ಬೆಂಗಳೂರು, ಸೆ. ೧೩- ಕಾವೇರಿ ನೀರು ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ, ಅದರ ಪರಿಸ್ಥಿತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಿರುವ ಶಕ್ತಿಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ನ ಹಿರಿಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ರಾಜ್ಯದ ರೈತರ ಹಿತದೃಷ್ಟಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ತಕ್ಷಣ ನಿಲ್ಲಿಸಿ ರೈತರ ಹಿತ ಕಾಪಾಡಬೇಕು ಎನ್ನುವ ಸಲಹೆಯ ಜೊತೆಗೆ ಒಂದು ವೇಳೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲಂಘಿಸಿದರೆ, ನ್ಯಾಯಾಂಗ ನಿಂದನೆಯಾಗುವುದಲ್ಲದೆ, ಮಹದಾಯಿ ಸೇರಿದಂತೆ ಭವಿಷ್ಯದ ಕಾನೂನು ಹೋರಾಟಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳೇ ಹೆಚ್ಚಿದ್ದು, ಯಾವುದೇ ಆತುರದ ನಿರ್ಧಾರ ಕೈಗೊಳ್ಳುವ ಮುನ್ನ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ, ನಿರ್ಧಾರ ಕೈಗೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಧರ್ಮಸಿಂಗ್, ಜಾಫರ್ ಶರೀಫ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ, ಹಿರಿಯ ನಾಯಕರು ಹಾಗೂ ಸಚಿವರ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಸಂಪುಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ಕಾವೇರಿ ವಿಚಾರದಲ್ಲಿ ರಾಜೀನಾಮೆ ನೀಡಲು ಮುಂದಾಗುವುದು ಅಥವಾ ನೀರು ಹರಿಸುವ ಸಂಬಂಧ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನೀರು ನಿಲ್ಲಿಸುವುದರಿಂದ ಶಾಶ್ವತ ಪರಿಹಾರವೂ ದೊರಕುವುದಿಲ್ಲ. ಹೀಗಾಗಿ ಸಂಪುಟ ಸಚಿವರೊಂದಿಗೆ ಚರ್ಚಿಸಿ ರಾಜ್ಯದ ಜನರಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳಿ ಎನ್ನುವ ಕಿವಿಮಾತುಗಳನ್ನು ಹಿರಿಯ ನಾಯಕರು, ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ.
ಅಂತರ್ ರಾಜ್ಯ ನದಿ ನೀರಿನ ಸಮಸ್ಯೆಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ಮೇಲೆ ಒತ್ತಡ ಹೇರುವಂತೆ ವ್ಯಕ್ತವಾದ ಸಲಹೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಯಾವಕಾಶ ಕೋರಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರವನ್ನು ಬರೆಯಲು ನಿರ್ಧರಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ನೀರು ಹರಿಸುವುದನ್ನು ನಿಲ್ಲಿಸಿದರೆ, ಭವಿಷ್ಯದ ಕಾನೂನು ಹೋರಾಟಗಳಿಗೆ ತೊಂದರೆಯಾಗಲಿದೆ. ಈ ಹಿನ್ನಲೆಯಲ್ಲಿ ಕಾನೂನನ್ನು ಪಾಲಿಸುವ ಜೊತೆಗೆ ರಾಜ್ಯದ ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಿ ಎಂದು ಸಲಹೆ ನೀಡಿದ್ದಾರೆ.
ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಸದ್ಯ ಎದುರಾಗಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಕಾಪಾಡುವುದು ಹಾಗೂ ರಾಜ್ಯದ ರೈತರ ಹಿತ ಕಾಪಾಡುವ ಸಲಹೆ, ಸೂಚನೆಗಳು ವ್ಯಕ್ತವಾದವು.
ಕರ್ನಾಟಕ
Comments are closed.