ಮಂಗಳೂರು: ವಿದ್ಯುತ್ ಕೈಕೊಟ್ಟಾಗ ಥಟ್ ಅಂತಾ ನೆನಪಿಗೆ ಬರುವುದು ಹಾಗೂ ನಮ್ಮ ಕೈ ಹಿಡಿಯುವ ಮೇಣದ ಬತ್ತಿ. ತಾನು ಕರಗುತ್ತ, ಸುತ್ತಲೆಲ್ಲ ಬೆಳಕು ನೀಡುವ ಮೇಣದ ಬತ್ತಿ ತನ್ನದೆ ಆದ ಸ್ಥಾನ ಉಳಿಸಿಕೊಂಡಿದೆ. ಪುರಾತನ ನಾಗರಿಕರಿಂದಲೂ ನಮಗೆ ಬಳುವಳಿಯಾಗಿ ಸಿಕ್ಕಿರುವಂಥ ವಸ್ತು. ಇದನ್ನು ಇಂಗ್ಲೀಷ್‌ನಲ್ಲಿ ಕ್ಯಾಂಡಲ್ ಎಂದು ಜನರು ಕರೆಯುತ್ತಾರೆ.
ಮೇಣದ ಬತ್ತಿಗೆ ಸುದೀರ್ಘ ಇತಿಹಾಸ ಇದೆ. ಕ್ರಿ.ಪೂ. 3000ರಲ್ಲಿ ಪುರಾತನ ಈಜಿಪ್ಟಿಯನ್ನರು ಕ್ಯಾಂಡಲ್ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ಕ್ರಿ.ಪೂ. 500 ರಲ್ಲಿ ಪುರಾತನ ರೋಮ್‌ನಲ್ಲಿ ಇದನ್ನು ಬಳಸುತ್ತಿದ್ದರು ಎಂಬುದಕ್ಕೆ ದಾಖಲೆಗಳಿವೆ. ಜಾನುವಾರುಗಳ ಕೊಬ್ಬಿನಲ್ಲಿ ಜೊಂಡು ಹುಲ್ಲನ್ನು ಅದ್ದಿ ನಂತರ ಅದನ್ನು ಉರಿಸುತ್ತಿದ್ದರಂತೆ! ಮೇಣದ ಬತ್ತಿಯ ಪರಿಕಲ್ಪನೆ ಹುಟ್ಟಿದ್ದು ಇಲ್ಲಿಂದಲೇ ಎಂಬುದು ಇತಿಹಾಸ ತಜ್ಞರ ವಾದ.
ರೋಮ್ ಮತ್ತು ಇಟಲಿಯಲ್ಲಿ ಆ ಕಾಲದಲ್ಲಿ ಬೆಳಕಿಗಾಗಿ ಎಣ್ಣೆ ದೀಪಗಳನ್ನು ಬಳಸುತ್ತಿದ್ದರು. ಕ್ಯಾಂಡಲ್‌ಗಳು ಈ ದೀಪಗಳಿಗೆ ಪರ್ಯಾಯವಾದವು. ಅಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲೂ ಮೇಣದ ಬತ್ತಿಗಳನ್ನು ಬಳಸಲಾಗುತ್ತಿತ್ತು. ಹೀಗೆ ತಾತ್ಕಾಲಿಕ ಬೆಳಕಿಗಾಗಿ ಬಳಸಲು ಆರಂಭವಾದ ಮೇಣದ ಬತ್ತಿ ಚರಿತ್ರೆ ನಿಜಕ್ಕೂ ಗಮನಾರ್ಹ.
ಆರಂಭದ ದಿನಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದ್ದ ಮೇಣಗಳನ್ನು ಬಳಸಿಯೇ ಮೋಂಬತ್ತಿಗಳನ್ನು ತಯಾರಿಸಲಾಗುತ್ತಿತ್ತು. ಅದು ಪ್ರಾಣಿಗಳ ಕೊಬ್ಬು ಆಗಿರಬಹುದು ಇಲ್ಲವೇ ಮರಗಳು ಸ್ರವಿಸುವ ಮೇಣಗಳಾಗಿರಬಹುದು. ಪುರಾತನ ಭಾರತದಲ್ಲಿ ದೇವಾಲಯಗಳಲ್ಲಿ ದೀಪ ಹಚ್ಚಲು ದಾಲ್ಚಿನ್ನಿ ಚಕ್ಕೆಯ ಎಣ್ಣೆಯಿಂದ ಮಾಡಿದ ಮೇಣವನ್ನು ಬಳಸುತ್ತಿದ್ದರು ಎಂದು ಹೇಳುತ್ತದೆ ಇತಿಹಾಸ.
ಇಂತಹ ಅದ್ಭುತ ಇತಿಹಾಸವುಳ್ಳ ಮೇಣದ ಬತ್ತಿಯ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಸೆ 26 ರಿಂದ 29 ವರೆಗೂ ಬೆಳಗ್ಗೆ 10 ರಿಂದ 7ರವೆಗೂ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದೆ.
