
ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲೂ ಸಂಧಾನ ವಿಫಲಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದ ಪಾಲಿಗೆ ನಿರ್ಣಾಯಕ ದಿನವಾಗಲಿದೆ. ಸುಪ್ರೀಂಕೋರ್ಟ್ ಎದುರು ವಿಚಾರಣೆಗೆ ಬರಲಿರುವ “ಕಾವೇರಿ ನೀರು ಹಂಚಿಕೆ ಪ್ರಕರಣ’ ಗಂಭೀರ ತಿರುವು ಪಡೆದುಕೊಳ್ಳುವ ಎಲ್ಲ ಸಾಧ್ಯತೆಯೂ ಇದೆ.
ರಾಜ್ಯ ಸರ್ಕಾರವಂತೂ ಈ ವಿಚಾರದಲ್ಲಿ ಶುಕ್ರವಾರ ಸುಪ್ರೀಂಕೋರ್ಟ್ ನೀಡುವ ತೀರ್ಪು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ. ಆದರೆ, ಸುಪ್ರೀಂಕೋರ್ಟ್ ಎರಡು ಬಾರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಆ ಆದೇಶ ಪಾಲನೆಯಾಗಿಲ್ಲ. ಮತ್ತೂಂದೆಡೆ ಕೇಂದ್ರದ ಮಧ್ಯಸ್ಥಿಕೆಯಲ್ಲೂ ತಾರ್ಕಿಕ ಅಂತ್ಯ ಕಾಣಲಿಲ್ಲ.
ಈ ಜಟಿಲ ಪರಿಸ್ಥಿತಿಯಲ್ಲಿ ಶುಕ್ರವಾರ ಸುಪ್ರೀಂಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ನ್ಯಾಯಾಲಯವು ವ್ಯತಿರಿಕ್ತ ತೀರ್ಪು ನೀಡುವ ಸಾಧ್ಯತೆ ಹೆಚ್ಚಿದೆ. ಆದರೆ, ಇದೆಲ್ಲವೂ ರಾಜ್ಯ ಸರ್ಕಾರ ಶುಕ್ರವಾರ ಕೋರ್ಟ್ ಮುಂದೆ ಮಂಡಿಸಲಿರುವ ನಿಲುವು ಹಾಗೂ ಕೇಂದ್ರ ಸರ್ಕಾರ ಸಂಧಾನ ಸಭೆ ಕುರಿತು ನ್ಯಾಯಾಲಯಕ್ಕೆ ನೀಡುವ ವರದಿಯನ್ನು ಆಧರಿಸಿರುತ್ತದೆ.
ಈ ನಡುವೆ ಕೇಂದ್ರದ ಮಧ್ಯಸ್ಥಿಕೆಯಲ್ಲೂ ಯಾವುದೇ ನಿರ್ಣಯ ಹೊರಬೀಳದ ಹಿನ್ನೆಲೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸುಪ್ರೀಂಕೋರ್ಟ್‌ನ ತೀರ್ಪು ಆಧರಿಸಿ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದೆ.
Comments are closed.