*ಯೋಗೀಶ್ ಕುಂಭಾಸಿ
ಕುಂದಾಪುರ: ಗೆಳೆಯನ ಮದುವೆಯ ಸಂಭ್ರಮವನ್ನು ಮುಗಿಸಿ ಬಂದ ಸಹೋದರರು. ಮನೆಯಲ್ಲಿತ್ತು ಚಿಕ್ಕದೊಂದು ಹಾವು. ಹಾವನ್ನು ನೋಡಿ ಬೆದರಿದ ಅವರಿಬ್ಬರು ಮನೆಗೆ ಬಂದ ಹಾವೊಂದನ್ನು ಹಿಡಿಯಲು ಹೋಗಿ ಆ ಹಾವಿನಿಂದಲೇ ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಚ್ಚಿದ ಹಾವಿನೊಂದಿಗೆ ಎರಡು ಆಸ್ಪತ್ರೆಗೆ ತೆರಳಿದ ಸಹೋದರರಿಬ್ಬರು ಅಲ್ಲಿ ಚಿಕಿತ್ಸೆ ಸಿಗದೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚೇತರಿಸಿಕೊಳ್ಳುತಿದ್ದಾರೆ. ಈ ಕುರಿತಾದ ಒಂದು ಸ್ಟೋರಿಯಿಲ್ಲಿದೆ.
ಆಸ್ಪತ್ರೆಯ ಹಾಸಿಗೆಯಲ್ಲಿ ನೋವನ್ನು ಅನುಭವಿಸುತ್ತಾ ಮಲಗಿರುವ ಸಹೋದರರ ಹೆಸರು ರಾಝಿಕ್ ಅಬ್ಬಕ್ಕರ್ ಸಿದ್ಧಿಕಿ ಹಾಗೂ ಅಮೀನ್ ಅಬುಬಕ್ಕರ್ ಸಿದ್ಧಿಕಿ. ಮೂಲತಃ ಭಟ್ಕಳದವರಾದ ಇವರ ಸ್ನೇಹಿತನ ಮದುವೆ ಸಂಭ್ರಮ ಮುಗಿಸಿ ಮಂಗಳವಾರ ರಾತ್ರಿ ವೇಳೆ ಮನಗೆ ವಾಪಾಸ್ಸಾಗಿದ್ದಾರೆ. ಆದರೇ ಮನೆಯಲ್ಲಿ ಇವರನ್ನು ಸ್ವಾಗತಿಸಿದ್ದು ಒಂದು ಅಡಿ ಉದ್ದದ ತೌಡಾಪಳ್ಕ ಎನ್ನುವ ವಿಷಕಾರಿ ಹಾವು. ಗರಗಸ ಮಂಡಲ ಅಥವಾ ಸಾ ಸ್ಕೇಲ್ ವೈಫರ್ ಎಂದು ಕರೆಯಲ್ಪಡುವ ಈ ವಿಷಕಾರಿ ಹಾವು ನೋಡಲು ಥೇಟ್ ಹೆಬ್ಬಾವಿನಂತೆ ಕಾಣುತ್ತಿತ್ತು. ಮನೆಗೆ ಬಂದ ಹಾವಿನ ಮರಿಯನ್ನು ಹಿಡಿದೇ ತೀರುತ್ತೇವೆಂದು ಹೊರಟ ಸಹೋದರರು ತಂಪು ಪಾನೀಯದ ಬಾಟಲ್ ಒಳಗೆ ಅದನ್ನು ತೂರಿಸಲು ಪ್ರಯತ್ನಿಸುತ್ತಾರೆ. ಇದೇ ವೇಳೆ ಹಾವು ಇಬ್ಬರ ಕೈ ಭಾಗಕ್ಕೆ ಕಡಿದಿದ್ದು ಹರಸಾಹಸ ಪಟ್ಟು ಆ ಹಾವನ್ನು ಬಾಟಲಿಯೊಳಗೆ ತುಂಬಿಸಿದ್ದಾರೆ. ಆದರೇ ಕೈ ನೋಡುವಾಗ ಕಪ್ಪು ಬಣ್ಣದ ಗುಳ್ಳೆಯಾಗಿ ಊದಿಕೊಂಡಿದ್ದು ಕೂಡಲೇ ಸಮೀಪದ ಆಸ್ಪತ್ರೆಗೆ ದೌಡಾಯಿಸುತ್ತಾರೆ.
ನೋವಿನ ಕೈ ಹಿಡಿದುಕೊಂಡೇ ತಮಗೆ ಕಚ್ಚಿದ ಹಾವಿನ ಜೊತೆಗೆ ಭಟ್ಕಳದ ಖಾಸಗಿ ಆಸ್ಪತ್ರೆಗೆ ತೆರಳಿದ ಸಹೋದರರಿಗೆ ಅಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಅಲ್ಲಿಂದ ಭಟ್ಕಳದ ಸರಕಾರಿ ಆಸ್ಪತ್ರೆಗೆ ತೆರಳಿದಾಗ ಅವರು ಈಗ ಆಗಲ್ಲ-ಬೆಳಿಗ್ಗೆ ಬನ್ನಿ ಎಂಬ ಬೇಜವಬ್ದಾರಿಯ ಉತ್ತರ. ಕೊನೆಗೂ ಅದೇ ನೋವಿನಲ್ಲಿ ವಾಹನ ಮಾಡಿಕೊಂಡು ೪೦ಕಿಲೋಮೀಟರ್ ದೂರದ ಕುಂದಾಪುರ ಸರಕಾರಿ ಆಸ್ಪತ್ರೆಗೆ ತಡರಾತ್ರಿ ಬಂದಿದ್ದು ಇಲ್ಲಿನ ವೈದ್ಯಾಧಿಕಾರಿ ಡಾ. ಉದಯಶಂಕರ್ ಅವರು ಇಬ್ಬರಿಗೂ ಸೂಕ್ತ ಚಿಕಿತ್ಸೆ ನೀಡಿದರು.
ಒಟ್ಟಿನಲ್ಲಿ ದೊಡ್ಡದಾಗಿ ಬಂದೆರಗಿದ ಸಮಸ್ಯೆ ಸಣ್ಣದರಲ್ಲೇ ಮುಗಿದು ಹೋಗಿದೆ. ಇಬ್ಬರು ಸಹೋದರರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನೋ ವರಿ ಎನ್ನುವ ಧೈರ್ಯವನ್ನು ಹೇಳಿದ್ದಾರೆ. ಕಚ್ಚಿದ ಹಾವು ಕೂಡ ಅರಣ್ಯಾಧಿಕಾರಿಗಳ ಮೂಲಕ ಸುರಕ್ಷಿತ ಸ್ಥಳವನ್ನು ಸೇರಿದೆ.