ಕರ್ನಾಟಕ

ಶಾಸನ ರೂಪಿಸುವ ಛಾತಿಯ ವಕೀಲರ ಅಗತ್ಯ: ಕೇಂದ್ರದ ಹಣಕಾಸು ಸಚಿವ ಅರುಣ್‌ಜೇಟ್ಲಿ

Pinterest LinkedIn Tumblr

jet

ಬೆಂಗಳೂರು: ಸರ್ಕಾರದ ನೀತಿ ನಿರೂಪಣೆಯನ್ನು ರೂಪಿಸುವ ವಕೀಲರ ಅಗತ್ಯವಿದೆ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್‌ಜೇಟ್ಲಿ ಹೇಳಿದರು.

ಈಗಿನ ಬದಲಾದ ಪರಿಸ್ಥಿತಿಯಲ್ಲಿ ಸರ್ಕಾರದ ನೀತಿ-ನಿರೂಪಣೆಗೆ ಕಾನೂನು ಸಲಹೆಗಳು ಅತಿ ಅವಶ್ಯವಿದೆ. ಹಾಗಾಗಿ ನೀತಿ ನಿರೂಪಣೆಯಲ್ಲಿ ಸಕ್ರಿಯರಾಗುವ ವಕೀಲರನ್ನು ತಯಾರು ಮಾಡಬೇಕಿದೆ ಎಂದು ಅವರು ಹೇಳಿದರು.

ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿಂದು ಕೆ.ಎಲ್.ಇ. ಸಂಸ್ಥೆಯ ಕಾನೂನು ಕಾಲೇಜಿನ ನೂತನ ಕ್ಯಾಂಪಸ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಶಿಕ್ಷಣ ಈಗ ಹಿಂದಿನ ಪಾರಂಪರಿಕ ಶಿಕ್ಷಣವಾಗಿ ಉಳಿದಿಲ್ಲ. ಈ ಕಾನೂನು ಶಿಕ್ಷಣ ಬದಲಾಗಿದೆ ಎಂದರು.

ಉದಾರೀಕರಣ, ಆರ್ಥಿಕತೆ ಹಾಗೂ ತಾಂತ್ರಿಕತೆಯ ಹಿನ್ನೆಲೆಯಲ್ಲಿ ಸಮಗ್ರ ಕಾನೂನು ಶಿಕ್ಷಣ ಬದಲಾಗಿದೆ. ಪ್ರತಿ ಕ್ಷೇತ್ರಗಳಲ್ಲೂ ವಿಶೇಷತೆ ಪಡೆದ ಕಾನೂನು ತಜ್ಞರ ಅವಶ್ಯಕತೆ ಇದೆ ಎಂದರು.

ಮೊದಲೆಲ್ಲಾ ಕಾನೂನು ಶಿಕ್ಷಣ ಎಲ್ಲರ ಕೊನೆಯ ಆಯ್ಕೆಯಾಗುತ್ತಿತ್ತು. ಆದರೆ ಈಗ ಕಾನೂನು ಶಿಕ್ಷಣ ಆದ್ಯತೆ ಆಯ್ಕೆಯಾಗಿ ಬದಲಾಗಿದೆ. ಇದಕ್ಕೆ ಕಾರಣ ಜಗತ್ತಿನಲ್ಲಿ ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿರುವುದು ಎಂದರು.

ಮೊದಲೆಲ್ಲಾ ಕ್ರಿಮಿನಲ್, ಸಿವಿಲ್, ಆಸ್ತಿ ಮತ್ತಿತರ ವಿಷಯಗಳಿಗಷ್ಟೆ ವಕೀಲರು ಸೀಮಿತರಾಗಿದ್ದರು. ಉದಾರೀಕರಣದ ನಂತರ ಅಂತಾರಾಷ್ಟ್ರೀಯ ವ್ಯಾಪಾರ, ಕಾರ್ಪೋರೆಟ್ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಿಗಣತಿ ಸಾಧಿಸುವ ವಕೀಲರು ತಯಾರಾಗುತ್ತಿದ್ದಾರೆ. ಕಾನೂನು ಶಿಕ್ಷಣ ದೊಡ್ಡ ಮಟ್ಟದಲ್ಲಿ ಬದಲಾವಣೆಗೆ ತೆರೆದುಕೊಂಡಿದೆ ಎಂದರು.

