ಮಂಗಳೂರು: ಬಿಯರ್‌ನಲ್ಲೂ ಸೌಂದರ್ಯದ ಗುಟ್ಟಿದೆ ಎಂಬುದು ಅನೇಕರಿಗೆ ಗೊತ್ತು. ಕೂದಲಿಗೆ ಚೆನ್ನಾಗಿ ಬಿಯರ್ ಕುಡಿಸಿದರೆ ಕಾಂತಿಯುಕ್ತವಾಗುತ್ತದೆ ಎಂಬುದನ್ನೂ ಕೇಳಿರುತ್ತೀರಿ. ಇದೇ ಬಿಯರ್ನಿಂದ ನಿಮ್ಮ ಮುಖದ ಕಳೆಯನ್ನೇ ಬದಲಿಸಬಹುದು. ಇದು ಮೆದೋಜೀರಕ ಗ್ರಂಥಿಗಳ ಸ್ರಾವವನ್ನು ಕಡಿಮೆ ಮಾಡುತ್ತದೆ. ಮೊಡವೆಗಳನ್ನು ತಡೆಗಟ್ಟಿ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಇಂಥ ಲಾಭಗಳ ಕಾರಣಕ್ಕಾಗಿ ಇಂದು ಮುಖಕ್ಕೆ ಬಿಯರ್ ಕುಡಿಸುವ ಟ್ರೆಂಡ್ ಶುರುವಾಗಿದೆ. ಮುಜುಗರ ಪಟ್ಟುಕೊಳ್ಳದೆ ಒಮ್ಮೆ ನೀವೂ ಪ್ರಯತ್ನಿಸಬಹುದಾದ ಸರಳ ಬಿಯರ್ ಮಾಸ್ಕ್ಗಳು ಇಲ್ಲಿವೆ.
ಬಿಯರ್ ಪ್ಲೇನ್ ಮಾಸ್ಕ್
ಎಣ್ಣೆ ತ್ವಚೆಯಿರುವವರು ಲಿಂಬೆರಸ, ಜೇನುತುಪ್ಪ, ಆಲೀವ್ ಆಯಿಲ್ ಮತ್ತು ಬಿಯರನ್ನು ಮಿಶ್ರಣ ಮಾಡಿ ಹಚ್ಚಿಕೊಂಡರೆ ಮುಖದಲ್ಲಿರುವ ಕಲೆಗಳು ಕಡಿಮೆಯಾಗುತ್ತವೆ. ಈ ಮಿಶ್ರಣವನ್ನು ಸ್ನಾನಕ್ಕೂ ಮುನ್ನ ಹಚ್ಚಿ 10-15 ನಿಮಿಷ ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಹೀಗೆ ೩೦ ದಿನ ಮಾಡುವುದರಿಂದ ಮೊಡವೆ ಕಲೆಗಳು ಮಾಯವಾಗುತ್ತವೆ.
ಬಿಯರ್ ಸ್ಟ್ರಾಬೆರಿ ಮಾಸ್ಕ್
ಕಾಲು ಲೀಟರ್ ಬಿಯರ್ಗೆ ಮೂರ್ನಾಲ್ಕು ಸ್ಟ್ರಾಬೆರಿ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಇದು ಹದವಾಗಿ ಮಿಶ್ರವಾಗುವವರೆಗೂ ಬಿಡಿ. ನಂತರ ಮುಖ, ಕುತ್ತಿಗೆಗೆ ಲೇಪಿಸಿ ಅರ್ಧ ಗಂಟೆ ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಬ್ಲಾಕ್ಹೆಡ್ಸ್ ಮತ್ತು ವೈಟ್ ಹೆಡ್ಸನ್ನು ಹೊಡೆದೋಡಿಸಿ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಬಿಯರ್- ಎಗ್ ಮಾಸ್ಕ್
ಮೊಟ್ಟೆಯನ್ನು ಕತ್ತರಿಸಿ ಒಳಗಿರುವ ಬಿಳಿ ಭಾಗವನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ ಬಾದಾಮಿ ಎಣ್ಣೆ, ನಾಲ್ಕಾರು ಹನಿಗಳಷ್ಟು ಬಿಯರನ್ನು ಸೇರಿಸಿ ಕಲೆಸಿ ಮುಖಕ್ಕೆ ಲೇಪಿಸಿಕೊಳ್ಳಿ. 5 ನಿಮಿಷ ಆರಲು ಬಿಡಿ. ನಂತರ ಮುಖ ತೊಳೆಯಿರಿ. ಇದು ತ್ವಚೆಯಲ್ಲಿರುವ ಶುಷ್ಕ ಜೀವಕೋಶಗಳನ್ನು ತೆಗೆದು ಹಾಕಿ, ಹೊಳಪು ನೀಡುತ್ತದೆ.

Comments are closed.