ಹುಬ್ಬಳ್ಳಿ: ಒಂದೆಡೆ ಎಲ್ಲ ರಾಜಕಾರಣಿಗಳು ನಮ್ಮದು ರೈತಪರ ಸರ್ಕಾರ, ರೈತರೊಂದಿಗೆ ನಾವಿದ್ದೇವೆ ಎನ್ನುತ್ತಾರೆ. ಇನ್ನೊಂದೆಡೆ ಬೆಳೆ ಕೈಕೊಟ್ಟು, ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುವ ರೈತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದನ್ನು ತಡೆಗಟ್ಟಲು ಬೆಂಗಳೂರಿನ ಐಟಿ ಉದ್ಯೋಗಿಗಳಾದ ಗುರುರಾಜ ಪೈ ಹಾಗೂ ನಾಮದೇವ ಶೆಣೈ ತಂಡ ಮುಂದಾಗಿದ್ದು, ಈಗಾಗಲೇ 4 ಲಕ್ಷ ರೂ.ಗೂ ಅಧಿಕ ಆರ್ಥಿಕ ನೆರವನ್ನು ರಾಜ್ಯದ ವಿವಿಧ ರೈತರ ಮನೆ ಬಾಗಿಲಿಗೆ ತಲುಪಿಸಿದೆ.
ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ “ರೈತ ಚೇತನ’ ಎಂಬ ಸಹಾಯವಾಣಿ ಆರಂಭಿಸಿತ್ತು. ಆದರೆ ರೈತ ಚೇತನಕ್ಕೆ ಬಂದ ಕರೆಗಳಲ್ಲಿ ತೀವ್ರ ಸಂಕಷ್ಟ ತೋಡಿಕೊಂಡ ರೈತರಿಗೆ ಆರ್ಥಿಕ ನೆರವು ನೀಡಲು ಕೃಷಿ ವಿವಿ ಹರಸಾಹಸ ಪಡುತ್ತಿತ್ತು. ಅಲ್ಲಿಗೆ ಬಂದ ಕರೆಗಳನ್ನಾಧರಿಸಿ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಒದಗಿಸುವ ಕೆಲಸವನ್ನು ಈ ತಂಡ ಮಾಡುತ್ತಿದೆ. ಇದಕ್ಕಾಗಿ ಸಮಾನ ಮನಸ್ಕರೊಂದಿಗೆ ಭಜನಾ ಮಂಡಳಿ ಆರಂಭಿಸಿದ್ದು, ಅದರ ಮೂಲಕವೇ ರೈತರ ಜೀವನಾಧಾರಕ್ಕೆ ನೆರವು ನೀಡುತ್ತಿದೆ.
12 ಕುಟುಂಬಗಳಿಗೆ ನೆರವು: ರೈತ ಚೇತನ ಸಹಾಯವಾಣಿಗೆ ಸಂಕಷ್ಟ ಹೇಳಿಕೊಂಡು ತಡರಾತ್ರಿ 2 ಗಂಟೆಗೆ, ಬೆಳಗಿನ ಜಾವ 4 ಗಂಟೆಗೆ ಸುಮಾರು 19 ಬಾರಿ ಕರೆ ಮಾಡಿದ್ದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಯ ಚಂದ್ರಶೇಖರ ಗೊರೆಬಾಳಗೆ ನೆರವು ನೀಡುವಂತೆ ಭಜನಾ ಮಂಡಳಿಗೆ ವಿವಿ ತಿಳಿಸಿತ್ತು. ಅದಕ್ಕೊಪ್ಪಿ ಭಜನಾ ಮಂಡಳಿಯಿಂದ 30
ಸಾವಿರ ರೂ.ವೆಚ್ಚದಲ್ಲಿ ಆಕಳು ಕೊಡಿಸಿದ್ದು, ಇದೀಗ ಗೊರೆಬಾಳ ಕುಟುಂಬ ನೆಮ್ಮದಿಯಿಂದ ಬದುಕುತ್ತಿದೆ.
ಟೊಮೆಟೊ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ರಾಮನಗರ ಜಿಲ್ಲೆ ಅಂಗ್ರಳ್ಳಿಯ ರಾಜುಗೆ, ಮತ್ತೆ ಟೊಮೆಟೊ ಬೆಳೆಯಲು ಒಟ್ಟು 30 ಸಾವಿರ ರೂ. ನೀಡಿದೆ. ಬರ-ಬೆಳೆ ನಷ್ಟದಿಂದ ಮಕ್ಕಳ ಓದಿಗೆ ಹಣವಿಲ್ಲದೆ ಪರಿತಪಿಸುತ್ತಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರೈತ ಮಹಿಳೆ ಭಾರತಿ ಸವದಿ ಮಗನ ವ್ಯಾಸಂಗಕ್ಕೆ 25 ಸಾವಿರ ರೂ. ಕೊಟ್ಟಿದೆ.
