ಕರ್ನಾಟಕ

ಕರ್ನಾಟಕಕ್ಕೆ ಮತ್ತೆ ಹಿನ್ನಡೆ ! ಸೆ.21ರಿಂದ 27ರವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಸೂಚನೆ

Pinterest LinkedIn Tumblr

kaveri

ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮತ್ತೆ ಆರು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕಾವೇರಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠ, ಸೆಪ್ಟೆಂಬರ್ 21ರಿಂದ 27ರವರೆಗೆ ನಿತ್ಯ ಆರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಇದೇ ವೇಳೆ ಕಾವೇರಿ ವಿವಾದ ಸಂಬಂಧ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಮಂಡಳಿ ರಚನೆ ಬಗ್ಗೆ ವಿವರ ನೀಡುವಂತೆ ಸೂಚಿಸಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದಲ್ಲಿ, ತಮಿಳುನಾಡಿಗೆ ಹೆಚ್ಚಿನ ಬಲ ಬಂದಂತೆ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೃಷಿ, ನೀರಾವರಿ ತಜ್ಞರು ಸೇರಿದಂತೆ ಅಧ್ಯಕ್ಷ, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ.

ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ಮಂಡಳಿ ವ್ಯಾಪ್ತಿಗೆ ಸೇರಲಿವೆ. ಈ ಮಂಡಳಿ ನೀರು ಹಂಚಿಕೆ, ಬಿಡುಗಡೆ ಬಗ್ಗೆ ನಿರ್ವಹಣಾ ಮಂಡಳಿಯೇ ತೀರ್ಮಾನ ಕೈಗೊಳ್ಳುತ್ತದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

ರಾಜ್ಯದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು, ತಮಿಳುನಾಡಿಗೆ ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ. ನಮಗೆ ನೀರೇ ಇಲ್ಲ ಎಂದ ಮೇಲೆ ನೀರು ಬಿಡುವುದು ಹೇಗೆ. ಹಾಗಾಗಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕೋರ್ಟ್ ನಿಂದ ಯಾವುದೇ ತಾತ್ಕಾಲಿಕ ಆದೇಶ ಬೇಡ ಎಂದು ಮನವಿ ಮಾಡಿದರು.

ನೀರು ಹಂಚಿಕೆ ವಿಚಾರ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಬಿಡಿ. ಅಪರೂಪಕೊಮ್ಮೆ ಸಾಮಾನ್ಯ ವರ್ಷದಂತೆ ಮಳೆಯಾಗುತ್ತದೆ. ಹೀಗಾಗಿ ಈ ವರ್ಷ ಜಲ ಸಂಕಷ್ಟದ ವರ್ಷ ಎಂದು ಮೇಲುಸ್ತುವಾರಿ ಸಮಿತಿಯೇ ಹೇಳಿದೆ. ಆದಾಗ್ಯೂ 10 ದಿನಗಳ ಕಾಲ ದಿನಂಪ್ರತಿ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಮೇಲುಸ್ತುವಾರಿ ಸಮಿತಿ ಆದೇಶಿಸಿದ್ದು, ಅದನ್ನು ನಾವು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ನಾರಿಮನ್ ತಿಳಿಸಿದರು.

ನಾರಿಮನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು, ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶದಿಂದ ನಾವು ನೊಂದಿದ್ದೇವೆ ಮತ್ತು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ವಾದಿಸಿದರು.

Comments are closed.