ಕರ್ನಾಟಕ

ಎಲ್ಲೆಡೆ ಗೌರಿ-ಗಣೇಶ ಹಬ್ಬಕ್ಕೆ ಸಂಭ್ರಮ

Pinterest LinkedIn Tumblr

ganeshಬೆಂಗಳೂರು, ಸೆ ೪- ಗೌರಿ-ಗಣೇಶ ಹಬ್ಬಕ್ಕೆ ಸಂಭ್ರದ ತಯಾರಿ ಆರಂಭವಾಗಿದೆ. ವಿಘ್ನ ನಿವಾರಕನ ಆರಾಧನೆಗಾಗಿ ಎಲ್ಲಾ ಕಡೆ ಸಕಲ ಸಿದ್ಧತೆ ನಡೆಯುತ್ತಿದೆ.

ದೇಶದಲ್ಲೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬವಾದ ಗೌರಿ-ಗಣೇಶ ಹಬ್ಬಕ್ಕೆ ಮಹಿಳೆಯರು ಹಾಗೂ ಯುವಕರು ರಾಜ್ಯದಾದ್ಯಂತ ಸಕಲ ಸಿದ್ದತೆ ನಡೆಸುತ್ತಿರುವುದು ಕಂಡು ಬಂದಿದೆ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಪ್ರತಿ ಮನೆಯಲ್ಲಿ ಹಬ್ಬದ ದಿನ ಗಣಪನಿಗೆ ಪ್ರಿಯವಾದ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡತ್ತ ಮಹಿಳೆಯರು ತಯಾರಿ ಮಾಡುತ್ತಿದ್ದರೆ, ಬೀದಿ ಬದಿ, ರಸ್ತೆಇಕ್ಕೆಲಾಗಳಲ್ಲಿ ಗಣೇಶನನ್ನು ಕುರಿಸಿ ಪೂಜೆಗೈಯಲು ಯುವಕರ ತಂಡ ಇಂದು ಎಲ್ಲೆಡೆ ತಯಾರಿ ಮಾಡುತ್ತಿದ್ದದ್ದು ಕಂಡು ಬಂತು.

ಗಣೇಶ ಮೂರ್ತಿಗಳು ವಿತರಣೆ
ಈ ಬಾರಿ ಬಣ್ಣದ ಗೌರಿ-ಗಣೇಶ ಮೂರ್ತಿಗಳ ಖರೀದಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಕೈ ಸುಟ್ಟುಕೊಳ್ಳವಂತಾಗಿದೆ. ಜೊತೆಗೆ ಕೆಲವು ರಾಜಕಾರಣಿಗಳು, ಸಮಾಜ ಸೇವಕರು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಣೇಶ ಮೂರ್ತಿಗಳನ್ನು ತರಿಸಿ ಸಂಘ-ಸಂಸ್ಥೆಗಳಿಗೆ ಹಾಗೂ ಬಡವರಿಗೆ ಉಚಿತವಾಗಿ ವಿತರಣೆ ಮಾಡುತ್ತಿರುವುದರಿಂದ ವ್ಯಾಪಾರಿಗಳು ಸಂಕಟಕ್ಕೆ ಒಳಗಾಗಿದ್ದಾರೆ.

ಪರಿಸರ ಸ್ನೇಹಿ ಆಚರಣೆಗೆ ಕರೆ
ಪರಿಸರ ಇಲಾಖೆಯು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ ನೀಡಿದೆ. ನೀರಿನ ಸಮಸ್ಯೆ ಇರುವುದರಿಂದ ಜನತೆ ಎಚ್ಚೆತ್ತುಕೊಂಡಿದ್ದಾರೆ. ಬಣ್ಣದ ಗೌರಿ-ಗಣೇಶ ನೀರಿನಲ್ಲಿ ಕರಗುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ, ಪರಿಸರಕ್ಕೂ ಇದರಿಂದ ಹಾನಿ ಎಂದು ಅರ್ಥ ಮಾಡಿಕೊಂಡಿರುವ ನಾಗರಿಕರು ಈ ಬಾರಿ ಜೇಡಿ ಮಣ್ಣಿನಿಂದ ತಯಾರಿಸಿರುವ ಮೂರ್ತಿಗಳನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲದೇ ಈ ಬಾರಿ ವೃಕ್ಷ ಗಣೇಶನ ಖರೀದಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸಲುವಾಗಿ ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ, ಯಥಾ ಪ್ರಕಾರ ಪೂಜಾ ಸಾಮಗ್ರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೆ ಏರಿದೆ.

ಗೌರಿ ವ್ರತ
ಇಂದು ಗೌರಿ ಹಾಗೂ ನಾಳೆ ಆಚರಿಸುವ ಗಣೇಶ ಹಬ್ಬ ಆಚರಣೆಗಾಗಿ ಜನತೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆ ವಿಶ್ರಾಂತಿ ಪಡೆದಿರುವ ಕಾರಣ ಹಬ್ಬಕ್ಕೆ ಶುಭ ವಸಂತವನ್ನು ಕರುಣಿಸುತ್ತಾನೆಂಬ ನಂಬಿಕೆ ಜನರದ್ದಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಮಂಗಳಗೌರಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ನಾಳೆ ನಡೆಯಲಿರುವ ಗಣೇಶನ ಹಬ್ಬಕ್ಕೆ ಬೀದಿ-ಬೀದಿಗಳಲ್ಲಿ ಅಲಂಕಾರಗೊಂಡ ಗಣೇಶನ ಮೂರ್ತಿ ಖರೀದಿ ಭರಾಟೆ ನಡೆದಿದೆ. ಹೆಣ್ಣುಮಕ್ಕಳು ತವರಿನ ನೆನಪಿಗೆ ಆಚರಿಸುವ ಹಬ್ಬ ಎನ್ನುವುದು ಸಂಪ್ರದಾಯದ ಮಾತು. ಹೆಣ್ಮಕ್ಕಳನ್ನು ತವರಿನತ್ತ ಆಕರ್ಷಿಸುವುದರೊಂದಿಗೆ ತಾಯಿ-ಮಗಳು ಇಬ್ಬರು ಪರಸ್ಪರ ಕಾಣುವ, ಬಾಗಿನ ಕೊಡುವ ತವಕ. ಅಲ್ಲದೆ, ಈ ದಿನ ಕೆಲವರು ಸ್ವರ್ಣಗೌರಿ ವ್ರತ ಕೂಡ ಆಚರಿಸುತ್ತಾರೆ.

ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಬೆಂಗಳೂರಿನ ಜನತೆ ಎತ್ತಿದ ಕೈ. ಬೆಳಗ್ಗಿನಿಂದಲೇ ಎಲ್ಲಾ ಮನೆಗಳಲ್ಲಿ ಗೌರಿ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಭಕ್ಷ್ಯಗಳನ್ನಿಟ್ಟು ಸಂಭ್ರಮಿ ಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಮುದ್ದು ಗೌರಿ ಮೂರ್ತಿಗಳ ಹಿಂದೆ ಸಾಲಾಗಿ ಕುಳಿತ ಗಣಪನ ವಿಗ್ರಹಗಳು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದೆ.

Comments are closed.