ಕರ್ನಾಟಕ

ಸೆ. 19ಕ್ಕೆ ಬದಲು 21ಕ್ಕೆ ಮೇಯರ್ ಚುನಾವಣೆ

Pinterest LinkedIn Tumblr

Resultಬೆಂಗಳೂರು, ಸೆ. ೪ – ಕಾಂಗ್ರೆಸ್ – ಜೆಡಿಎಸ್ ಆಡಳಿತಾರೂಢ ಮೈತ್ರಿಕೂಟದ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಈ ತಿಂಗಳ 19ಕ್ಕೆ ಬದಲಾಗಿ 21ಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಈ ಸಂಬಂಧ ನೂತನ ಮೇಯರ್‌ ಮತ್ತು ಉಪ ಮೇಯರ್ ಸ್ಥಾನಗಳಿಗೆ ಮುಂದಿನ ವಾರ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.
ಮೇಯರ್ ಮಂಜುನಾಥ್‌ರೆಡ್ಡಿರವರ ಅಧಿಕಾರಾವಧಿ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ನೂತನ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಈ ತಿಂಗಳ 19ಕ್ಕೆ ಚುನಾವಣೆ ನಡೆಯಬೇಕಿತ್ತು.
ಆದರೆ, ಬಿಬಿಎಂಪಿ ಈವರೆಗೂ ಮೇಯರ್ ಚುನಾವಣೆ ಸಂಬಂಧ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿಲ್ಲ. ಹಾಗಾಗಿ ಚುನಾವಣೆ ಒಂದೆರಡು ದಿನಗಳವರೆಗೆ ಮುಂದೂಡಲು ಕಾರಣ ಎನ್ನಲಾಗಿದೆ.
ಬಿಬಿಎಂಪಿ ಈಗಾಗಲೇ ಮತದಾರರ ಪಟ್ಟಿಯನ್ನು ಸಲ್ಲಿಸಬೇಕಿತ್ತು. ಆದರೆ, ಇನ್ನೂ ಸಲ್ಲಿಸದೆ ಇರುವುದರಿಂದ ಪ್ರಾದೇಶಿಕ ಆಯುಕ್ತರಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಾಗದು.
ಮತದಾರರ ಪಟ್ಟಿ ಕೈ ಸೇರಿದ ಬಳಿಕ ಪ್ರಾದೇಶಿಕ ಆಯುಕ್ತರು ಪರಿಶೀಲನೆ ನಡೆಸಿ ನಂತರ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು. ಆದರೆ, ಮತದಾರರ ಪಟ್ಟಿ ಸಿಗದೆ ಯಾವುದೇ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ.
ಈ ವಾರಾಂತ್ಯ ಇಲ್ಲವೇ ಮುಂದಿನ ವಾರ ಮತದಾರರ ಪಟ್ಟಿಯನ್ನು ಸಲ್ಲಿಸಲಿದ್ದು, ತದ ನಂತರವೇ ಪ್ರಾದೇಶಿಕ ಆಯುಕ್ತರು ವೇಳಾಪಟ್ಟಿ ಪ್ರಕಟಿಸಲಿದ್ದಾರೆ.
ಈ ಮಧ್ಯೆ ಬಿಬಿಎಂಪಿಯಲ್ಲಿ ಅಧಿಕಾರದ ಸೂತ್ರ ಹಿಡಿಯಲು ವಿವಿಧ ಪಕ್ಷಗಳ ಶಾಸಕರು ಕೂಡ ನಗರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಬಿಬಿಎಂಪಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಇನ್ನೂ ಸಲ್ಲಿಸಲಾಗಿಲ್ಲ ಎಂದು ಕೆಲ ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿ ಸಲ್ಲಿಕೆ ವಿಳಂಬವಾದಲ್ಲಿ ಮೇಯರ್ ಚುನಾವಣೆ ಮತ್ತಷ್ಟು ದಿನಗಳು ಮುಂದೂಡುವ ಸಾಧ್ಯತೆಗಳಿವೆ.
ಈ ಮಧ್ಯೆ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿರವರು ಚುನಾವಣೆಗೆ ಸಂಬಂಧಪಟ್ಟಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ ಹಾಗೂ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ಈ ಮಧ್ಯೆ ಅಧಿಕಾರ ಸೂತ್ರ ಹಿಡಿಯಲು ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಬಿಜೆಪಿ ಅಧಿಕಾರ ಹಿಡಿಯಲು ಕಳೆದ ಬಾರಿ ಆದ ತಪ್ಪು ಈ ಬಾರಿ ಆಗದಂತೆ ಎಚ್ಚರಿಕೆ ಹೆಜ್ಜೆಯನ್ನಿಡಲಿದೆ. ಅಲ್ಲದೆ, ಅಧಿಕಾರದಿಂದ ಕಾಂಗ್ರೆಸ್ ಪಕ್ಷವನ್ನು ದೂರವಿಡಲು ಬಿಜೆಪಿ ವರಿಷ್ಠರು ಜೆಡಿಎಸ್ ವರಿಷ್ಠರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ.
ಮೇಯರ್ ಚುನಾವಣೆಯಲ್ಲಿ ಕೇವಲ 14 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಮೇಯರ್ – ಉಪಮೇಯರ್ ಸ್ಥಾನಗಳಿಗೆ ನಿರ್ಣಾಯಕ ಪಕ್ಷವಾಗಿದೆ.
ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಾವು ಬಿಜೆಪಿ ಇಲ್ಲವೇ ಜೆಡಿಎಸ್‌ನೊಂದಿಗೆ ಕೈ ಜೋಡಿಸಲು ಸಿದ್ಧ ಆದರೆ, ಮೇಯರ್ ಸ್ಥಾನ ತಮಗೆ ನೀಡಬೇಕು ಎಂಬ ಷರತ್ತು ವಿಧಿಸಿರುವುದು ಬಿಜೆಪಿ, ಜೆಡಿಎಸ್ ವರಿಷ್ಠರಿಗೆ ನುಂಗಲಾರದ ತುಪ್ಪವಾಗಿದೆ.
ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿ ಮೇಯರ್ ಸ್ಥಾನ ಬಿಟ್ಟುಕೊಡಲಿದೆಯೇ ಎಂಬುದು ಕನಸಿನ ಮಾತಾಗಲಿದೆ. ಹಾಗೆಯೇ 76 ಸ್ಥಾನಗಳನ್ನು ಹೊಂದಿದ್ದು ಕಾಂಗ್ರೆಸ್ ಕೂ‌ಡ ಮೇಯರ್ ಸ್ಥಾನ ಬಿಟ್ಟು ಕೊಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

Comments are closed.