ಬೆಂಗಳೂರು, ಸೆ. ೧೦- ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಮತ್ತು ನೀರು ಬಿಡುತ್ತಿರುವ ಸರ್ಕಾರದ ಕ್ರಮದ ವಿರುದ್ಧ ನಾಡಿನ ರೈತರು ಮತ್ತು ಕನ್ನಡ ಪರ ಸಂಘಟನೆಗಳ ಆಕ್ರೋಶ ಇನ್ನೂ ತಣ್ಣಗಾಗಿಲ್ಲ.
ನಿನ್ನೆಯಷ್ಟೆ ಕರ್ನಾಟಕ ಬಂದ್ ಆಚರಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಸಾರ್ವಜನಿಕರು, ರೈತರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಇಂದೂ ಕಾವೇರಿ ಜಲಾನಯನ ಪ್ರದೇಶದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಮುಂದುವರಿಸಿರುವುದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಮುಂದುವರೆದಿದ್ದು, ನಗರದಿಂದ ಕೆಆರ್‌ಎಸ್‌ವರೆಗೆ ಕಾರ್ ಱ್ಯಾಲಿಯನ್ನೂ ಆರಂಭಿಸಿದ್ದಾರೆ.
ಪ್ರತಿಭಟನೆಗಳು ಮುಂದುವರೆದಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕೆ.ಆರ್.ಎಸ್ ಮುತ್ತಿಗೆ ಹಾಕಲು ನಿನ್ನೆ ಸಂಜೆ ರೈತರು ಮುನ್ನುಗ್ಗಿದ್ದ ಸಂದರ್ಭದಲ್ಲಿ ಅವರನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರದ ಬಗ್ಗೆ ರಾಜ್ಯದೆಲ್ಲೆಡೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ರೈತಾಪಿ ಜನರೂ ಕೂಡ ಸರ್ಕಾರದ ಧೋರಣೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪಾಟೀಲ್-ನಾರಿಮನ್ ಭೇಟಿ
ಈ ನಡುವೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ದೆಹಲಿಯಲ್ಲಿಂದು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ರಾಜ್ಯದ ಪರ ಹಿರಿಯ ವಕೀಲ ಎಫ್.ಎಸ್. ನಾರಿಮನ್ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಮಾಡಿ ಮುಂದಿನ ಕಾನೂನು ಹೋರಾಟ ಕುರಿತಂತೆ ಸುದೀರ್ಘವಾಗಿ ಚರ್ಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್ ತಮಿಳುನಾಡಿಗೆ ಪ್ರತಿನಿತ್ಯ 15 ಸಾವಿರ ಕ್ಯೂಸೆಕ್‌ನಂತೆ 10 ದಿನಗಳ ಕಾಲ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಸುಪ್ರೀಂಕೋರ್ಟ್‌ಗೆ ಶೀಘ್ರ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಅಭಾವದಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಪ್ರದೇಶದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವುದಕ್ಕೂ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿನ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕುರಿತ ವಾಸ್ತವ ಸ್ಥಿತಿ, ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು, ರೈತರ ಆಕ್ರೋಶ ಮತ್ತಿತರ ವಿಚಾರಗಳನ್ನೂ ನಾರಿಮನ್ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ತಮಿಳುನಾಡಿನಲ್ಲಿ ವರ್ಷಕ್ಕೆ ಮೂರು ಬೆಳೆ ಬೆಳೆಯಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಒಂದೇ ಬೆಳೆ ಬೆಳೆಯುತ್ತಿದ್ದೇವೆ. ತಮಿಳುನಾಡಿಗೆ ಸದ್ಯದಲ್ಲೇ ಈಶಾನ್ಯ ಮುಂಗಾರು ಮಳೆ ಬೀಳುವ ಸಾಧ್ಯತೆಗಳಿವೆ. ಮೆಟ್ಟೂರು ಜಲಾಶಯದಲ್ಲೂ ಸಾಕಷ್ಟು ನೀರು ಸಂಗ್ರಹವಾಗಿದೆ. ಈ ಎಲ್ಲ ಅಂಶಗಳನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
ನಾರಿಮನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಚಿವ ಪಾಟೀಲ್ ಅವರು ಸೆ. 12 ರಂದು ನಡೆಯಲಿರುವ ಕಾವೇರಿ ಮೇಲ್ವಿಚಾರಣಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
64 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಗೆ ಕರ್ನಾಟಕದ ಪರವಾಗಿ ಆಕ್ಷೇಪಣಾ ಅರ್ಜಿ ಸಲ್ಲಿಸುವ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಯಾದವ್ ಉಪಸ್ಥಿತರಿದ್ದರು.
ಕರ್ನಾಟಕ
Comments are closed.