ಬೆಂಗಳೂರು,ಆ.೩- ಶ್ರೀಗಂಧದ ಮರದ ತುಂಡುಗಳನ್ನು ಕಳವು ಮಾಡಿದ್ದ ಕಳ್ಳನೊಬ್ಬನನ್ನು ಬಂಧಿಸಿರುವ ತಲಘಟ್ಟಪುರ ಪೊಲೀಸರು ೧೩ ಕೆ.ಜಿ.ಶ್ರೀಗಂಧದ ತುಂಡುಗಳು, ಸೇರಿ ೮ಲಕ್ಷ ೮೦ ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಕೆರೆಹಳ್ಳಿಯ ನಾಗರಾಜ ಅಲಿಯಾಸ್ ನಾಗ(೩೨)ಬಂಧಿತ ಆರೋಪಿಯಾಗಿದ್ದಾನೆ,ಆರೋಪಿ ನಾಗರಾಜ ಮತ್ತು ಆತನ ಸಹಚರರು ವಾಹನಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಕಳವು ಮಾಡಿ ಮಾರಾಟ ಮಾಡಲು ತುರಹಳ್ಳಿ ಫಾರೆಸ್ಟ್ ಬಳಿ ಬರುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಲಘಟ್ಟಪುರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ನಾಗರಾಜನ ಸಹಚರರಾದ ಶಶಿಕುಮಾರ, ನವೀನ ಅಲಿಯಾಸ್ ಬೆಣ್ಣೆ ಹಾಗೂ ಬಸವರಾಜ ಎಂಬುವವರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದು ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ೧೩ ಕೆ.ಜಿ. ಶ್ರೀಗಂಧದ ಮರದ ತುಂಡುಗಳು ಇಂಡಿಕಾ ವಿಸ್ಟ ಕಾರ್ ಆಟೋ ರಿಕ್ಷಾ ಬೈಕ್ ಸೇರಿ ೮ಲಕ್ಷ ೮೦ ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೈಕ್ ಕಳ್ಳರ ಸೆರೆ
ಮೋಜು ಮಸ್ತಿ ಮಾಡಲು ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಇದೇ ಪೊಲೀಸರು ಬಂಧಿಸಿ ಮೂರುವರೆ ಲಕ್ಷ ಮೌಲ್ಯದ ೭ ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಜನಾಪುರದ ನಯಾಜ್ ಪಾಷ ಅಲಿಯಾಸ್ ಸತ್ ಕೋಳಿ(೨೦) ಸೈಯ್ಯದ್ ಸಾಧಿಕ್ ಅಲಿಯಾಸ್ ಸಾಧಿಕ್(೨೧)ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಶೋಭಾ ಅರ್ಪಾಟ್‌ಮೆಂಟಿನ ಬಳಿ ದ್ವಿ ಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೈಕ್ ಕಳವು ಮಾಡುತ್ತಿರುವ ಪತ್ತೆಯಾಗಿದೆ.
ಆರೋಪಿಗಳು ದುಶ್ಚಟಗಳಿಗಾಗಿ ಮತ್ತು ಮೋಜು ಮಸ್ತಿ ಮಾಡಲು ನಗರದ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಸೈಡ್ ಲಾಕನ್ನು ಮುರಿದು ಕಳವು ಮಾಡಿರುವುದು ತಿಳಿದುಬಂದಿದೆ.ಆರೋಪಿಗಳ ಬಂಧನದಿಂದ ಮೂರು ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಮನೆಗೆ ನುಗ್ಗಿ ಕಳವು
ಬೆಂಗಳೂರು,ಆ.೩-ಶಾಲೆಗೆ ಹೋಗಿದ್ದ ಮಗನನ್ನು ಕರೆದುಕೊಂಡು ಬರಲು ಹೋಗಿದ್ದ ಮಹಿಳೆಯೊಬ್ಬರ ಮನೆಯ ಮುಂಭಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ೩ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಯಶವಂತಪುರದ ನೇತಾಜಿ ವೃತ್ತದಲ್ಲಿ ನಿನ್ನೆ ಸಂಜೆ ನಡೆದಿದೆ.
ನೇತಾಜಿ ವೃತ್ತದ ಸೌಮ್ಯ ಅವರು ನಿನ್ನೆ ಸಂಜೆ ೪ರ ವೇಳೆ ಮನೆಗೆ ಬೀಗ ಹಾಕಿಕೊಂಡು ಹತ್ತಿರದ ಸ್ಕೂಲಿಗೆ ಹೋಗಿದ್ದ ಮಗನನ್ನು ಕರೆದುಕೊಂಡು ಬರಲು ಹೋಗಿ ವಾಪಾಸ್ಸು ಬರುವಷ್ಟರಲ್ಲಿ ದುಷ್ಕರ್ಮಿಗಳು ಮುಂಭಾಗಿಲ ಬೀಗ ಮುರಿದು ಒಳನುಗ್ಗಿ ೨೫ಗ್ರಾಂ ಚಿನ್ನದ ನಕ್ಲೇಸ್,೨೮ ಗ್ರಾಂ ಬಂಗಾರದ ಬಳೆ,ಉಂಗುರ, ಕಿವಿಯೊಲೆ,ನಗದು ಸೇರಿ ೩ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೈಕ್ ಡಿಕ್ಕಿ ಪೇಂಟರ್ ಮೃತ
ಬೆಂಗಳೂರು,ಆ.೩-ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪೇಂಟರ್‌ರೊಬ್ಬರು ಮೃತಪಟ್ಟಿರುವ ದುರ್ಘಟನೆ ಯಶವಂತಪುರದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ಇಂದು ಮುಂಜಾನೆ ನಡೆದಿದೆ.
ಎಸ್‌ಆರ್‌ಎಸ್ ಜಂಕ್ಷನ್ ಬಳಿ ವಾಸಿಸುತ್ತಿದ್ದ ಮಣಿ(೪೬)ಮೃತಪಟ್ಟವರು,ಮುಂಜಾನೆ ೫.೪೫ರ ವೇಳೆ ವಾಕಿಂಗ್ ಹೋಗಲು ಮಣಿ ಅವರು ತಮ್ಮ ಮನೆಯ ಸಮೀಪದ ಎಸ್‌ಆರ್‌ಎಸ್ ಜಂಕ್ಷನ್ ಬಳಿಯಲ್ಲಿ ರಸ್ತೆ ದಾಟುತ್ತಿದ್ದಾಗ ಪೀಣ್ಯದ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಯಶವಂತಪುರ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಸ್ವಾಮಿನಾಥ್ ಅವರು ಪ್ರಕರಣ ದಾಖಲಿಸಿ ಪರಾರಿಯಾಗಿರುವ ಬೈಕ್ ಸವಾರನಿಗಾಗಿ ಶೋಧ ನಡೆಸಿದ್ದಾರೆ.
Comments are closed.