ಕರ್ನಾಟಕ

ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳ ಮಸೂದೆ ರಚನೆ

Pinterest LinkedIn Tumblr

transgender

(mng)ಕಳೆದ ವಾರ ಕೇಂದ್ರ ಸಚಿವ ಸಂಪುಟ ತೃತೀಯ ಲಿಂಗಿ (ಟ್ರಾನ್ಸ್ಜೆಂಡರ್) ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ-2016ಕ್ಕೆ ಅನುಮೋದನೆ ನೀಡಿದೆ. 2014ರಲ್ಲಿ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯಾಗಿ ಮಂಡನೆಯಾಗಿ, ಮೇಲ್ಮನೆಯ ಅಂಗೀಕಾರ ಪಡೆದಿದ್ದ ಈ ಮಸೂದೆ ಇದೀಗ ಈ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಆ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಹಿಜ್ಡಾ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆ ಮತ್ತು ಸಬಲೀಕರಣದ ಉದ್ದೇಶದ ಈ ಮಹತ್ವದ ಮಸೂದೆಯ ಕುರಿತ ಮಾಹಿತಿ ಇಲ್ಲಿದೆ.

ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳ ಮಸೂದೆ ಎಂದರೆ ಏನು?
ಭಾರತದಲ್ಲಿ ಇರುವ ಸುಮಾರು 18 ಲಕ್ಷ ಮಂದಿ ತೃತೀಯ ಲಿಂಗಿಗಳು ಅಥವಾ ಹಿಜ್ಡಾ ಸಮುದಾಯ ಸಮಾಜದಲ್ಲಿ ಎದುರಿಸುತ್ತಿರುವ ಅವಮಾನ, ತಾರತಮ್ಯ ಮತ್ತು ನಿಂದನೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಕಾನೂನು ರಕ್ಷಣೆ ಒದಗಿಸಲು ಮತ್ತು ಆ ಮೂಲಕ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡಲು ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಉದ್ದೇಶದಿಂದ ಈ ಮಸೂದೆ ರಚಿಸಲಾಗಿದೆ.

ಮಸೂದೆ ಯಾವಾಗ ಮಂಡನೆಯಾಯಿತು?
ತೃತೀಯ ಲಿಂಗಿಗಳ ವಿಷಯದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಹೇಳಲಾಗಿರುವ ಈ ಮಸೂದೆಯನ್ನು ಮೊದಲು ಮಂಡಿಸಿದ್ದು ರಾಜ್ಯಸಭೆಯಲ್ಲಿ. 2015ರ ಏಪ್ರಿಲ್ 24ರಂದು ರಾಜ್ಯಸಭೆ ಈ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಈ ಮಸೂದೆಯನ್ನು ಯಾರು ಮಂಡಿಸಿದರು?
ತಮಿಳುನಾಡಿನ ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ತಿರುಚಿ ಶಿವಾ ಎಂಬುವರು ಮೊದಲಬಾರಿಗೆ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಖಾಸಗಿ ಮಸೂದೆಯಾಗಿ ಮಂಡಿಸಿದರು. ಸಾಮಾನ್ಯವಾಗಿ ಖಾಸಗಿ ಮಸೂದೆಯಲ್ಲಿ ಆಗುವಂತೆ ಇಲ್ಲೂ, ಆಡಳಿತ ಮತ್ತು ಕೆಲವು ಪ್ರತಿಪಕ್ಷಗಳು ಮಸೂದೆಯನ್ನು ವಾಪಸ್ ಪಡೆಯುವಂತೆ ಶಿವಾ ಅವರಿಗೆ ಒತ್ತಾಯಿಸಿದವು. ಸರ್ಕಾರ ಸದ್ಯದಲ್ಲೇ ತೃತೀಯಲಿಂಗಿಗಳ ಕುರಿತ ಕಾನೂನು ರೂಪಿಸಲಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಮಸೂದೆಯನ್ನು ವಾಪಸ್ ಪಡೆಯಿರಿ ಎಂದು ಸರ್ಕಾರದ ಪರವಾಗಿ ಅಂದಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ ಚಂದ್ ಗೊಲ್ಹೋಟ್ ಕೂಡ ಶಿವಾ ಅವರನ್ನು ಮನವೊಲಿಸಲು ಯತ್ನಿಸಿದರು. ಆದರೆ, ಶಿವಾ ಪಟ್ಟುಬಿಡದೆ ಮಸೂದೆಯನ್ನು ಸಮರ್ಥಿಸಿಕೊಂಡರು. ಅಂತಿಮವಾಗಿ ಸಾಕಷ್ಟು ಚರ್ಚೆಯ ಬಳಿಕ ರಾಜ್ಯಸಭೆ ಮಸೂದೆಗೆ ಅಂಗೀಕಾರ ನೀಡಿತು.

