ೧೬ ಅಂಕಣದ ಮನೆ, ತೊಟ್ಟಿ, ಹಟ್ಟಿ ಪದಗಳೂ ಅರಮನೆಯಲ್ಲಿ ಇಂದಿಗೂ ಜೀವಂತವಾಗಿವೆ. ಕರಿಕಲ್ಲು ತೊಟ್ಟಿ, ಗೊಂಬೆತೊಟ್ಟಿ ಅರಮನೆಯ ವರ್ಣನೆಯಲ್ಲಿ ಪ್ರಮುಖವಾಗಿ ಕಾಣುತ್ತವೆ. ಅರಮನೆಯ ನೆಲಹಾಸಿಗೆ ಬಳಸಲಾದ ಕಲ್ಲುಗಳನ್ನು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ನಾಗಲಾಪುರ ಸಮೀಪದಿಂದ ತರಿಸಿಕೊಳ್ಳಲಾಯಿತು.

mysore_art_place1 mysore_art_place

ಮೊದಲೇ ಸುಂದರವಾಗಿರುವ ಮೈಸೂರು ಅರಮನೆಗೆ ಮತ್ತಷ್ಟು ಶೋಭೆ ಬಂದದ್ದು ರಾಜಾ ರವಿವರ್ಮನ ಚಿತ್ರಗಳಿಂದ. ಖ್ಯಾತ ಶಿಲ್ಪಿ ವೆಂಕಟಪ್ಪನವರ ಕೊಡುಗೆಯೂ ಅರಮನೆಗೆ ಅಪಾರವಾಗಿದೆ.

ಹಿಂದೂ ದೇವಾಲಯಗಳ ವಾಸ್ತುಶಿಲ್ಪ, ಮೊಗಲರ ಕಾಲದ ಅರಮನೆಗಳ ರಚನಾ ವಿನ್ಯಾಸ, ಜರ್ಮನಿಯಿಂದ ಎರಕಹೊಯ್ದು ತರಿಸಿದ ಸುಂದರ ಕಂಬಗಳು ಎಲ್ಲಕ್ಕಿಂತ ಮಿಗಿಲಾಗಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳ ಸೌಕರ್ಯವನ್ನೊಳಗೊಂಡ ಅರಮನೆ ಭಾರತದಲ್ಲಿರುವ ಅತ್ಯಂತ ವಿಶಿಷ್ಟ ಹಾಗೂ ಸುಸಜ್ಜಿತ ಅರಮನೆಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಈ ಅರಮನೆಯನ್ನು ಸಂರಕ್ಷಿಸುವ ಹೊಣೆ ಈಗ ಸರಕಾರದ ಮೇಲಿದೆ.

Comments are closed.