ಕರ್ನಾಟಕ

ಹಠಾತ್ ಸಂಪುಟ ವಿಸ್ತರಣೆ: ಎಂ.ಕೃಷ್ಣಪ್ಪಗೆ ಒಲಿದ ಅದೃಷ್ಟ, ಕೆಲವರಿಗೆ ಬಡ್ತಿ

Pinterest LinkedIn Tumblr

krishnappaclrಬೆಂಗಳೂರು, ಸೆ. ೪ – ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದಿಢೀರನೆ ಉಂಟಾದ ರಾಜಕೀಯ ಬೆಳವಣಿಗೆಗಳಿಂದ ನಾಳೆ ರಾಜ್ಯ ಸಚಿವ ಸಂಪುಟದ ವಿಸ್ತರಣೆಯಾಗುತ್ತಿದ್ದು, ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಸಚಿವ ಪಟ್ಟ ಒಲಿದು ಬಂದಿದೆ.
ಗಣೇಶ ಚತುರ್ಥಿಯ ಶುಭ ದಿನವಾದ ನಾಳೆ ಸಂಜೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಎಂ. ಕೃಷ್ಣಪ್ಪ ಅವರು ಸಂಪುಟ ದರ್ಜೆಯ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕೃಷ್ಣಪ್ಪಗೆ ವಸತಿ ಖಾತೆ ಭಾಗ್ಯ
ರಾಜ್ಯ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದ್ದು ಸಂಪುಟ ಸೇರಲಿರುವ ವಿಜಯನಗರದ ಶಾಸಕ ಎಂ.ಕೃಷ್ಣಪ್ಪ ಅವರಿಗೆ ವಸತಿ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ವಸತಿ ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ.ಆ ಖಾತೆಯನ್ನು ನೂತನವಾಗಿ ಸಚಿವರಾಗಲಿರುವ ಕೃಷ್ಣಪ್ಪ ಅವರಿಗೆ ನೀಡುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ವಸತಿ ಸಚಿವರಾಗಿದ್ದ ಅಂಬರೀಷ್ ಅವರನ್ನು ಸಮಪುಟದಿಂದ ಕೈಬಿಟ್ಟು ಆ ಖಾತೆಯನ್ನು ತಮ್ಮ ಬಳಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಟ್ಟುಕೊಂಡಿದ್ದರು.

ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಶಾಸಕ ಕೃಷ್ಣಪ್ಪ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ತಾಕೀತು ಮಾಡಿದ್ದರು. ಅದರಂತೆ ನಾಳೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಂ. ಕೃಷ್ಣಪ್ಪ ಅವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ರಾಜ್ಯ ಸಚಿವರಾಗಿರುವ ಎ. ಮಂಜು ಹಾಗೂ ವಿನಯ್ ಕುಲಕರ್ಣಿ ಅವರಿಗೆ ಸಂಪುಟ ದರ್ಜೆಯ ಸಚಿವರಾಗಿ ಪದೋನ್ನತಿ ನೀ‌ಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ನಿಗಮ ಮಂಡಳಿಗಳ ನೇಮಕಾತಿಗೆ ಒತ್ತಡಗಳು ಹೆಚ್ಚಾಗಿದ್ದರೂ ಪಕ್ಷದ ಹೈಕಮಾಂಡ್ ನಿಗಮ ಮಂಡಳಿ ನೇಮಕಾತಿಯನ್ನು ಮುಂದಕ್ಕೆ ಹಾಕಿತ್ತು. ಆದರೆ, ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎಂ. ಕೃಷ್ಣಪ್ಪ ಅವರಿಗೆ ಸಚಿವರಾಗುವ ಅದೃಷ್ಟ ಕೂಡಿ ಬಂದಿದೆ. ಕೊನೆಗೂ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಎಂ. ಕೃಷ್ಣಪ್ಪ ಯಶಸ್ವಿಯಾಗಿದ್ದಾರೆ.
ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಎಂ. ಕೃಷ್ಣಪ್ಪರವರನ್ನು ಸಚಿವರನ್ನಾಗಿಸಲು ಹೈಕಮಾಂಡ್ ಒಪ್ಪಿಗೆ ನೀಡಿತ್ತು. ಆದರೆ, ಪ್ರಭಾವಿ ನಾಯಕರುಗಳು ಇದಕ್ಕೆ ಅಡ್ಡಗಾಲು ಹಾಕಿ ಎಂ. ಕೃಷ್ಣಪ್ಪರವರಿಗೆ ಸಚಿವ ಸ್ಥಾನ ತಪ್ಪಿಸಿದ್ದರು. ಕೃಷ್ಣಪ್ಪರವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಮುಂದೆ ಸಚಿವ ಸ್ಥಾನ ನೀಡುವ ಭರವಸೆ ಹೈಕಮಾಂಡ್‌ನಿಂದ ಕೃಷ್ಣಪ್ಪರವರಿಗೆ ಸಿಕ್ಕಿತ್ತು. ಅದರಂತೆ ಗಣೇಶ ಹಬ್ಬದ ಶುಭ ದಿನದಂದೇ ಎಂ. ಕೃಷ್ಣಪ್ಪ ಇದೇ ಮೊದಲ ಬಾರಿಗೆ ರಾಜ್ಯದ ಸಚಿವ ಪಟ್ಟ ಅಲಂಕರಿಸುತ್ತಿದ್ದಾರೆ.
ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಸೇರಿದಂತೆ ರಾಜ್ಯ ಸಚಿವ ಸಂಪುಟದಲ್ಲಿ 2 ಸ್ಥಾನಗಳು ಖಾಲಿ ಇದ್ದು, ಈಗ ಒಂದು ಸ್ಥಾನಕ್ಕೆ ಎಂ. ಕೃಷ್ಣಪ್ಪರವರಿಗೆ ಸಿಕ್ಕಿದ್ದು, ಖಾಲಿ ಇರುವ ಮತ್ತೊಂದು ಸ್ಥಾನ ಕೆ.ಜೆ. ಜಾರ್ಜ್‌ರವರಿಗೆ ಮೀಸಲಾಗಿದೆ. ಡಿ.ವೈ.ಎಸ್.ಪಿ. ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಸಂಪೂರ್ಣಗೊಂಡು ಕೆ.ಜೆ. ಜಾರ್ಜ್ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಸಾಬೀತಾದರೆ ಜಾರ್ಜ್ ಅವರು ಮತ್ತೆ ಸಚಿವರಾಗಲಿದ್ದಾರೆ.
ಬಡ್ತಿ
ರಾಜ್ಯ ಸಚಿವರಾಗಿರುವ ಎ. ಮಂಜು ಹಾಗೂ ವಿನಯ್ ಕುಲಕರ್ಣಿ ಇವರುಗಳಿಗೆ ಸಂಪುಟ ದರ್ಜೆಯ ಸಚಿವರಾಗುವ ಯೋಗ ಒದಗಿ ಬಂದಿದೆ.
ನಾಳಿನ ಸಂಪುಟ ವಿಸ್ತರಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಇಬ್ಬರೂ ಸಚಿವರನ್ನ ಸಂಪುಟ ದರ್ಜೆ ಸಚಿವರನ್ನಾಗಿ ಪದೋನ್ನತಿ ನೀಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಿದ್ದಾರೆ.

Comments are closed.