ಬೆಂಗಳೂರು,ಆ.15- ಅನ್ನಭಾಗ್ಯ ಯೋಜನೆಯಡಿ ಬಡತನರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಫಲಾನುಭವಿಗಳಿಗೆ ನೀಡುತ್ತಿರುವ ಅಕ್ಕಿಯನ್ನು ಇನ್ನು ಮುಂದೆ ಒಂದು ಕೆಜಿ ಹೆಚ್ಚುವರಿಯಾಗಿ ವಿತರಣೆ ಮಾಡುವುದರ ಜತೆಗೆ ರಿಯಾಯ್ತಿ ದರದಲ್ಲಿ ತೊಗರಿ ಬೇಳೆ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 29ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಅರ್ಧದಷ್ಟು ಮನ್ನಾ ಮಾಡಿದರೆ ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಅವರು ಘೋಷಣೆ ಮಾಡಿದರು. 70ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್‍ಷಾ ಪರೇಡ್ ಮೈದಾನದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಮುಖ್ಯಮಂತ್ರಿ ಅವರು, ತಮ್ಮ 24 ಪುಟಗಳ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಿದರು.
ಕ್ಷೀರಭಾಗ್ಯ ಯೋಜನೆ ರಾಜ್ಯದ 1.08 ಕೋಟಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ವರದಾನವಾಗಿದೆ. ವಾರಕ್ಕೆ ಮೂರು ದಿನ 150ಮಿಲಿ ಲೀಟರ್ ಕೆನೆ ಭರಿತ ಹಾಲು ವಿತರಿಸುತ್ತಿರುವ ಈ ಯೋಜನೆಯನ್ನು ವಾರಕ್ಕೆ 5ದಿನಗಳಿಗೆ ವಿಸ್ತರಣೆ ಮಾಡಲಾಗುವುದು, ಮಕ್ಕಳ ಮನಸ್ಸಿನಲ್ಲಿ ಅಸಮಾನತೆ ಮತ್ತು ತಾರತಮ್ಯ ಇರಬಾರದೆಂಬ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇತರಗತಿಯ ಎಲ್ಲಾ ಮಕ್ಕಳಿಗೆ ಸಮವಸ್ತ್ರದ ಜತೆಗೆ ಶೂ, ಸಾಕ್ಸ್ ವಿತರಿಸಲು 113 ಕೋಟಿ ರೂ. ಹಣ ಒದಗಿಸಲಾಗಿದೆ ಎಂದು ಹೇಳಿದರು.
ಆತಂಕ:
ದೇಶದಲ್ಲಿ ಇತ್ತೀಚೆಗೆ ದಲಿತರು, ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳಿಗೆ ತೀವ್ರ ಆತಂಕ ವ್ಯಕ್ತಪಡಿಸಿ ಸಿಎಂ, ಇವುಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕೆಂದು ಜನತೆಗೆ ಕರೆಕೊಟ್ಟರು. ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸಮಾಜದಲ್ಲಿ ಇಂದು ಸುರಕ್ಷಿತವಾಗಿ ಬಾಳುವ ಸ್ಥಿತಿಯಲ್ಲಿಲ್ಲ. ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಸಮಾಜಕ್ಕೆ ಅಂಟಿದ ಕಳಂಕ. ಇಂತಹ ಅಮಾನವೀಯ ನಡವಳಿಕೆಗಳ ವಿರುದ್ಧ ನಾವು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಡತನ, ಅನಕ್ಷರತೆ, ಮೂಢನಂಬಿಕೆ, ಜಾತಿಯತೆ, ಕೋಮುವಾದದ ವಿರುದ್ಧ ನಾವೆಲ್ಲರೂ ಸಿಡಿದೇಳಬೇಕೆಂದು ಕರೆಕೊಟ್ಟರು. ಕಳೆದರೆಡು ವರ್ಷಗಳಲ್ಲಿ ರೈತರಿಗೆ ಕೊಡುವಂತಹ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚಾಗಿದೆ. 1800ಕೋಟಿ ರೂ. ನಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿದೆ ಎಂದರು.
