ಮೈಸೂರು: ಸಮಾಜದ ಅಭಿವೃದ್ಧಿ ಮತ್ತು ಮಾನವನ ಜ್ಞಾನ ವಿಕಾಸಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಎಸ್ ಜೆ ಸಿ ಇ ಸಂಸ್ಥೆಗಳ ಆವರಣದಲ್ಲಿ ಜೆ ಎಸ್ ಎಸ್ ಮಹಾವಿದ್ಯಾಪೀಠ ಆಯೋಜಿಸಿದ್ದ ಜೆ ಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಯ ಉದ್ಘಾಟನೆ ಮತ್ತು ಶೈಕ್ಷಣಿಕ ವಿಭಾಗಗಳ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಜಾಗತೀಕರಣದಿಂದಾಗಿ ಇಂದು ಜಗತ್ತು ವೇಗವಾಗಿ ಬದಲಾವಣೆಯಾಗುತ್ತಿದೆ. ಇದರೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳೆಯುತ್ತಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ ಎಂದರು.
ಬದಲಾಲಣೆ ಜಗದ ನಿಯಮ ನಾವು ಮಾನವ ವಿಕಾಸಕ್ಕೆ ಹಲವಾರು ಚಿಂತನೆಗಳನ್ನು ನಡೆಸಬೇಕಾಗಿದೆ. ಬದುಕಿನಲ್ಲಿ ಅಭಿವೃದ್ಧಿ ಹೊಂದಲು ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗರಿಷ್ಠ ಮಟ್ಟದಲ್ಲಿ ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮನುಷ್ಯರ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುವ ಸಂಭವ ಇದ್ದು ಅವುಗಳ ಬಗ್ಗೆ ಎಚ್ಚಿರಿಕೆವಹಿಸುವುದು ಸೂಕ್ತ ಎಂದರು.
ವಿಜ್ಞಾನ ಬೆಳೆದಂತೆಲ್ಲಾ ಕಂದಾಚಾರ ಮತ್ತು ವೈಚಾರಿಕತೆ ಮನೋಭಾವಗಳನ್ನು ಬಿಡಬೇಕು. ಸಮಗ್ರ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಬಹಳ ಪುರಾತನ ಕಾಲದಿಂದಲೂ ಸಮಾಜದಲ್ಲಿ ಕಂದಾಚಾರ ಮತ್ತು ಮೌಢ್ಯಗಳು ಆಳವಾಗಿ ಬೇರೂರಿದ್ದು ಅವುಗಳನ್ನು ಬೇರು ಸಹಿತ ಕಿತ್ತುಹಾಕದ ಹೊರತು ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಇದೊಂದು ಅನಾಗರೀಕತೆ ಎನಿಸಿದ್ದು ಮೌಢ್ಯನಿಷೇಧ ಕಾಯ್ದೆಯಡಿ ಇದನ್ನು ತೊಡೆದು ಹಾಕುವ ದಿಸೆಯಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದರು.
12 ನೇ ಶತಮಾನದಲ್ಲಿಯೇ ಬಸವಾದಿ ಶರಣರು ವೈಜ್ಞಾನಿಕ ಚಿಂತನೆ ನಡೆಸಿ ಮೌಢ್ಯ ಮತ್ತು ಕಂದಾಚಾರಗಳಿಗೆ ತಿಲಾಂಜಲಿ ನೀಡಿ ಸಮಾಜದ ಬೆಳವಣಿಗೆ ಪೂರಕವಾದ ವಾತಾವರಣ ನಿರ್ಮೀಸಲು ಮುಂದಾಗಿದ್ದರು. ಸಂವಿಧಾನದಲ್ಲಿ ಪ್ರತಿಯೊಬ್ಬರು ಅವೈಜ್ಞಾನಿಕ ಮತ್ತು ವೈಚಾರಿಕತೆಗಳನ್ನು ರೂಡಿಸಿಕೊಳ್ಳದಂತೆ ತಿಳಿಸಿದ್ದರೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಮಾಜದ ಪ್ರಗತಿಗೆ ಅಡ್ಡಿಯಾಗಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಸ್ಥಾಪನೆಯಿಂದ ಮನುಷ್ಯನ ವಿಕಾಸ ವೃದ್ಧಿಗೊಳ್ಳುತ್ತದೆ. ದೇಶದಲ್ಲಿ ಇಂತಹ ವಿವಿಗಳು ಸ್ಥಾಪನೆಗೊಳ್ಳುತ್ತಿರುವುದು ಶ್ಲಾಘನೀಯ. ಈ ವಿವಿ ಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ದವಿದೆ ಎಂದರು.
ಸಾವಿರಾರು ವರ್ಷ ಇತಿಹಾಸವಿರುವ ಸುತ್ತೂರು ಕ್ಷೇತ್ರವು ಧಾರ್ಮಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. ಇದಕ್ಕೆ ರಾಜೇಂದ್ರ ಶ್ರೀಗಳ ದೂರಾಲೋಚನೆ ಪ್ರಮುಖ ಕಾರಣವಾಗಿದ್ದು, ಇಂದು ಅವರನ್ನು ನೆನಪು ಮಾಡಿಕೊಳ್ಳುವುದು ಆದ್ಯ ಕರ್ತವ್ಯ ಎಂದರು.
ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ಕರೆ
ಇಂದಿನ ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ನಿರ್ವಹಿಸಲು ಮುಂದಾಗುವಂತೆ ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಇಂದು ಎಸ್.ಜೆ.ಸಿ.ಎ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜೆಎಸ್ ಎಸ್ ಮಹಾವಿದ್ಯಾಪೀಠದ ವತಿಯಿಂದ ಆಯೋಜಿಸಿದ್ದ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಅನೇಕ ಆವಿಷ್ಕಾರಗಳಿಂದ ಕೂಡಿವೆ. ಮುಂದುವರಿದ ರಾಷ್ಟ್ರಗಳಿಗೆ ಸಮಾನವಾಗಿ ಭಾರತವು ಬೆಳೆಯಲು ಇಂದಿನ ಯುವಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಜನೆಯೊಂದಿಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯ ಎಂದರು.
ಅಗತ್ಯತೆಗಳನ್ನು ಪೂರೈಸುವ ಮೂಲ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇವುಗಳಿಗೆ ತಕ್ಕಂತೆ ವಿಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳುವತ್ತ ಗಮನಹರಿಸುವುದು ಸೂಕ್ತ. ಮಾನವನ ಆಲೋಚನೆ ಮತ್ತು ಆಯ್ಕೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಉತ್ತಮ ವಿದ್ಯಾರ್ಥಿಗಳನ್ನು ಸಿದ್ದಪಡಿಸುವಲ್ಲಿ ಅಪಾರ ಯಶಸ್ಸು ಕಾಣುತ್ತಿವೆ. ಈ ದಿಸೆಯಲ್ಲಿ ಇಂದು ಉದ್ಘಾಟನೆಗೊಂಡಿರುವ ವಿವಿಯು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡುವಂತೆ ಸಲಹೆ ನೀಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿಯನ್ನು ಎದುರಿಸಲು ಕೈಗಾರಿಕೆ, ವ್ಯವಸಾಯ ಮತ್ತು ಇನ್ನಿತರೆ ಉತ್ಪಾಧನಾ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದ ಅವರು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸುವಂತ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯಪಾಲ ವಾಜುಬಾಯಿ ರೂಡಬಾಯಿ ವಾಲ ಮಾತನಾಡಿ ಅಜ್ಞಾನ ಮತ್ತು ಬಡತನಗಳನ್ನು ನಿರ್ಮೂಲನೆಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯವಶ್ಯ. ಮಾನವನ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಪಡೆದುಕೊಡಂಲ್ಲಿ ಸಮಾಜದಲ್ಲಿನ ಬಡತನ ಮತ್ತು ಅಜ್ಞಾನಗಳು ತೊಲಗುತ್ತವೆ. ಇತ್ತೀಚೆಗೆ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದಾಗಿ ಅನೇಕ ಆವಿಷ್ಕಾರಗಳನ್ನು ಕಂಡಿದೆ.
ಜಗತ್ತಿನ ಯಾವುದೇ ಮೂಲೆಯಲ್ಲಿ ಸಂಭವಿಸುವ ಯಾವುದೇ ರೀತಿಯ ಘಟನೆಗಳನ್ನು ತಂತ್ರಜ್ಞಾನದ ಮೂಲಕ ಪಡೆಯಬಹುದಾಗಿದೆ. ಈ ಹಿಂದೆ ಆಪಲ್ ಎಂಬ ಮೊಬೈಲ್ ಇತ್ತು ಅದನ್ನು ದೊಡ್ಡ ಆವಿಷ್ಕಾರ ಎಂದೇ ಪರಿಗಣಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಜಪಾನ್ ಮತ್ತು ಚೀನಾದ ವಿಜ್ಞಾನಿಗಳನ್ನು ನಾನಾ ರೀತಿಯ ಮೊಬೈಲ್ ಗಳನ್ನು ಆವಿಷ್ಕರಿಸಿದರು. ಅದೇ ಮಾರ್ಗವನ್ನು ಅನುಸರಿಸಿ ಭಾರತದ ವಿಜ್ಞಾನಿಗಳು ಹೊಸ ಹೊಸ ಆವಿಷ್ಕಾರಗಳಲ್ಲಿ ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯ ರೆಡ್ಡಿ, ಲೋಕೋಪಯೋಗಿ ಸಚಿವ ಹೆಚ್.ಸಿ ಮಪದೇವಪ್ಪ, ಸಂಸದ ಪ್ರತಾಪ್ ಸಿಂಹ, ಮೇಯರ್ ಭೈರಪ್ಪ, ಶಾಸಕ ವಾಸು, ಡಾ.ಧನಂಜಯ, ಡಾ.ಸಂಗಮೇಶ್ವರ ಉಪಸ್ಥಿತರಿದ್ದರು. ದಿವ್ಯ ಸಾನಿಧ್ಯವನ್ನು ಸುತ್ತೂರು ಕ್ಷೇತ್ರದ ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು.
Comments are closed.