ಬೆಂಗಳೂರು: ಶುದ್ಧ ಹಾಲನ್ನುಕುಡಿಯಿರಿ, ಹೊರತು ಹಾಲಿನ ರೂಪದಲ್ಲಿರುವ ಹಾಲಹಲವನ್ನಲ್ಲ. ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಎ೨ ಪ್ರೋಟೀನ್ ದೇಶೀಯ ಹಸುವಿನ ಹಾಲಿನಲ್ಲಿದ್ದು, ಇದು ಅಮೃತಸಮವಾದದ್ದಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಕೆಲವು ತಿಂಗಳುಗಳ ಹಿಂದೆ ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ಮಂಡಿಸಿದ್ದ’ ದೇಶದಲ್ಲಿ ಮಾರಾಟವಾಗುತ್ತಿರುವ ಶೇಕಡಾ 68 ಪ್ರತಿಶತ ಹಾಲು ಬಳಸಲು ಯೋಗ್ಯವಾಗಿಲ್ಲ’ ಎಂಬ ವಿಚಾರವನ್ನು ಉಲ್ಲೇಖಿಸಿದ ಶ್ರೀಗಳು, ಹಾಲು ಶುದ್ಧ ಹಾಲಾಗಿರಬೇಕಾದರೆ, ಹಸುವು ಶುದ್ಧ ಹಸುವಾಗಿರಬೇಕು. ಆದರೆ ಶ್ವೇತಕ್ರಾಂತಿ ಇತ್ಯಾದಿಗಳ ಹೆಸರಿನಲ್ಲಿ ಭಾರತೀಯ ಗೋಸಂಕುಲದ ಕುಲಗೆಡಿಸಲಾಗಿದೆ. ಹಾಲಿನ ಕ್ವಾಂಟಿಟಿ(Quantity) ಹೆಚ್ಚಿಸುವ ಭರದಲ್ಲಿಕ್ವಾಲಿಟಿಯ(Quality) ಕಡೆ ಗಮನವನ್ನೇ ಹರಿಸಿಲ್ಲ. ವಿದೇಶೀ ತಳಿಯೊಂದಿಗೆ ಹೋಲಿಸಿದಾಗ ದೇಶೀಯ ತಳಿಯ ಗೋವು ಕಡಿಮೇ ಹಾಲನ್ನು ನೀಡಿದರು, ಅದು ಸತ್ವಭರಿತವಾದ ಶುದ್ಧಹಾಲನ್ನು ನೀಡುತ್ತದೆ, ಕ್ವಾಂಟಿಟಿ ಗಿಂತ ಕ್ವಾಲಿಟಿ ಬಹುಮುಖ್ಯವಾಗಿದ್ದು ಎಂದು ಆಶಿಸಿದರು.
ಗೋವುಗಳನ್ನು ಉಳಿಸಿ ಬೆಳೆಸುವ ಮೂಲಕ ಕನಿಷ್ಟಪಕ್ಷ ನಮ್ಮ ಮುಂದಿನ ಪೀಳಿಗೆಯಾದರೂ ವಿಷವಲ್ಲದ, ಪರಿಶುದ್ಧವಾದ ಹಾಲನ್ನು ಕುಡಿಯುವಂತಾಗಲಿ. ಗಟ್ಟಿ ಧ್ವನಿಯಲ್ಲಿ ‘ನಮಗೆ ನಿಜವಾದ ಹಾಲು ಬೇಕು’ ಎನ್ನುವ ಮೂಲಕ ಗೋಕ್ರಾಂತಿಗೆ ನಾಂದಿ ಹಾಡೋಣ ಎಂದು ಕರೆ ನೀಡಿದರು.
