ಅಂತರಾಷ್ಟ್ರೀಯ

ಬೆಲ್ಜಿಯಂನಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಅಸ್ವಸ್ಥ

Pinterest LinkedIn Tumblr

siddaramaiah-rakesh-siddaramaiah

ಬೆಂಗಳೂರು: ಬೆಲ್ಜಿಯಂ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯನವರ ಆರೋಗ್ಯ ತೀವ್ರ ಹದಗೆಟ್ಟಿದ್ದು , ಆತಂಕಕ್ಕೊಳಗಾಗಿರುವ ಮುಖ್ಯಮಂತ್ರಿ ಇಬ್ಬರು ವೈದ್ಯರೊಂದಿಗೆ ರಾಕೇಶ್ ಪತ್ನಿಯನ್ನು ಕಳುಹಿಸಿದ್ದಾರೆ.

ರಾಕೇಶ್ ಅವರಿಗೆ ಉದರ ಸಂಬಂಧಿ(ಫ್ಯಾಂಕ್ರಿಯಾಸ್) ಕಾಯಿಲೆ ಎಂದು ತಿಳಿದುಬಂದಿದ್ದು , ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರವಾಣಿ ಕರೆ ಮಾಡಿರುವ ಸಿದ್ದರಾಮಯ್ಯ, ತಮ್ಮ ಪುತ್ರನ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಮನವಿಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್ ತಕ್ಷಣವೇ ಬೆಲ್ಜಿಯಂನಲ್ಲಿರುವ ಭಾರತ ರಾಯಭಾರಿಗಳನ್ನು ಸಂಪರ್ಕಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಕೇಶ್‍ರವರ ಪತ್ನಿ ಹಾಗೂ ತಮ್ಮ ಪುತ್ರನ ಆರೋಗ್ಯದ ಬಗ್ಗೆ ಮಾಹಿತಿ ಇರುವ ವೈದ್ಯರ ತಂಡವನ್ನು ತುರ್ತಾಗಿ ಬೆಲ್ಜಿಯಂಗೆ ಕಳುಹಿಸಿರುವುದಾಗಿಯೂ ಮೂಲಗಳು ತಿಳಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ರಾಕೇಶ್ ಯಕೃತ್, ಮೂತ್ರಪಿಂಡ ಸಮಸ್ಯೆಗೆ ತುತ್ತಾಗಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು.

ಈಗ ಬೆಲ್ಜಿಯಂನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ರಾಕೇಶ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ತೀವ್ರ ಆತಂಕಗೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು, ಸಾರಿಗೆ ಮುಷ್ಕರ ಮುಂತಾದ ಪ್ರಚಲಿತ ಸಮಸ್ಯೆಗಳಿಂದ ಬಳಲಿರುವ ಮುಖ್ಯಮಂತ್ರಿ ಇದೀಗಮಗನ ಅನಾರೋಗ್ಯದಿಂದ ಭಾರೀ ಆತಂಕಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

Comments are closed.