ಕರ್ನಾಟಕ

ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ: ಟಿ.ಬಿ.ಜಯಚಂದ್ರ

Pinterest LinkedIn Tumblr

jayachandra-cauveryಬೆಂಗಳೂರು: ಕಾವೇರಿ ಜಲ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಹಾಗೂ ರಾಜ್ಯದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರು ದೆಹಲಿಗೆ ತೆರಳಿದ್ದು, ಸರ್ವೋಚ್ಛ ನ್ಯಾಯಾಲಯ ಹಾಗೂ ಮೇಲುಸ್ತುವಾರಿ ಸಮಿತಿಯ ಮುಂದೆ ರಾಜ್ಯದ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಶನಿವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ತುರ್ತು ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಸೋಮವಾರದಂದು ಮೇಲುಸ್ತುವಾರಿ ಸಮಿತಿ ವಿಚಾರಣೆ ನಡೆಸಲಿದೆ. ಅಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸ ಇದೆ ಎಂದು ಹೇಳಿದರು.
ಕಾವೇರಿ ಜಲ ವಿವಾದ ಎರಡು ನೂರು ವರ್ಷಗಳ ಇತಿಹಾಸವಿರುವ ವಿಷಯವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಅತ್ಯಾವಶ್ಯವಾಗಿದೆ. ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ರಾಜ್ಯದ ಕಾವೇರಿ ಕಣಿವೆಯಿಂದ ತಮಿಳುನಾಡಿಗೆ ಸ್ವಾಭಾವಿಕ ವರ್ಷದಲ್ಲಿ 192 ಟಿಎಂಸಿ ನೀರು ನೀಡಬೇಕಾಗುತ್ತದೆ. ಸಕಾಲಿಕವಾಗಿ ಉತ್ತಮ ಮಳೆಯಾದಲ್ಲಿ ಸರಾಸರಿ 120 ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ. ಆದ್ದರಿಂದ, ಶಿವನ ಸಮುದ್ರ ಹಾಗೂ ಮೇಕೇದಾಟು ಪ್ರದೇಶದಲ್ಲಿ ಜಲಾಶಯಗಳನ್ನು ನಿರ್ಮಿಸಿ, ವಿದ್ಯುತ್ ಉತ್ಪಾದನೆ ಮಾಡುವ ಜೊತೆಗೆ ನೀರನ್ನು ಪುನರ್ಬಳಕೆ ಮಾಡಲು ಅವಕಾಶವಿದೆ.
ತಮಿಳುನಾಡು ಸರ್ಕಾರವು ಹೊಗೇನಿಕಲ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಜಲಾಶಯದಲ್ಲಿ ನೀರು ಸಂಗ್ರಹಿಸಿ ಸದ್ಭಳಕೆ ಮಾಡಿಕೊಳ್ಳಬಹುದು. ನಮ್ಮ ರಾಜ್ಯದ ಶಿವನ ಸಮುದ್ರ ಹಾಗೂ ಮೇಕೇದಾಟು ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸಬಾರದು ಎಂದು ಸಚಿವರು ಮನವಿ ಮಾಡಿದರು.
ಕಾವೇರಿ ಜಲ ವಿವಾದವನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಅಗತ್ಯವಿದ್ದಲ್ಲಿ ಮಾತನಾಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಒಪ್ಪಿಗೆ ಪಡೆದು ಮಧ್ಯ ಪ್ರವೇಶ ಮಾಡುವುದು ಉತ್ತಮ ಬೆಳವಣಿಗೆ ಎಂದು ಜಯಚಂದ್ರ ಹೇಳಿದರು.
ನಮ್ಮ ರೈತರ ಹಿತ ಕಾಪಾಡಲು ರಾಜ್ಯದ ಕಾವೇರಿ ಕಣಿವೆಯಲ್ಲಿ ಜಲಾಶಯಗಳನ್ನು ನಿರ್ಮಿಸಲಾಗಿದೆಯೇ ಹೊರತು ತಮಿಳುನಾಡು ರಾಜ್ಯಕ್ಕೆ ನೀರು ಬಿಡಲು ಅಲ್ಲ. ಕಾವೇರಿ ಜಲ ವಿವಾದದ ಇತಿಹಾಸವನ್ನು ಅವಲೋಕಿಸಿದಾಗ ಎರಡು ಶತಮಾನಗಳಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಕೇಂದ್ರ ಸರ್ಕಾರದಿಂದ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದು ಜಯಚಂದ್ರ ಅವರು ಪುನರುಚ್ಛರಿಸಿದರು.

Comments are closed.