ಬೆಂಗಳೂರು, ಆ. ೩- ಪಿಯು ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಕಿಂಗ್ ಪಿನ್ ಶಿವಕುಮಾರ್ ಸ್ವಾಮಿ ಅವರೊಂದಿಗೆ ತಮ್ಮ ಸಂಪರ್ಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದಿರುವ ಮಾಜಿ ಸಚಿವ ರೇಣುಕಾಚಾರ್ಯ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರ, ಕೈವಾಡ, ಸಂಪರ್ಕವಿಲ್ಲ. ಸಿಐಡಿ ತನಿಖೆ ಸೇರಿದಂತೆ, ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ ಎಂದು ಇಲ್ಲಿ ಸರ್ಕಾರಕ್ಕೆ ಸವಾಲು ಹಾಕಿದರು.
ನನ್ನ ತೇಜೋವಧೆ ಮಾಡಲು ಕೆಲವರು ನಡೆಸಿರುವ ಹುನ್ನಾರ. ಶಿವಕುಮಾರ್ ಸ್ವಾಮಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಮುಖವನ್ನೂ ನೋಡಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಭೇಟಿ ಮಾಡಿ, ಪ್ರಕರಣದಲ್ಲಿ ಪಾಲುದಾರರಾಗಿರುವವರು ಹಾಗೂ ಶಾಮೀಲಾಗಿರುವವರನ್ನು ಬಂಧಿಸುವಂತೆ ಒತ್ತಾಯಿಸಿದ್ದೇವೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗುವಂತಹ ಕೀಳುಮಟ್ಟದ ಕೆಲಸವನ್ನು ಮಾಡುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪವನ್ನೂ ಮಾಡಿಲ್ಲ. ನನ್ನ ಸಹೋದರರ ಮಕ್ಕಳ್ಯಾರೂ ಪಿಯುಸಿಯಲ್ಲಿ ಓದುತ್ತಿಲ್ಲ. ನನ್ನ ಮಗ ಇಂಜಿನಿಯರಿಂಗ್‌ನ ಕೊನೆಯ ಸೆಮಿಸ್ಟರ್‌ನಲ್ಲಿದ್ದಾನೆ. ಹಾಗಾಗಿ ನನಗೆ ಅದರ ಅಗತ್ಯವಿಲ್ಲ. ಹಾಗಿದ್ದರೂ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವರು ಹಾಗೂ ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದು ಯಾವುದೇ ತನಿಖೆ ನಡೆಸುವಂತೆ ಕೋರಲಾಗುವುದು. ಈ ಪ್ರಕರಣದಲ್ಲಿ ನನ್ನನ್ನು ಯಾರು ಎಳೆತಂದಿದ್ದಾರೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆಯೂ ಒತ್ತಾಯಿಸಲಾಗುವುದು ಎಂದರು.
ಸಿಐಡಿ ಅಧಿಕಾರಿಗಳು ತಮಗೆ ಯಾವುದೇ ನೋಟೀಸ್ ಜಾರಿ ಮಾಡಿಲ್ಲ. ವಿಚಾರಣೆಗೂ ಒಳಪಡಿಸಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ರಾತ್ರಿ 2 ಗಂಟೆಯವರೆಗೂ ಮದ್ಯದ ಅವಧಿ ವಿಸ್ತರಿಸಿರುವುದು ಸರಿಯಲ್ಲ. ತಾವು ಅಬಕಾರಿ ಸಚಿವರಾಗಿದ್ದಾಗ ಅವಧಿ ವಿಸ್ತರಣೆ ಮಾಡಲು ಮುಂದಾಗಿದ್ದಾಗ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಅಬಕಾರಿ ಸಚಿವರು ಗ್ರಾಮೀಣ ಜನರ ಬಗ್ಗೆ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದರು.
ರಾಜೀನಾಮೆಗೆ ಆಗ್ರಹ
ಮಹದಾಯಿ ನದಿ ನೀರು ಹಂಚಿಕೆ ಮಧ್ಯಂತರ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನಾರ್ಹ. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಬಿಜೆಪಿ ಕಾರ್ಯದರ್ಶಿ ರುದ್ರೇಶ್, ಜಿ.ಪಂ. ಸದಸ್ಯ ಮುನಿಸ್ವಾಮಿ ಉಪಸ್ಥಿತರಿದ್ದರು.
Comments are closed.