ಬೆಂಗಳೂರು,ಆ.೨೩- ಭ್ರಷ್ಟಾಚಾರ ಪ್ರಕರಣದಿಂದಾಗಿ ಜನರ ವಿಶ್ವಾಸ ಕಳೆದುಕೊಂಡು ಇದ್ದೂ ಇಲ್ಲದಂತಿದ್ದ ಲೋಕಾಯುಕ್ತ ಸಂಸ್ಥೆ ಮತ್ತೆ ಭ್ರಷ್ಟರ ಬೇಟೆ ಆರಂಭಿಸಿದ್ದು, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳಿಗೆ ಗಾಳ ಹಾಕಿ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ನ್ಯಾ.ಸಂತೋಷ್ ಹೆಗ್ಡೆ ಅವರ ನಂತರ ಲೋಕಾಯುಕ್ತ ಸಂಸ್ಥೆ ಹೇಳಿಕೊಳ್ಳುವಂತಹ ದಾಳಿಗಳನ್ನು ನಡೆಸಿರಲಿಲ್ಲ. ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅವರ ಆದೇಶದಂತೆ ಬೆಂಗಳೂರು ಲೋಕಾಯುಕ್ತ ಅಧಿಕಾರಿ ಅಬ್ದುಲ್ ಹಮೀದ್ ನೇತೃತ್ವದ ತಂಡ ಇಂದು ಬೆಳಗಿನ ಜಾವ ಏಕಕಾಲಕ್ಕೆ ೫ ಕಡೆಗಳಲ್ಲಿ ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದೆ.
ಚೆಕ್‌ಪೋಸ್ಟ್‌ಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಪ್ರಕರಣಗಳ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಬಳ್ಳಾರಿಯ ಹಗರಿ ಬಳಿ ಇರುವ ಚೆಕ್‌ಪೋಸ್ಟ್, ಹೊಸಪೇಟೆಯ ಟಿ.ಬಿ.ಡ್ಯಾಂ ಬಳಿಯ ಚೆಕ್‌ಪೋಸ್ಟ್, ಬೆಂಗಳೂರಿನ ಹೊರವಲಯದ ನಂಗಲಿ ವಾಣಿಜ್ಯ ತೆರಿಗೆ ಚೆಕಪೋಸ್ಟ್, ಮೈಸೂರಿನ ಹೊರವಲಯದ ಚೆಕ್‌ಪೋಸ್ಟ್, ಮುಳಬಾಗಿಲಿನ ವಡ್ಡರಹಳ್ಳಿ ಆರ್‌ಟಿಓ ಚೆಕ್‌ಪೋಸ್ಟ್ ಸೇರಿದಂತೆ ರಾಜ್ಯದ ನಾನಾ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ನಗದು, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆಕ್‌ಪೋಸ್ಟ್‌ಗಳ ಜೊತೆಗೆ ವಾಣಿಜ್ಯ ತೆರಿಗೆ ಕಚೇರಿಗಳು, ಆರ್‌ಟಿಒ ಕಚೇರಿಗಳು ಸೇರಿದಂತೆ ಹಣ ವಸೂಲಿ ಕೇಂದ್ರಗಳ ಮೇಲೆ ಜಿಲ್ಲಾ ಎಸ್‌ಪಿಗಳ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನೆಪದಲ್ಲಿ ಲಕ್ಷಾಂತರ ರೂಪಾಯಿಗಳ ಲಂಚ ವಸೂಲಿ ನಡೆಯುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಬಂದ ಹಲವು ದೂರಿನ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿಯಲ್ಲೂ ದಾಳಿ:
ಆಂಧ್ರದ ಗಡಿಗೆ ಹತ್ತಿರವಿರುವ ಬಳ್ಳಾರಿ ತಾಲೂಕಿನ ಹಗರಿ ಚೆಕ್‌ಪೋಸ್ಟ್ ಮೇಲೆ ಇಂದು ಮುಂಜಾನೆ ೫ ಗಂಟೆಗೆ ಮೈಸೂರು ಲೋಕಾಯುಕ್ತ ಎಸ್‌ಪಿ ರವಿಕುಮಾರ್ ನೇತೃತ್ವದಲ್ಲಿ ೧೦ರಿಂದ ೧೪ ಜನಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿಗಳ ತಂಡವು ದಿಢೀರ್ ದಾಳಿ ನಡೆಸಿದೆ.