ಅಧಿಕಾರಿಗಳ ಮೂಲಕ ನೆರವು: ಬೆಂಗಳೂರಿನಲ್ಲಿ ಇನ್ಫೋಸಿಸ್ ಹಾಗೂ ವಿಪ್ರೋದಲ್ಲಿ ಐಟಿ ಉದ್ಯೋಗಿಗಳಾದ ಗುರುರಾಜ ಪೈ ಹಾಗೂ ನಾಮದೇವ ಶೆಣೈ ಧಾರವಾಡ ಕೃಷಿ ವಿವಿ ಅಧಿಕಾರಿಗಳನ್ನು ಸಂಪರ್ಕಿಸಿ ನೊಂದ ರೈತರಿಗೆ
ನೆರವಿನ ಭರವಸೆ ನೀಡಿದ್ದರು. ಕೃಷಿ ವಿವಿ ಮೂಲಕ ನೀಡುವ ನೆರವು ಅರ್ಹರಿಗೆ ಹಾಗೂ ಸಮರ್ಪಕವಾಗಿ ತಲುಪುತ್ತದೆ ಎಂಬ ಉದ್ದೇಶ ಅವರದ್ದಾಗಿತ್ತು. ತಕ್ಷಣವೇ ಸ್ಪಂದಿಸಿದ ಅಧಿಕಾರಿಗಳು ಕೃಷಿ ವಿವಿ ಕುಲಪತಿ ಡಾ|ಡಿ.ಪಿ.ಬಿರಾದಾರ ಅನುಮತಿಯೊಂದಿಗೆ ಇವರ ನೆರವು ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದರು.
ನೀರಿಲ್ಲದೆ ಆಲೂಗಡ್ಡೆ ಬೆಳೆಯಿಂದ ಕೈಸೋತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಬ್ಯಾಲದಾಳು ಮಂಜಾನಾಯ್ಕ ಎಂಬುವವರಿಗೆ ಸಬ್‌ಮರ್ಸಿಬಲ್ ಪಂಪ್ ಖರೀದಿಗೆ 32 ಸಾವಿರ ರೂ. ನೀಡಿದೆ. ಕೊಪ್ಪಳ ಜಿಲ್ಲೆ ಒಡಗನಾರದ ಶರಣಪ್ಪ ಸಂಕರಗೋಡಗುಂಡಿದ, ದಾಳಿಂಬೆ ಬೆಳೆಯಿಂದ ಸಂಕಷ್ಟಕ್ಕೆ ತುತ್ತಾದ ಚಿತ್ರದುರ್ಗದ ಚಿಕ್ಕತೇಕಲವಟ್ಟಿಯ ಮಂಜುನಾಥ,
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನವೇಬಾವನೂರು ಶರಣಪ್ಪ ಪಾಟೀಲರಿಗೆ ಹಣಕಾಸು ನೆರವು ಒದಗಿಸಿದೆ.
ಹುಬ್ಬಳ್ಳಿಯ ವಿವೇಕಾನಂದರಿಗೆ ಡಿಟಿಪಿ ಕೇಂದ್ರ ಆರಂಭಕ್ಕೆ 30 ಸಾವಿರ ರೂ. ಸೇರಿದಂತೆ ಈವರೆಗೆ ಸುಮಾರು 12 ಕುಟುಂಬಗಳಿಗೆ ನೆರವು ಒದಗಿಸಿದೆ. ಸಣ್ಣ ಪ್ರಚಾರವೂ ಇಲ್ಲದೆ ರೈತರಿಗೆ ಸುಮಾರು 4 ಲಕ್ಷ ರೂ.ಗೂ ಅಧಿಕ ನೆರವನ್ನು ಈ ತಂಡ ನೀಡಿದೆ. ಇನ್ನಷ್ಟು ನೆರವಿಗೆ ಸಿದ್ಧ ಎಂದೂ ತಿಳಿಸಿದೆ. ತೀವ್ರ ಸಂಕಷ್ಟದಲ್ಲಿರುವ ರೈತರು ಸಲಹೆ-ಸಮಾಲೋಚನೆಗೆ ರೈತ ಚೇತನ ಕೇಂದ್ರದ ಸಹಾಯವಾಣಿ 18004251150 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಏನಿದು ಟೆಕ್ಕಿಗಳ ಭಜನಾ ಮಂಡಳಿ?