ಒಂದು ಮೋಂಬತ್ತಿಯು ಕತ್ತಲೆಯನ್ನು ನೀಗಿಸಿ, ಬೆಳಕನ್ನು ನೀಡಿ, ಬದುಕಿನ ಆಶಾಕಿರಣವನ್ನು ಬೆಳಗಿಸುವುದಷ್ಟೇ ಅಲ್ಲದೆ, ಅದು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವ ಒಂದು ಸಾಧನವಾಗಿದೆ ಮತ್ತು ಭಗವಂತನ ದಯೆ ಹಾಗೂ ಅನುಗ್ರಹವನ್ನು ಕೋರುವ ಒಂದು ಆರಾಧನಾ ಸಾಮಗ್ರಿಯೂ ಕೂಡ ಆಗಿದೆ. ಪತ್ರಿಕಾ ಛಾಯಾಗ್ರಾಹಕರಾದ ಕೆ. ವೆಂಕಟೇಶ್ ಅವರು ಮತ್ತೊಮ್ಮೆ ಮಸೂರಗಳು ಹಾಗೂ ಪ್ರತಿಭೆಯ ಮೂಲಕ ತಮ್ಮ ಮೊಂಬತ್ತಿಯ ಸೃಜನಾತ್ಮಕ ಕಲೆಯನ್ನು ಪ್ರದರ್ಶಿಸಿದ್ದಾರೆ.
ಪರಿಣಿತರಾದ ಛಾಯಾಗ್ರಾಹಕರು, ಬೆಂಗಳೂರಿನಲ್ಲಿ ತೆಗೆದ ಇತ್ತೀಚಿನ ಛಾಯಾಚಿತ್ರಗಳ ಈ ಸಂಗ್ರಹದ ಮೂಲಕ ಮೋಂಬತ್ತಿಗಳು ಕತ್ತಲೆಯನ್ನು ದೂರ ಮಾಡುವುದಕ್ಕೆ ಮತ್ತು ತಮ್ಮ ಫಲಾನುಭವಿಗಳಿಗೆ ದಾರಿಯನ್ನು ತೋರಿಸುವುದಕ್ಕೆ ತಮ್ಮ ಅಸ್ತಿತ್ವವನ್ನೇ ತಾವು ತ್ಯಾಗ ಮಾಡುವುದರಿಂದಾಗಿ ಅವು ಬೆಳಕನ್ನು ನೀಡಲು ಮೇಣವನ್ನು ಕರಗಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದೇನನ್ನೋ ನೀಡುತ್ತವೆ ಎಂಬುದನ್ನು ಪ್ರದರ್ಶಿಸಲು ಬಯಸಿದ್ದಾರೆ.
ಮೋಂಬತ್ತಿಗಳು ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತನ್ನ ಸ್ಥಾನವನ್ನು ಪಡೆದುಕೊಂಡಿವೆ. ಹುಟ್ಟುಹಬ್ಬಗಳು, ಮದುವೆ ಮತ್ತಿತರ ಸಂತೋಷದ ಸಮಾರಂಭಗಳು ಅಥವಾ ಶೋಕತಪ್ತ ಆಚರಣೆಗಳು ಇಂತಹ ವೈಯಕ್ತಿಕ ಸಂದರ್ಭಗಳಲ್ಲಿಯೂ ಕೂಡ ಅವುಗಳನ್ನು ದೈವೀ ಪ್ರಾರ್ಥನೆಗೆ ಬಳಸಲಾಗುತ್ತದೆ.
ಮೊಂಬತ್ತಿಯು ಉರಿಯುತ್ತಿದ್ದಾಗಲೂ ಅದರ ಮೇಣವು ನಿಧಾನವಾಗಿ, ನಿಶ್ಯಬ್ಧವಾಗಿ ಕರಗುತ್ತಾ, ಕತ್ತಲೆಯನ್ನು ದೂರವಿರಿಸಿ ಬೆಳಕನ್ನು ಚೆಲ್ಲುವುದಕ್ಕೆ ತಾನು ಮಾಡುತ್ತಿರುವ ಅತ್ಯುನ್ನತ ತ್ಯಾಗವನ್ನು ಸಂಕೇತರೂಪದಲ್ಲಿ ವ್ಯಕ್ತಪಡಿಸುತ್ತದೆ.
‘ಮೊಂಬತ್ತಿಗಳು ಜನರಿಗೆ ಅತ್ಯಂತ ಆಪ್ತವಾದವುಗಳೆಂಬುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲೂ ವಿಶೇಷವಾಗಿ ದೇವ- ದೇವತೆಯರನ್ನು ತಮ್ಮನ್ನು ಆಶೀರ್ವದಿಸುವಂತೆ ಕೋರುವ ಅಥವಾ ತಮ್ಮ ಬದುಕಿನ ಹೊರೆಯಿಂದ ತಮ್ಮನ್ನು ಮುಕ್ತರನ್ನಾಗಿಸುವಂತೆ ಪ್ರಾರ್ಥಿಸುವ ಪವಿತ್ರ ಸಂದರ್ಭಗಳಲ್ಲಿ ಮೋಂಬತ್ತಿಗಳು ಜನರಿಗೆ ಅತ್ಯಂತ ಪ್ರಿಯವಾದವುಗಳಾಗಿರುತ್ತವೆ.
ಅವು ಸರ್ವರೊಂದಿಗೆ ಅದರಲ್ಲೂ ವಿಶೇಷವಾಗಿ ಪ್ರಕೃತಿ ಹಾಗೂ ಅದರ ಮೂರ್ತರೂಪಗಳೊಂದಿಗೆ ಸೌಹಾರ್ದಯುತವಾಗಿ ಒಂದಾಗಿ ಬಾಳಲು ಪರಸ್ಪರ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಬೆಸೆಯುತ್ತವೆ’ಈ ಮೇಣದ ಬತ್ತಿ.

Comments are closed.