ಕರ್ನಾಟಕ

ಡಿಜಿಪಿ-ಕೆಂಪಯ್ಯಗೆ ಬಿಸಿ: ವಿಚಾರಣೆಗೆ ಹಾಜರಾಗಲು ದೆಹಲಿ ದೌಡು

Pinterest LinkedIn Tumblr

cbi-lotteryಬೆಂಗಳೂರು, ಆ. ೫ – ಬಹು ಕೋಟಿ ರೂ.ಗಳ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರ ಸಲಹೆಗಾರ ಕೆಂಪಯ್ಯ ಅವರನ್ನು ವಿಚಾರಣೆಗೊಳಪಡಿಸಿದ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಡಿಜಿಪಿ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರನ್ನು ನವದೆಹಲಿಗೆ ಕರೆಸಿಕೊಂಡ ಅಧಿಕಾರಿಗಳು, ಸಿಬಿಐ ಕೇಂದ್ರ ಕಚೇರಿಯಲ್ಲಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಒಂದಂಕಿ ಲಾಟರಿ ಹಗರಣದ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಒಂದಂಕಿ ಲಾಟರಿ ಹಗರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ವಿಚಾರಣೆ ವೇಳೆ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರ ಹೆಸರುಗಳನ್ನು ಹೇಳಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಲಾಟರಿ ಹಗರಣದಲ್ಲಿ ಕೆಂಪಯ್ಯ ಹಾಗೂ ಓಂಪ್ರಕಾಶ್ ಅವರ ಪಾತ್ರ ಏನಿತ್ತು ಎನ್ನುವುದನ್ನು ಪ್ರಶ್ನಿಸಿದ್ದಾರೆ.

ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಕೆಲ ಅಧಿಕಾರಿಗಳ ಪರ ಕೆಂಪಯ್ಯ ಹಾಗೂ ಓಂಪ್ರಕಾಶ್ ಅವರು ವಹಿಸಿದ್ದ ಆರೋಪಗಳ ಬಗ್ಗೆ ಸಿಬಿಐ ಅಧಿಕಾರಿಗಳು ಸ್ಪಷ್ಟನೆ ಕೇಳಿ ಆರೋಪಿಗಳು ನೀಡಿದ ಹೇಳಿಕೆಗಳ ಪರಾಮರ್ಶೆ ನಡೆಸಿದ್ದಾರೆ.

ಲಾಟರಿ ಹಗರಣದ ಕಿಂಗ್ ಪಿನ್ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಎಡಿಜಿಪಿ ಸುನೀಲ್ ಕುಮಾರ್, ಐಜಿಪಿಗಳಾದ ಅಲೋಕ್ ಕುಮಾರ್, ಹರಿಶೇಖರನ್, ಅರುಣ್ ಚಕ್ರವರ್ತಿ, ಡಿಸಿಪಿಗಳಾದ ಸತೀಶ್ ಕುಮಾರ್, ಧರಣೇಶ್ ಸೇರಿದಂತೆ 35ಕ್ಕೂ ಹೆಚ್ಚು ಅಧಿಕಾರಿಗಳು ವಿಚಾರಣೆಯಲ್ಲಿ ನೀಡಿದ ಹೇಳಿಕೆಗಳ ಮುಖ್ಯಾಂಶಗಳನ್ನು ಮುಂದಿಟ್ಟುಕೊಂಡು ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರಿಂದ ಸ್ಪಷ್ಟನೆಗಳನ್ನು ಸಿಬಿಐ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಕೆಂಪಯ್ಯ ಅವರ ಸೂಚನೆಯಂತೆ ತನ್ನನ್ನು ಕಚೇರಿಗೆ ಕರೆಸಿಕೊಂಡಿದ್ದ ಓಂಪ್ರಕಾಶ್ ಅವರು, ಲಾಟರಿ ಹಗರಣದ ವಿಚಾರವಾಗಿ ನನ್ನನ್ನು ನಿಂದಿಸಿದ್ದು, ಅಲ್ಲದೇ, ಪಾರಿರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು ಎಂದು ಐಜಿಪಿಯೊಬ್ಬರು ಸಿಬಿಐ ವಿಚಾರಣೆಯಲ್ಲಿ ತಿಳಿಸಿದ್ದು, ಆ ಬಗ್ಗೆಯೂ ಸಿಬಿಐ ಅಧಿಕಾರಿಗಳು ಪ್ರಶ್ನಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಒಂದಂಕಿ ಲಾಟರಿ ಹಗರಣ ಪತ್ತೆಯಾದ ಕೂಡಲೇ ಅದನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೊಳಪಡಿಸಿ ಪಾರಿರಾಜನ್ ಜತೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಐಜಿಪಿ ಅಲೋಕ್ ಕುಮಾರ್ ಅವರನ್ನು ಅಮಾನತು ಮಾಡಿತ್ತು. ನಂತರ ಸಿಬಿಐ ಅಧಿಕಾರಿಗಳು ಹಗರಣದ ತನಿಖೆ ನಡೆಸಿದ್ದು, ಇಲ್ಲಿಯವರೆಗೆ 35 ಅಧಿಕಾರಿಗಳ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

Comments are closed.