ಭಾರತೀಯ ಸಂಸದೀಯ ಪರಂಪರೆಯಲ್ಲಿ ಈ ಮಸೂದೆಯ ವಿಶೇಷವೇನು?
ತಿರುಚಿ ಶಿವಾ ಅವರು ಮಂಡಿಸಿದ ಈ ಮಸೂದೆಗೆ ಒಂದು ಚಾರಿತ್ರಿಕ ಮಹತ್ವವಿದೆ. ಅದೇನೆಂದರೆ, ಕಳೆದ 36 ವರ್ಷಗಳಲ್ಲಿ ಸಂಸತ್ನ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ಏಕೈಕ ಖಾಸಗಿ ಮಸೂದೆ ಎಂಬುದು. ಅದರಲ್ಲೂ ರಾಜ್ಯಸಭೆಯಲ್ಲಂತೂ ಕಳೆದ 45 ವರ್ಷಗಳಿಂದ ಯಾವುದೇ ಖಾಸಗಿ ಮಸೂದೆ ಅಂಗೀಕಾರ ಪಡೆದಿರಲಿಲ್ಲ. ಅಲ್ಲದೆ, 1947 ರಿಂದ ಈವರೆಗೆ ಕೇವಲ ೧೬ ಖಾಸಗಿ ಮಸೂದೆಗಳು ಸಂಸತ್ನಲ್ಲಿ ಅಂಗೀಕಾರಗೊಂಡಿವೆ ಎಂಬುದು ಕೂಡ ಮತ್ತೊಂದು ಗಮನಾರ್ಹ ಅಂಶ.

ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದೆಯೇ?
ಹೌದು, ಕಳೆದ ಫೆಬ್ರವರಿ 26ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಬಿಜು ಜನದಾ ದಳ (ಬಿಜೆಡಿ) ನಾಯಕ ಬೈಜಯಂತ್ ಪಾಂಡ ಅವರು ಲೋಕಸಭೆಯಲ್ಲಿ ಇದನ್ನು ಖಾಸಗಿ ಮಸೂದೆಯಾಗಿ ಮಂಡಿಸಿ, ಚರ್ಚೆಗೆ ತೆಗೆದುಕೊಳ್ಳುವಂತೆ ಸದನಕ್ಕೆ ಮನವಿ ಮಾಡಿದ್ದಾರೆ. ಪಾಂಡ ಅವರಿಗೆ ಬಿಜೆಪಿಯ ಜಗದಾಂಬಿಕಾ ಪಾಲ್ ಸೇರಿದಂತೆ ಹಲವು ಸಂಸದರು ಬೆಂಬಲ ಸೂಚಿಸಿದ್ದಾರೆ. ಪ್ರಸ್ತುತ ಮುಂಗಾರು ಅಧಿವೇಶನದಲ್ಲಿ ಮಸೂದೆ ಚರ್ಚೆಗೆ ಬರಲಿದ್ದು, ಆ ಹಿನ್ನೆಲೆಯಲ್ಲಿ ಸಂಪುಟ ಕಳೆದ ವಾರ ತನ್ನ ಒಪ್ಪಿಗೆ ಸೂಚಿಸಿದೆ.

