ಕರ್ನಾಟಕ

‘ಕಾವೇರಿ’ಗಾಗಿ ಕರೆಯಲಾದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿದ ಬಿಜೆಪಿ ! ಏಕೆ ಎಂಬುದು ಮುಂದಿದೆ…

Pinterest LinkedIn Tumblr

bjp

ಬೆಂಗಳೂರು: ಕಾವೇರಿ ಜಲಾಶಯದಿಂದ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಇಂದು ಸಂಜೆ ಕರೆಯಲಾಗಿರುವ ಸರ್ವ ಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ.

ಸಂಜೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು, ಕೇಂದ್ರ ಸಚಿವರು, ಸಂಸದರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿತ್ತು.

ಆದರೆ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿ ಪಾಲಿಸದ ಕಾರಣ ಸಭೆಯಿಂದ ದೂರ ಉಳಿಯುವುದೇ ಲೇಸು ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ನಾವು ಕಳೆದ ಸರ್ವಪಕ್ಷ ಸಭೆಯಲ್ಲೇ ತಮಿಳುನಾಡಿಗೆ ನೀರು ಹರಿಸಬಾರದು. ಕಾನೂನಿನ ಸಮಸ್ಯೆ ಏನೇ ಬಂದರೂ ನಿಮ್ಮ ಜೊತೆಗಿರುತ್ತೇವೆ. ರಾಜ್ಯದ ಜನತೆ ಹಾಗೂ ರೈತರ ಹಿತಾಸಕ್ತಿ ಕಡೆಗಣಿಸಿ ನೀರು ಬಿಡುವುದು ಸರಿಯಲ್ಲ ಎಂದು ಪಕ್ಷದ ನಿಲುವನ್ನು ತಿಳಿಸಿದ್ದೆವು. ಆದರೆ ಕಾನೂನು ಅಂಶ ಮುಂದಿಟ್ಟುಕೊಂಡು ಮುಖ್ಯಮಂತ್ರಿ ನೀರು ಹರಿಸಿದ್ದರು. ಇನ್ಯಾವ ಪುರುಷಾರ್ಥಕ್ಕೆ ನಾವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.

ಪ್ರವಾಸದಲ್ಲಿ ಬಿಜೆಪಿ ನಾಯಕರು

ಸಂಜೆ ಸರ್ವಪಕ್ಷ ಸಭೆ ನಡೆಯಲಿದ್ದರೂ ಬಿಜೆಪಿಯ ಬಹುತೇಕ ಮುಖಂಡರು ಈಗಾಗಲೇ ಹೊರರಾಜ್ಯಕ್ಕೆ ಪ್ರವಾಸ ತೆರಳಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೊಲ್ಲೂರು ಪ್ರವಾಸಕ್ಕೆ ತೆರಳಿದ್ದರೆ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಇನ್ನು ಈಶ್ವರಪ್ಪ ಕೂಡ ರಾಜ್ಯ ಪ್ರವಾಸದಲ್ಲಿದ್ದು, ಸಂಸದರು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲೇ ಉಳಿದುಕೊಂಡಿದ್ದಾರೆ. ಈಗಾಗಲೇ ಯಡಿಯೂರಪ್ಪ ಸೂಚಿಸಿರುವಂತೆ ಪಕ್ಷದ ವತಿಯಿಂದ ಯಾರೊಬ್ಬರೂ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಬಾರದು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿರದ ಕಾರಣ ಪಾಲ್ಗೊಳ್ಳದಂತೆ ತಾಕೀತು ಮಾಡಿದ್ದಾರೆ.

ಮುಖ್ಯಮಂತ್ರಿ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದರೆ ಅವರ ಬೆಂಬಲ ಸಂಪೂರ್ಣವಾಗಿ ನಿಲ್ಲೋಣ. ಕಾನೂನಿನ ಮೂಲಕ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ರಾಜ್ಯ ಸರ್ಕಾರ ವಾಸ್ತವಾಂಶಗಳನ್ನು ಮರೆ ಮಾಚಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದರಿಂದಲೇ ನಮಗೆ ಹಿನ್ನಡೆಯಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪ್ರಧಾನಿ ಮಧ್ಯಪ್ರವೇಶ ಮಾಡಲು ಅವಕಾಶವಿಲ್ಲದಿದ್ದರೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ರಾಜ್ಯಸರ್ಕಾರದಿಂದ ನಡೆದಿದೆ. ಹೀಗಾಗಿ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಬಾರದೆಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ.

Comments are closed.