ಕರ್ನಾಟಕ

‘ಬಯಲು ಶೌಚ ಮುಕ್ತ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು !

Pinterest LinkedIn Tumblr

mysore

ಮೈಸೂರು: ಸ್ವಚ್ಛ ಭಾರತ ಅಭಿಯಾನದಲ್ಲಿ ‘ಸ್ವಚ್ಛ ನಗರಿ’ ಎಂಬ ಅಗ್ರಪಟ್ಟ ಪಡೆದಿದ್ದ ಮೈಸೂರು ಈಗ ‘ಬಯಲು ಶೌಚ ಮುಕ್ತ ನಗರಿ’ ಎಂಬ ಗೌರವಕ್ಕೂ ಭಾಜನವಾಗಿದೆ.

10 ಲಕ್ಷ ಜನಸಂಖ್ಯೆ ದಾಟಿದ ದೇಶದ ನಗರಗಳ ಪೈಕಿ ಮೈಸೂರು ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಭಾರತೀಯ ಗುಣಮಟ್ಟ ಮಂಡಳಿಯು (ಕ್ಯೂಸಿಐ) 75 ನಗರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು.

‘ಮೈಸೂರಿಗೆ ಎರಡು ಬಾರಿ ಸ್ವಚ್ಛ ನಗರಿಯ ಖ್ಯಾತಿ ಲಭಿಸಿದೆ. ಆ ಖ್ಯಾತಿ ಕಾಪಾಡಿಕೊಳ್ಳಲು ಪಾಲಿಕೆ ವತಿಯಿಂದ ಹಾಕಿಕೊಂಡ ಯೋಜನೆಗಳು ಫಲ ನೀಡುತ್ತಿವೆ. ಮಂಡಳಿ ನೀಡಿರುವ ಬಯಲು ಶೌಚ ಮುಕ್ತ ನಗರಿ ಖ್ಯಾತಿಯು ಆರು ತಿಂಗಳ ಅವಧಿಗೆ ಮಾತ್ರ. ಹೀಗಾಗಿ, ಈ ಗರಿಮೆ ಮುಂದುವರಿಸಿಕೊಂಡು ಹೋಗಲು ಸಾರ್ವಜನಿಕರ ಪಾತ್ರ ಅತ್ಯಗತ್ಯ’ ಎಂದು ಮೇಯರ್‌ಬಿ.ಎಲ್‌.ಭೈರಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೆ. 27ರಂದು ನಗರದ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗುಣಮಟ್ಟ ಮಂಡಳಿಯ ಅಧಿಕಾರಿಗಳು ಪಾಲಿಕೆಗೆ ಸ್ವಚ್ಛತಾ ಪ್ರಮಾಣಪತ್ರ ನೀಡಲಿದ್ದಾರೆ. ಸೆ. 30ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರೋಫಿ ಪ್ರದಾನ ಮಾಡಲಿದ್ದಾರೆ.

ಸಮೀಕ್ಷೆ ಹೇಗೆ?: ಗುಣಮಟ್ಟ ಮಂಡಳಿಯ ಅಧಿಕಾರಿಗಳು ರೈಲು ಹಳಿ ಪಕ್ಕದ ಕೊಳಚೆ ಪ್ರದೇಶ, ಕೊಳೆಗೇರಿ, ವಸತಿ ಪ್ರದೇಶಗಳು, ಶಾಲೆ, ಬಸ್‌, ರೈಲು ನಿಲ್ದಾಣ, ವಾಣಿಜ್ಯ ಪ್ರದೇಶಕ್ಕೆ ಭೇಟಿ ನೀಡಿ ತೆಗೆದ ಛಾಯಾಚಿತ್ರ, ವಿಡಿಯೊಗಳನ್ನು ಸಮೀಕ್ಷೆಗಾಗಿ ಸಿದ್ಧಪಡಿಸಿದ್ದ ಆ್ಯಪ್‌ಮೂಲಕ ಕೇಂದ್ರದ ಸರ್ವರ್‌ಗೆ ಅಪ್‌ಲೋಡ್‌ಮಾಡಿದ್ದರು.

ಪಾಲಿಕೆ ವತಿಯಿಂದ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಪರಿಶೀಲಿಸಿದ್ದರು. ಅಲ್ಲದೆ, ವಾರ್ಡ್‌ಗಳ ನಿವಾಸಿಗಳ ಪ್ರತಿಕ್ರಿಯೆ ಪಡೆದಿದ್ದರು.

‘ನಗರದಲ್ಲಿ ಶೇ 99ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ. 425 ಮಂದಿ ಶೌಚಾಲಯಕ್ಕೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆ ವತಿಯಿಂದ ₹ 15 ಸಾವಿರ ಸಹಾಯಧನ ನೀಡಲಾಗುತ್ತಿದೆ. 50 ಸಾರ್ವಜನಿಕ ಶೌಚಾಲಯಗಳಿವೆ’ ಎಂದು ಭೈರಪ್ಪ ಮಾಹಿತಿ ನೀಡಿದರು.

ಮೈಸೂರು ಜೊತೆ ವಿಜಯವಾಡ ಕೂಡ ಈ ಖ್ಯಾತಿ ಪಡೆಯಲು ಸ್ಪರ್ಧೆಯಲ್ಲಿತ್ತು. ಕೊನೆಯ ಹಂತದಲ್ಲಿ ಆ ನಗರಿಯನ್ನು ಹಿಂದಿಕ್ಕುವಲ್ಲಿ ಮೈಸೂರು ಯಶಸ್ವಿಯಾಗಿದೆ
-ಜಿ.ಜಗದೀಶ್, ಆಯುಕ್ತ, ಮೈಸೂರು ಮಹಾನಗರ ಪಾಲಿಕೆ

Comments are closed.