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಸಮಾನ ಮನಸ್ಕರು ಶ್ರೀವೆಂಕಟೇಶ ಭಜನಾ ಮಂಡಳಿ ಹಾಗೂ ಶ್ರೀಕೃಷ್ಣಪ್ರಿಯ ಭಜನಾ ಮಂಡಳಿಗಳನ್ನು ರಚಿಸಿಕೊಂಡಿದ್ದಾರೆ. ಹಬ್ಬ ಹರಿದಿನಗಳಂದು ಒಂದು ಜಾಗದಲ್ಲಿ ಒಟ್ಟಾಗಿ ಸೇರಿ ದೇವರ ಭಜನೆ, ಸಂಕೀರ್ತನೆ ಮಾಡುವುದು, ಸಂಪ್ರದಾಯಗಳನ್ನು ಸಂಭ್ರಮಿಸುವುದು ಇದರ ಮೂಲ ಉದ್ದೇಶ.
ಇದರಲ್ಲಿ ಸುಮಾರು 10-15 ಜನ ಸದಸ್ಯರಿದ್ದು, ನೊಂದವರಿಗೆ ಸಹಾಯ ಮಾಡುವುದು ಈ ಮಂಡಳಿಗಳ ಇನ್ನೊಂದು ಗುರಿ.
ಅರ್ಹರಿಗೆ ಮಾತ್ರ ನೆರವು
ಐಟಿ ಉದ್ಯೋಗಿಗಳಾದ ಗುರುರಾಜ ಪೈ ಹಾಗೂ ನಾಮದೇವ ಶೆಣೈ ಅವರು ಸಂಕಷ್ಟದಲ್ಲಿರುವ ಇನ್ನಷ್ಟು ರೈತರಿಗೆ ನೆರವಿನ ಹಸ್ತ ನೀಡುವ ಭರವಸೆ ನೀಡಿದ್ದಾರೆ. ರೈತ ಚೇತನ ಸಹಾಯವಾಣಿಗೆ ಬಂದ ಕರೆ ಆಧರಿಸಿ ತೀವ್ರ ಸಂಕಷ್ಟದಲ್ಲಿರುವ ರೈತರ ಮಾಹಿತಿ ಪಡೆದು, ಕೃಷಿ ವಿವಿ ಅಧಿಕಾರಿಗಳು ಅವರ ಸ್ಥಳಕ್ಕೆ ಖುದ್ದಾಗಿ ತೆರಳಿ ಪರಿಸ್ಥಿತಿ ಅವಲೋಕಿಸುತ್ತಾರೆ. ನೀಡಿದ ಮಾಹಿತಿ ನಿಖರವಾಗಿದ್ದು, ನೆರವಿಗೆ ಅರ್ಹರಿದ್ದರೆ, ಅಂಥವರಿಗೆ ನೆರವಿಗಾಗಿ ಶಿಫಾರಸು ಮಾಡುತ್ತೇವೆ. ಬೆಂಗಳೂರಿನ ಭಜನಾ ಮಂಡಳಿಯವರು ನೇರವಾಗಿ ರೈತರನ್ನು ಸಂಪರ್ಕಿಸಿಯೂ ಮಾಹಿತಿ ಪಡೆಯುತ್ತಾರೆ. ಜೀವನಾಧಾರಕ್ಕೆ ಪೂರಕವಾಗುವಂತಹ ನೆರವು ಕಲ್ಪಿಸಲಾಗುತ್ತದೆ ಎನ್ನುತ್ತಾರೆ ರೈತ ಚೇತನ
ಸಹಾಯವಾಣಿ ಮುಖ್ಯಸ್ಥ ಡಾ|ಎಂ.ಗೋಪಾಲ್.
ವಿವಿಧ ರೀತಿಯ ನೆರವು: ಕೇವಲ ಹಣದ ನೆರವನ್ನು ಮಾತ್ರ ಈ ತಂಡ ನೀಡುತ್ತಿಲ್ಲ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸುತ್ತಿದೆ. ಕೃಷಿ ಮುಂದುವರಿಸಲು ಆಸಕ್ತ ರೈತರಿಗೆ ಕೊಳವೆ ಬಾವಿ, ಪಂಪ್‌ಸೆಟ್ ಇತ್ಯಾದಿ ಕೃಷಿ ಅಗತ್ಯ
ಪರಿಕರಗಳನ್ನು ಖರೀದಿಸಿ ಕೊಡುತ್ತಿದೆ. ಕೃಷಿಗೆ ಪೂರಕವಾಗಿ ಸ್ವಂತ ಉದ್ಯೋಗ ಮಾಡುವ ಹಂಬಲವುಳ್ಳ ಕೃಷಿಕರಿಗೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತಿದೆ. ಅಲ್ಲಿನ ಕೃಷಿ ಪರಿಸ್ಥಿತಿ, ಅಗತ್ಯತೆಯನ್ನು ಪರಿಶೀಲಿಸಿ ನೆರವನ್ನು
ನಿರ್ಧರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
-ಉದಯವಾಣಿ
Comments are closed.