ಕಾನೂನು ಶಿಕ್ಷಣ ಪಡೆದವರು ಸರ್ಕಾರದ ವ್ಯವಸ್ಥೆಯಲ್ಲೂ ಪಾಲ್ಗೊಳ್ಳಬೇಕು. ನ್ಯಾಯಾಲಯದ ಕಿರಿಕಿರಿಗಳು ಬೇಡ ಎನ್ನುವವರು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಈಗಿನ ಕಾನೂನು ಶಿಕ್ಷಣ ನೀಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ದಿವಾಳಿ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ವಿಶೇಷ ಪರಿಣತಿ ಪಡೆದ ವಕೀಲರ ಅಗತ್ಯವಿದೆ ಎಂದ ಅವರ, ಕಾನೂನು ಶಿಕ್ಷಣ ಆಯಾಮ, ಮಜಲು ಎರಡೂ ಬದಲಾಗಿದೆ ಎಂದರು.

ವೈದ್ಯಕೀಯ ಚಿಕಿತ್ಸೆ ತಾಂತ್ರಿಕತೆಯ ಮೇಲೆ ಸಂಪೂರ್ಣ ಬದಲಾದಂತೆ ಬದಲಾಗಿದೆ. ಅದೇ ಹಾದಿಯಲ್ಲಿ ಕಾನೂನು ಶಿಕ್ಷಣವೂ ಸಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮನುಷ್ಯನ ಮಿದುಳು ಆರ್ಥಿಕ ಸಂಪನ್ಮೂಲವಾಗಿ ಬದಲಾಗಲಿದೆ. ದೇಶದಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಆರ್ಥಿಕತೆಯ ಸಂಪನ್ಮೂಲಗಳಾಗಿದ್ದರೂ ಶೇ. 60 ರಷ್ಟು ಸಂಪನ್ಮೂಲ ಸೇವಾ ವಲಯದಿಂದ ಬರುತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿಂದು ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪ್ರತಿ ರಾಜ್ಯಗಳು ಜಾಗತಿಕ ದರ್ಜೆಯ ಕಾನೂನು ಶಿಕ್ಷಣ ಕೇಂದ್ರಗಳನ್ನು ಆರಂಭಿಸುತ್ತಿದೆ ಎಂದರು.

ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಕ್ರಮೇಣ ಕಡಿಮೆಯಾಗುತ್ತಿದೆ. ಕುಟುಂಬ ಸದಸ್ಯರ ಇಳಿಮುಖವಾಗುತ್ತಿದೆ. ಆದರೆ ಭಾರತದಲ್ಲಿ ಆ ಪರಿಸ್ಥಿತಿ ಇಲ್ಲ. ಹಾಗಾಗಿ ಜನರನ್ನೆ ಸಂಪನ್ಮೂಲದ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಅನಂತಕುಮಾರ್, ಕಡು ಬಡವರು ಹಾಗೂ ಕಾನೂನು ಸಲಹೆ ಪಡೆಯಲು ಸಾಧ್ಯವಾಗದವರಿಗೆ ಕಾನೂನು ವಿದ್ಯಾಲಯಗಳು ಕಾನೂನು ಸಲಹೆ ನೀಡುವ ಸೇವೆ ಆರಂಭಿಸಬೇಕು ಎಂದರು.

ಕಾರ್ಪೋರೆಟ್ ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ರೀತಿಯಲ್ಲೆ ಕಾನೂನು ವಿದ್ಯಾಲಯಗಳು ಕಾನೂನು ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಆ ಮೂಲಕ ಬಡವರು ಹಾಗೂ ಅಶಕ್ತರಿಗೆ ಕಾನೂನು ಸಲಹೆ ಲಭ್ಯವಾಗುವಂತೆ ಮಾಡಬೇಕು ಎಂದರು.

ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಟಿ. ಸೋಮಶೇಖರ್, ಆರ್. ಅಶೋಕ್, ಸುರೇಶ್‌ಕುಮಾರ್, ವಿ. ಸೋಮಣ್ಣ, ಕೆ.ಎಲ್.ಇ. ಸಂಸ್ಥೆಯ ಛೇರ್ಮನ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಸಭಾಕರ ಬಿ. ಕೋರೆ, ಅಧ್ಯಕ್ಷ ಶಿವಾನಂದ ಕೌಜಲಗಿ, ಕೆ.ಎಲ್.ಇ. ಲಾ ಕಾಲೇಜಿನ ನಿರ್ದೇಶಕ ಪ್ರಭುಲಿಂಗ ನಾಗಲಗಿ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನಯ್ಯ, ಕೆ.ಎಲ್.ಇ. ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ವಿನಯಕುಮಾರ್, ಪ್ರಕಾಶ್‌ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Comments are closed.