ಕರ್ನಾಟಕ

ಕಾವೇರಿ ಕುರಿತ ಸರ್ವಪಕ್ಷಗಳ ಸಭೆ: ಮೂಡದ ಒಮ್ಮತ

Pinterest LinkedIn Tumblr

kaveriಬೆಂಗಳೂರು, ಸೆ. ೨೮- ಇನ್ನೂ ಮೂರು ದಿನಗಳ ಕಾಲ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲು ಸುಪ್ರೀಂಕೋರ್ಟ್ ನೀಡಿರುವ ಸೂಚನೆಯನ್ನು ಪರಿಪಾಲಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂಬುದರ ಬಗ್ಗೆ ನಾಳೆಯವರೆಗೆ ಕಾದು ನೋಡುವ ತಂತ್ರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.ದೆಹಲಿಯಲ್ಲಿ ನಾಳೆ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಕರ್ನಾಟಕ – ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ಫಲಶೃತಿ ಆಧರಿಸಿ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್ ನಿನ್ನೆ ನೀಡಿದ್ದ ಆದೇಶದಂತೆ ಇಂದಿನಿಂದ ಮೂರು ದಿನಗಳ ಕಾಲ ತಲಾ 6 ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕು. ಸದ್ಯ ಈ ಆದೇಶ ಪಾಲನೆ ಬೇಡ. ನಾಳಿನ ಎರಡೂ ರಾಜ್ಯಗಳ ಮುಖ್ಯಮಂತ್ರಿ ಸಭೆಯವರೆಗೂ ಕಾಯೋಣ. ನಂತರ ಮತ್ತೆ ಸಭೆ ಸೇರಿ ನೀರು ಬಿಡುಗಡೆಯ ಬಗ್ಗೆ ತೀರ್ಮಾನಕ್ಕೆ ಬರೋಣ ಎಂಬ ಸಲಹೆಗೆ ಸರ್ವಪಕ್ಷ ಸಭೆ ಸಮ್ಮತಿ ವ್ಯಕ್ತಪಡಿಸಿದೆ.
ಜನರ ಭಾವನೆಗಳಿಗೆ ಬೆಲೆ ಕೊಟ್ಟು, ಜತೆಗೆ ನೀರಿನ ಕೊರತೆ ಇರುವುದನ್ನೂ ಮನಗಂಡು ವಿಧಾನಸಭೆಯಲ್ಲಿ ನೀರು ಬಿಡದಿರುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅದಕ್ಕೆ ಬದ್ಧರಾಗಿವುದು ಸೂಕ್ತ ಎಂಬ ನಿಲುವಿಗೂ ಸರ್ವಪಕ್ಷ ಸಭೆ ಬಂದಿದೆ.
ಇಂದಿನ ಸರ್ವಪಕ್ಷ ಸಬೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಸದ್ಯಕ್ಕೆ ನೀರು ಬಿಡುವುದು ಬೇಡ. ನಾಳಿನ ಸಭೆ ಏನಾಗುತ್ತೊ ನೋಡೋಣ. ಒಂದು ದಿನದಲ್ಲಿ ಆಕಾಶ ತಲೆಯ ಮೇಲೆ ಬೀಳುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸದ್ಯಕ್ಕೆ ನೀರು ಬಿಡದಿರುವ ತೀರ್ಮಾಣಕ್ಕೆ ಎಲ್ಲರೂ ಬದ್ಧರಾಗಿರೋಣ ಎಂಬ ವಾದವನ್ನು ಮಂಡಿಸಿತ್ತು.
ವಿಪಕ್ಷಗಳ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ , ಸಚಿವ ಸಂಪುಟ ಸಭೆಯಲ್ಲಿ ಸರ್ವಪಕ್ಷ ಸಭೆಯ ತೀರ್ಮಾನವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತಿರಸ್ಕಾರ
ಇಂದಿನ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಪರ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುವ ವಕೀಲರು, ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂಬ ಸಲಹೆ ನೀಡಿದರಾದರೂ ಈ ಸಲಹೆಯನ್ನು ಸರ್ವಪಕ್ಷ ಸಭೆ ತಿರಸ್ಕರಿಸಿತು ಎನ್ನಲಾಗಿದೆ. ಸದನದಲ್ಲಿ ನಿರ್ಣಯ ಮಾಡಿದ್ದೇವೆ. ಈಗ ನೀರು ಬಿಡುವುದು ಸರಿಯಲ್ಲ ಎಂಬ ವಿಪಕ್ಷಗಳ ವಾದಕ್ಕೆ ಸಭೆಯಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.