ಸಾಧನೆಗಳ ಅನಾವರಣ:
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಸಾಧನೆಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿಎಂ, ಆಯುಷ್ ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿ ಮಾಡಲು ಸರ್ಕಾರ ಉದ್ದೇಶಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಗಳ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಪ್ರಾರಂಭಿಸಲಾಗುವುದು. ಇದರ ಜತೆಗೆ ಮೈಸೂರು ನಗರದಲ್ಲಿ 100 ಹಾಸಿಗೆಗಳ ಹೈಟೆಕ್ ಪಂಚಕರ್ಮ ಆಸ್ಪತ್ರೆ ಮತ್ತು ಅಷ್ಟೇ ಸಾಮಥ್ರ್ಯದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ 8927 ಕಿ.ಮೀ. ರಾಜ್ಯ ಹೆದ್ದಾರಿ ಮತ್ತು 17163ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿ ಮತ್ತು ನವೀಕರಣವನ್ನು ಪೂರ್ಣಗೊಳಿಸಲಾಗಿದೆ. ಗಿರಿಜನ ಉಪಯೋಗಗಳ ಅಡಿಯಲ್ಲಿ 2778ಕಿ.ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು 1668 ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳನ್ನು ಜೋಡಿಸುವ ಸೇತುವೆಗಳನ್ನು ಅಭಿವೃದ್ಧಿಪಡಿಸಲು 1ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಐದು ವರ್ಷಗಳ ಅವಧಿಯಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಬೇಕೆಂದು ನಮ್ಮ ಗುರಿಯಾಗಿತ್ತು. ಈಗಾಗಲೇ 8.5 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಆಶ್ರಯ ಯೋಜನೆಯಡಿ 10.84 ಲಕ್ಷ ಫಲಾನುಭವಿಗಳಿಗೆ ನೀಡಲಾಗಿದ್ದ 1458 ಕೋಟಿ ರೂ. ಸಾಲ ಮತ್ತು 1030ಕೋಟಿ ರೂ. ಬಡ್ಡಿ ಸೇರಿದಂತೆ ಒಟ್ಟು 2488ಕೋಟಿ ರೂ. ಸಾಲ ಮನ್ನ ಮಾಡಲಾಗಿದೆ ಎಂದರು.
ಮುಂದಿನ ಎರಡು ವರ್ಷಗಳಲ್ಲಿ 6ಲಕ್ಷ ಮನೆ ನಿರ್ಮಾಣ ಮತ್ತು 40ಸಾವಿರ ನಿವೇಶನಗಳನ್ನು ಹಂಚುವ ಗುರಿ ಹೋಂದಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1.60ಲಕ್ಷ ಮನೆಗಳು ಹಾಗೂ ನಗರ ಪ್ರದೇಶದಲ್ಲಿ 90ಸಾವಿರ ಮನೆಗಳನ್ನು ಎಸ್ಸಿ- ಎಸ್ಟಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಲ್ಲಿ 7.5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುವುದು. ಇದರಲ್ಲಿ ಫಲಾನುಭವಿಗಳು ಶೇ.80ರಷ್ಟು ಅಂದರೆ 6ಲಕ್ಷ ಅನುದಾನ ನೀಡಲಾಗುವುದು. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂಪೌರ ಕಾರ್ಮಿಕರಿಗೆ 4500 ವಸತಿ ಗೃಹಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಸಿಎಂ ವಾಗ್ದಾನ ಮಾಡಿದರು.
ನಾವೇ ಮೊದಲು:
ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಜೂನ್ ತಿಂಗಳ ವರೆಗೆ ರಾಜ್ಯಕ್ಕೆ ಒಟ್ಟು 67757 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ಇಡೀ ದೇಶದಲ್ಲೇ ನಾವೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಫೆಬ್ರವರಿಯಲ್ಲಿ ನಡೆದ ಇನ್‍ವೆಸ್ಟ್ ಕರ್ನಾಟಕ-2016ವಿಶ್ವ ಬಂಡವಾಳ ಹೂಡಿಕೆ ಸಮ್ಮೇಳನದಲ್ಲಿ 1.77 ಲಕ್ಷ ಕೋಟಿ ಬಂಡವಾಳ ಹಾಗೂ 1080 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಸುಮಾರು 4.82 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈಗಾಗಲೇ ಇದರಲ್ಲಿ 122 ಯೋಜನೆಗಳ ಒಡಂಬಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದ ಪ್ರಮುಖ ನಗರಗಳಲ್ಲಿ ಉಚಿತ ವೈಪೈ ಹಾಟ್‍ಸ್ಪಾಟ್ ಹಾಗೂ ಎಲ್ಲಾ ಜಿಪಂಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸುವ ಯೋಜನೆಯನ್ನು ಶೀಘ್ರ ಜಾರಿಗೊಳಿಸುವುದಾಗಿ ಸಿಎಂ ತಿಳಿಸಿದರು.
ನೆಲ,ಜಲ, ಭಾಷೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಎಂಥಹದ್ದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಹದಾಯಿ ನಂದಿ ನೀರುಹಂಚಿಕೆ ಸಂಬಂಧ ಇತ್ತೀಚೆಗೆ ಕರೆದ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳು ತೋರಿದ ಬದ್ಧತೆಗೆ ಹಾಗೂ ನೀಡಿದ ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಅನಗತ್ಯ ಪ್ರಚೋದನೆ ಇಲ್ಲವೇ ಭಾಗೋದ್ವೇಗಕ್ಕೆ ಒಳಗಾಗದೆ ರಾಜ್ಯದ ಜನತೆ ಸರ್ಕಾರದ ಮೇಲೆ ನಂಬಿಕೆ ಇಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಎಂ.ಎನ್.ಮೆಘರಿಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಸೇರಿದಂತೆ ಸೇನಾ ಪಡೆಯ ಮುಖ್ಯಸ್ಥರು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
Comments are closed.