ಬಳ್ಳಾರಿಯ ಶ್ರೀ ಹಾಲೇಶ್ವರ ಮಠದ ಅಭಿನವ ಶ್ರೀ ಹಾಲವೀರಪ್ಪಜ್ಜ ಹಾಲಸ್ವಾಮಿಗಳು ಸಂತಸಂದೇಶ ನೀಡಿ, ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಸರ್ವೋಪಕಾರಿಯಾದ ಗೋವನ್ನು ಸಾಕುತ್ತಿದ್ದರು, ಆದರೆ ಇಂದು ನಾಯಿಯನ್ನು ಸಾಕುತ್ತಿದ್ದರೆ ಎಂದು ಖೇದ ವ್ಯಕ್ತಪಡಿಸಿದ ಅವರು, ಗೋವಿನಲ್ಲಿ ಬಂಗಾರ ಇದೆ ಎಂದು ಹೇಳಲಾಗುತ್ತಿದೆ, ಅದರೆ ಗೋವನ್ನು ಸಂರಕ್ಷಿಸಿದರೆ ಬದುಕೇ ಬಂಗಾರವಾಗುತ್ತದೆ ಎಂದರು. ಶ್ರೀರಾಮಚಂದ್ರಾಪುರಮಠವು ಗೋವಿನ ಉಳಿವಿಗಾಗಿ ಹೋರಾಡುತ್ತಿದೆ, ಪ್ರತಿ ಮನೆಯಲ್ಲೂ ಗೋವನ್ನು ಸಲಹುವುದರ ಮೂಲಕ ಗೋರಕ್ಷಣೆಗೆ ಕೈಜೋಡಿಸೋಣ ಎಂದು ಕರೆನೀಡಿದರು.
ಗೋ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಬೈರೂಲಾಲ್ ಜೈನ್ ಹಾಗೂ ಗೋವಿನ ಕುರಿತಾದ ಶಿಲಾಶಾಸನಗಳ ಅಧ್ಯಯನದಲ್ಲಿ ನಿರತರಾಗಿರುವ ಡಾ. ಪರಮಶಿವಮೂರ್ತಿ ತುಮಕೂರು ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಡಾ. ಪರಮಶಿವಮೂರ್ತಿ ‘ತುರುಗೋಳ್’ ಶಾಸನಗಳ ಕುರಿತು ವಿವರಗಳನ್ನು ನೀಡಿದರು. ವೇ.ಮೂ. ಸುಬ್ರಾಯ ಭಟ್ ಆರೋಳ್ಳಿ ಅವರು ಸಂಗ್ರಹಿಸಿ, ಶ್ರೀಭಾರತೀಪ್ರಕಾಶನವು ಹೊರತಂದ ‘ಸಾಮ ಕಲ್ಪ ಧೃಮ’ ಪುಸ್ತಕವನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಅಭಿನವ ಶ್ರೀ ಹಾಲವೀರಪ್ಪಜ್ಜ ಹಾಲಸ್ವಾಮಿಗಳು ಲೋಕಾರ್ಪಣೆ ಮಾಡಿದರು. ‘ಗೋಬಂಧು’ವಾಗಿ ಗೋವಿನ ಕರುವನ್ನು ದತ್ತುಪಡೆದ ಚಿ. ಆದಿತ್ಯ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು.
ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಅಶೋಕ ಹುಗ್ಗಣ್ಣನವರ್ ಹಾಗೂ ಸಂಗಡಿಗರಿಂದ ವಿಶೇಷ ಸಂಗೀತ ಕಾರ್ಯಕ್ರಮ ಕಲಾಭಿಮಾನಿಗಳ ಮನರಂಜಿಸಿತು. ಈ ಕಾರ್ಯಕ್ರಮದಲ್ಲಿ ಶ್ರವಣ ಪೋತದಾರ್ ಹಾರ್ಮೋನಿಯಂನಲ್ಲಿ ಹಾಗೂ ಜಗದೀಶ ಕುರ್ತುಕೋಟಿ ತಬಲಾದಲ್ಲಿ ಸಾಥ್ ನೀಡಿದರು.
ಹೊನ್ನಾವರ ಮಂಡಲಾಂತರ್ಗತ ಕರ್ಕಿ, ಕಡ್ಲೆ, ಹೊಸಾಕುಳಿ ವಲಯದವರಿಂದ ಸರ್ವಸೇವೆ ನೆರವೆರಿತು. ಶ್ರೀಮಠದ ಪದಾಧಿಕಾರಿಗಳು, , ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಅರ್ಪಿತಾ ಹೆದ್ಲಿ ಹಾಗೂ ಕೃಷ್ಣಾನಂದ ಶರ್ಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
Comments are closed.