ವಾದ-ಪ್ರತಿವಾದ, ಕಾನೂನಿನ ಸಾಧಕ-ಬಾಧಕಗಳನ್ನು ಎಲ್ಲವನ್ನೂ ಸುದೀರ್ಘವಾಗಿ ಚರ್ಚಿಸಿದ ನಂತರ, ಸರ್ವಪಕ್ಷ ಸಭೆ ನಾಳೆಯವರೆಗೂ ನೀರು ಬಿಡದಿರುವ ತೀರ್ಮಾನಕ್ಕೆ ಬಂದಿದೆ.
ಬಿಎಸ್‌ವೈ ಹೇಳಿಕೆ
ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸರ್ಕಾರ ನಾಳೆ ಕರೆದಿರುವ ಸಭೆಯವರೆಗೂ ನೀರು ಬಿಡದಿರುವ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.
ನಾಳಿನ ತೀರ್ಮಾನ ನೋಡಿಕೊಂಡು ನೀರು ಬಿಡುಗಡೆಯ ಬಗ್ಗೆ ತೀರ್ಮಾನ ಕೈಗೊಳ್ಳೋಣ. ಸದ್ಯಕ್ಕೆ ಸದನದ ನಿರ್ಣಯದಂತೆ ನಡೆದುಕೊಳ್ಳೋಣ ಎಂಬ ಆಗ್ರಹವನ್ನು ಬಿಜೆಪಿ ಮಾಡಿತ್ತು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.
ಜೆಡಿಎಸ್ ಪಕ್ಷದ ವೈ.ಎಸ್.ವಿ. ದತ್ತಾ ಮಾತನಾಡಿ, ತಮಿಳುನಾಡಿಗೆ ನೀರು ಬಿಡದಂತೆ ಸರ್ವಪಕ್ಷ ಸಭೆಯಲ್ಲಿ ಜೆಡಿಎಸ್ ಒತ್ತಾಯಿಸಿದೆ. ನಾಳಿನ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ನಂತರ ಶುಕ್ರವಾರ ಮತ್ತೆ ಸಭೆ ಸೇರಿ ತೀರ್ಮಾನ ಮಾಡೋಣ. ಕಾನೂನು ನಿಂದನೆ, ಎಲ್ಲವನ್ನೂ ಗಮನಿಸಿಯೇ ಸದನದಲ್ಲಿ ನಿರ್ಣಯ ಮಾಡಲಾಗಿದೆ. ಜನರ ಭಾವನೆಗಳಿಗೆ ಬೆಲೆ ಕೊಡಬೇಕು ಎಂಬ ಒತ್ತಾಯವನ್ನು ಜೆಡಿಎಸ್ ಮಾಡಿದೆ ಎಂದರು
ಸಭೆಯಲ್ಲಿ ಪಾಲ್ಗೊಂಡಿದ್ದ ಕಾನೂನು ತಜ್ಞರು ತಮಿಳುನಾಡಿಗೆ ನೀರು ಹರಿಸುವುದು ಒಳ್ಳೆಯದು. ನೀರು ಬಿಡುವುದರಿಂದ ಹಕ್ಕುಚ್ಯುತಿ ಆಗುದಿಲ್ಲ. ಕಾರಣ ನಿರ್ಣಯ ಮಾಡಿದಾಗ ಕಾವೇರಿ ಜಲಾಶಯಗಳಲ್ಲಿ ಸುಮಾರು 27 ಟಿಎಂಸಿ ನೀರು ಇತ್ತು. ಈಗ ಹೆಚ್ಚಿದ ಒಳಹರಿವಿನಿಂದ 31 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಆಗಾಗಿ ಸುಪ್ರೀಂ ಕೋರ್ಟಿ‌ನ ಆದೇಶ ಪಾಲಿಸಬಹುದು ಎಂಬ ಸಲಹೆ ನೀಡಿದರು. ಆದರೆ ಅದನ್ನು ಸರ್ವಪಕ್ಷ ಸಭೆ ಒಪ್ಪಲಿಲ್ಲ. ನಾಳೆಯವರೆಗೂ ನೋಡಿ ಸೂಕ್ತ ತೀರ್ಮಾನ ಕೈಗೊಳ್ಳೋಣ ಎಂಬ ಒತ್ತಾಯ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಎಲ್ಲರದ್ದು ಎಂದರು.
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಸರ್ವಪಕ್ಷ ಸಭೆಯಲ್ಲಿ ಆಗಿರುವ ತೀರ್ಮಾನವನ್ನು ಗಮನಿಸಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಬೇಕೆ, ಬೇಡವೇ ಎಂಬ ಬಗ್ಗೆ ಇಂದು ಮಧ್ಯಾಹ್ನ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಇಂದಿನ ಸರ್ವಪಕ್ಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವರುಗಳಾದ ಅನಂತ್ ಕುಮಾರ್, ಡಿ.ವಿ. ಸದಾನಂದ ಗೌಡ, ರಮೇಶ್ ಜಿಗಜಣಗಿ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರುಗಳಾದ ಎಂ.ಪಾಟೀಲ್, ಎಚ್.ಸಿ.ಮಹದೇವಪ್ಪ, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಸಂಸದರು, ಕಾವೇರಿ ಕಣಿವೆಯ ಶಾಸಕರುಗಳು ಪಾಲ್ಗೊಂಡಿದ್ದರು.

Comments are closed.