ಹಗರಿ ಬಳಿಯಿರುವ ಆರ್‌ಟಿಓ ಮತ್ತು ಸಿಟಿಓ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸದರಿ ಚೆಕ್‌ಪೋಸ್ಟ್‌ನಲ್ಲಿ ಅಪರಾ-ತಪರಾ ದಂಧೆ ನಡೆಯುತ್ತಿರಬಹುದು ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಹೊಸಪೇಟೆ ನಗರದ ಹೊರವಲಯದ ಟಿ.ಬಿ.ಡ್ಯಾಂನ ಬಳಿಯ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿರುವ ಆರ್‌ಟಿಓ ಕಚೇರಿಗೆ ಸೇರಿದ ಚೆಕ್‌ಪೋಸ್ಟ್ ಮೇಲೆ ಹಾಸನ ಲೋಕಾಯುಕ್ತ ಡಿವೈಎಸ್ಪಿ ಪವನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಚಿಕ್ಕಬಳ್ಳಾಪುರದಲ್ಲಿ ನಗದು ವಶ:
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ಇಂದು ಬೆಳಗ್ಗೆ ಬೆಂಗಳೂರಿನ ಲೋಕಾಯಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ದಾಖಲೆಯಿಲ್ಲದ ೧ ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಾಗೇಪಲ್ಲಿ ಬಳಿ ಇರುವ ಚೆಕ್‌ಪೋಸ್ಟ್‌ನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ವರದರಾಜು ಮತ್ತು ಚಾಲಕ ಶ್ರೀನಾಥ್ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಳಬಾಗಿಲಿನ ನಂಗಲಿಯಲ್ಲೂ ದಾಳಿ:
ಮುಳಬಾಗಿಲಿನ ನಂಗಲಿ ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್‌ಗೆ ಮುಂಜಾನೆ ದಾಳಿ ನಡೆಸಿದ ಎಸ್‌ಪಿ ಅಬ್ದುಲ್ ಹಮೀದ್ ನೇತೃತ್ವದ ಅಧಿಕಾರಿಗಳಿಗೆ ಅಕ್ರಮವಾಗಿ ಸಂಗ್ರಹಿಸಿದ್ದ ೧.೫ಲಕ್ಷ ರೂ. ನಗದು ಹಣ ದೊರೆತಿದೆ. ಅಲ್ಲದೆ ಹಣ ವಸೂಲಿಯ ಪುಸ್ತಕಗಳು ರಶೀದಿಗಳೂ ದೊರೆತಿದ್ದು, ಅವುಗಳನ್ನು ಪರಿಶೀಲನೆ ನಡಸಿದ್ದಾರೆ.
ಚೆಕ್‌ಪೋಸ್ಟ್‌ಗಳ ಸಿಬ್ಬಂದಿ ಅಧಿಕಾರಿಗಳು ಮತ್ತು ಲಾರಿ ಚಾಲಕರ ಮಧ್ಯೆ ವ್ಯವಹಾರ ಕುದುರಿಸುವ ಏಜೆಂಟ್‌ಗಳ ಮಾಹಿತಿ ನೀಡಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲು ಶೋಧ ಕಾರ್ಯ ನಡೆಸಲಾಗಿದೆ.
ಪ್ರತಿಷ್ಠಿತ ಸಂಸ್ಥೆಗಳ ಮೇಲೆ ಐಟಿ ದಾಳಿ
ತೆರಿಗೆ ಪಾವತಿಸದ ಪ್ರತಿಷ್ಠಿತ ಸಂಸ್ಥೆಗಳ ಕಚೇರಿಗಳು, ಉದ್ಯಮಿಗಳ ಕಚೇರಿ, ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಯಶವಂತಪುರ, ಮತ್ತಿಕೆರೆ, ಶಾಂತಿನಗರ, ಜ್ಞಾನಭಾರತಿ, ಕೆ.ಆರ್.ಪುರಂ ಇನ್ನಿತರ ಕಡೆಗಳಲ್ಲಿ ಏಕಕಾಲಕ್ಕೆ ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆ, ಪ್ರತಿಷ್ಠಿತ ಉದ್ಯಮಿಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಮುಂಜಾನೆಯಿಂದ ನಡೆಯುತ್ತಿರುವ ದಾಳಿ ಇನ್ನೂ ಮುಂದುವರೆದಿದೆ.
Comments are closed.