ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರದ ಮಧ್ಯಸ್ಥಿಕೆಯಲ್ಲಿ ಸಭೆಯಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೂರು ಮನವಿಗಳನ್ನ ಮುಂದಿಟ್ಟಿದ್ದಾರೆ.
ವಸ್ತು ಸ್ಥಿತಿ ಅರಿಯಲು ಕೇಂದ್ರದಿಂದ ತಜ್ಞರ ಸಮಿತಿ ಕಳುಹಿಸಲು ಮನವಿ ಮಾಡಿ. ಕಾವೇರಿ ಮೇಲುಸ್ತುವಾರಿ ಅಧ್ಯಕ್ಷರಾಗಿರುವ ಶಶಿಶೇಖರನ್ ಬದಲಾವಣೆ ಕೋರಿಕೊಳ್ಳಬೇಕು. ಸುಪ್ರೀಂಕೋರ್ಟ್ ಮುಂದೆ ಈಗಿರುವ ದ್ವಿಸದಸ್ಯ ಪೀಠ ಬದಲಾಯಿಸುವಂತೆ ವಿನಂತಿಸಿ ಅಂತ ಶೋಭಾ ಕರಂದ್ಲಾಜೆ ಟ್ವಿಟ್ಟರ್‍ನಲ್ಲಿ ಮನವಿ ಮಾಡಿದ್ದಾರೆ. ಈ ಮೂರು ಅಂಶಗಳನ್ನು ರಾಜ್ಯ ಸರ್ಕಾರವು ಕೇಳದೆ ಹೋದರೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವುದು ಮುಂದುವರಿಯುತ್ತದೆ. ಹೀಗಾಗಿ ಈ ಮೂರು ಕೆಲಸಗಳನ್ನು ಇಂದೇ ಮಾಡಿ ಎಂದು ಶೋಭಾ ಮನವಿ ಮಾಡಿದ್ದಾರೆ.
ಇಂದಿನ ಮಧ್ಯಸ್ಥಿಕೆ ಸಭೆಯಲ್ಲಿ ಏನಾಗಬಹುದು?: ಇವತ್ತಿನ ಕೇಂದ್ರದ ಮಧ್ಯಸ್ಥಿಕೆ ಸಭೆಯಲ್ಲಿ ಏನಾಗಬಹುದು ಅಂತ ನೋಡೋದಾದ್ರೆ, ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಪಾಲಿಸಿಲ್ಲ ಅಂತ ಸಭೆಯನ್ನ ತಮಿಳುನಾಡು ಬಹಿಷ್ಕರಿಸಬಹುದು. ಕೇಂದ್ರ ಸರ್ಕಾರ ವ್ಯತಿರಿಕ್ತ ಆದೇಶ ಕೊಟ್ಟಲ್ಲಿ ಎರಡರ ಪೈಕಿ ಒಂದು ರಾಜ್ಯ ತೀರ್ಮಾನವನ್ನು ಒಪ್ಪದಿರಬಹುದು. ಎರಡೂ ರಾಜ್ಯಗಳು ಸಭೆಯ ತೀರ್ಮಾನವನ್ನು ವಿರೋಧಿಸಬಹುದು. ಎರಡು ರಾಜ್ಯಗಳ ನಡುವೆ ಸಮ್ಮತಿ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಇಂದೇ ತೀರ್ಮಾನ ಪ್ರಕಟಿಸದಿರಬಹುದು. ಎರಡು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನವನ್ನು ಸುಪ್ರೀಂಕೋರ್ಟ್‍ನಲ್ಲಿಯೇ ಹೇಳಬಹುದು. ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಿಗೂ ಅಧ್ಯಯನ ತಂಡ ಕಳಿಸಬಹುದು.