ಮಸೂದೆಯಲ್ಲಿ ಏನಿದೆ?
ತೃತೀಯ ಲಿಂಗಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ವಲಯದಲ್ಲಿ ಸಮಾನತೆ ಕಲ್ಪಿಸುವುದು ಮಸೂದೆಯ ಪ್ರಮುಖ ಉದ್ದೇಶ. ಆ ನಿಟ್ಟಿನಲ್ಲಿ ಅಗತ್ಯ ಕಾನೂನು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಶೇ.2ರಷ್ಟು ಒಳಮೀಸಲಾತಿ ನೀಡಬೇಕು ಎಂಬುದು ಪ್ರಮುಖ ಅಂಶ. ಆ ಮೀಸಲಾತಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನ್ವಯವಾಗಬೇಕು ಎನ್ನಲಾಗಿದೆ. ಆ ಮೂಲಕ ಸಾಮಾಜಿಕ ತಾರತಮ್ಯ ನಿವಾರಿಸಿ ಆ ಸಮುದಾಯಕ್ಕೆ ಅಂಟಿರುವ ಕಳಂಕವನ್ನು ತೊಡೆಯುವ ಗುರಿ ಹೊಂದಲಾಗಿದೆ.

ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕ ಉದ್ಯೋಗ ವಿನಿಮಯ ವ್ಯವಸ್ಥೆ ಆಗಬೇಕು. ಪ್ರತ್ಯೇಕ ಆಯೋಗ ರಚನೆಯಾಗಬೇಕು. ತೃತೀಯ ಲಿಂಗಿ ಮಕ್ಕಳ ಹಕ್ಕುಗಳ ರಕ್ಷಣೆ. ತೃತೀಯ ಲಿಂಗಿಗಳಿಗೆ ಲೈಂಗಿಕ ಆಯ್ಕೆಯ ಸ್ವಾತಂತ್ರ್ಯ, ವಿವಾಹ ಸ್ವಾತಂತ್ರ್ಯ ಹಾಗೂ ಮಕ್ಕಳನ್ನು ದತ್ತು ಪಡೆಯುವ ಸ್ವಾತಂತ್ರ್ಯ ಕೂಡ ಅಡಕಗೊಂಡಿದೆ.

ನಿಂದನೆ, ಅವಮಾನ ಅಥವಾ ತಾರತಮ್ಯಕ್ಕೆ ಶಿಕ್ಷೆ ಏನು?
ತೃತೀಯ ಲಿಂಗಿಗಳಿಗೆ ಯಾವುದೇ ಸಂದರ್ಭದಲ್ಲಿ ನಿಂದಿಸಿದಲ್ಲಿ ಅಥವಾ ಅವಮಾನ ಮಾಡಿದಲ್ಲಿ ಅಥವಾ ತಾರತಮ್ಯ ಅನುಸರಿಸಿದಲ್ಲಿ ಅಥವಾ ಕಿರುಕುಳ ನೀಡಿದಲ್ಲಿ, ಅಂತಹವರಿಗೆ ಆರು ತಿಂಗಳಿಂದ ಎರಡು ವರ್ಷಗಳ ಅವಧಿಯ ಶಿಕ್ಷೆ ವಿಧಿಸುವ ಅವಕಾಶ ಈ ಮಸೂದೆಯಲ್ಲಿದೆ. ಇಂತಹ ಶಿಕ್ಷೆಯ ಮೂಲಕ ಸಮಾಜದಲ್ಲಿ ಆ ಸಮುದಾಯವನ್ನು ಜನ ಸಹಜ ಮತ್ತು ಸಮಾನತೆಯಿಂದ ಸ್ವೀಕರಿಸುವಂತೆ ಮಾಡುವ ಗುರಿ ಇದೆ.

ಮಸೂದೆಯ ಅಂಶಗಳಿಗೆ ತೃತೀಯ ಲಿಂಗಿ ಸಮುದಾಯದ ಪ್ರತಿಕ್ರಿಯೆ ಏನು?
ಮಸೂದೆಯಲ್ಲಿ ತೃತೀಯ ಲಿಂಗಿಗಳೆಂದರೆ ಯಾರು ಎಂಬ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನವಿಲ್ಲ. ತೃತೀಯ ಲಿಂಗಿಗಳು ಎಂಬ ಸಮೂಹದಲ್ಲಿ ಹಿಜ್ಡಾಗಳು ಪ್ರಮುಖ ಭಾಗವಷ್ಟೇ. ಹಿಜ್ಡಾಗಳೆಲ್ಲರೂ ತೃತೀಯ ಲಿಂಗಿಗಳೇ. ಆದರೆ, ತೃತೀಯ ಲಿಂಗಿಗಳೆಲ್ಲರೂ ಹಿಜ್ಡಾಗಳಲ್ಲ. ಈ ಸೂಕ್ಷ್ಮಗಳನ್ನು ಸರಿಯಾಗಿ ವ್ಯಾಖ್ಯಾನಿಸದೇ ಇದ್ದಲ್ಲಿ ಮತ್ತಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಅಲ್ಲದೆ, ಬಹಳಷ್ಟು ತೃತೀಯ ಲಿಂಗಿಗಳು ತಮ್ಮನ್ನು ತಾವು ತೃತೀಯ ಲಿಂಗಿ ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬದಲಾಗಿ ಅವರು ಗಂಡು ಅಥವಾ ಹೆಣ್ಣು ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ಆ ಹಿನ್ನೆಲೆಯಲ್ಲಿ ನೋಡಿದರೆ ಇದು ಅಂತಹವರ ಆ ಆಯ್ಕೆಯ ಅವಕಾಶ ನೀಡಿದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ ಎಂಬುದು ಬಹುತೇಕ ಹಿಜ್ಡಾ ಸಮುದಾಯದವರ ಪ್ರತಿಕ್ರಿಯೆ.

ತೃತೀಯ ಲಿಂಗಿಗಳಿಗೆ ಪೂರಕ ಇತರ ಕಾನೂನು ಮತ್ತು ನ್ಯಾಯಾಂಗದ ಅವಕಾಶಗಳೇನು?
ತನ್ನ ಮಹತ್ವದ ಆದೇಶವೊಂದರಲ್ಲಿ ಸುಪ್ರೀಂಕೋಟ್ 2014 ರ ಏಪ್ರಿಲ್ನಲ್ಲಿ, ತೃತೀಯ ಲಿಂಗಿಗಳಿಗೆ ಅಧಿಕೃತವಾಗಿ ತೃತೀಯ ಲಿಂಗ ಎಂಬ ಸ್ಥಾನಮಾನ ನೀಡಿತ್ತು. ಆ ಹಿನ್ನೆಲೆಯಲ್ಲಿ ಜನ್ಮ ದಾಖಲೆ, ಪಾಸ್ಪೋರ್ಟ್, ಪಡಿತರ ಚೀಟಿ, ಚಾಲನಾ ಪರವಾನಗಿ ಸೇರಿದಂತೆ ಪ್ರಮುಖ ಗುರುತು ದಾಖಲೆಗಳಲ್ಲಿ ಅಧಿಕೃತವಾಗಿ ಈ ಸಮುದಾಯದವರನ್ನು ತೃತೀಯ ಲಿಂಗ ಎಂದು ನಮೂದಿಸುವ ಅವಕಾಶ ನೀಡಲಾಗಿತ್ತು. ಆ ಬಳಿಕ ಇದೀಗ ಕಳೆದ ವಾರ ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶಕ್ಕೆ ಮತ್ತೊಂದು ಸ್ಪಷ್ಟೀಕರಣ ನೀಡಿದ್ದು, ತೃತೀಯ ಲಿಂಗಿ ವ್ಯಾಖ್ಯಾನದಲ್ಲಿ ಗೇ, ಲೆಸ್ಬಿಯನ್, ಬೈಸೆಕ್ಸುವಲ್ಸ್ಗಳು ಸೇರುವುದಿಲ್ಲ ಎಂದು ಹೇಳಿತು.

Comments are closed.