ಕಲಬುರ್ಗಿ ಜುಲೈ 23 : ಪೊಲೀಸ್ ಪೇದೆಯೊಬ್ಬ ಆರು ವರ್ಷದಿಂದ ಯುವತಿಯೊಬ್ಬಳ ಜೊತೆ ಪ್ರೀತಿ ಪ್ರೇಮ ಅಂತ ಚಕ್ಕಂದ ಆಡಿ ಕಡೆಗೆ ಕೈಕೊಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೇಮವಂಚನೆಯಿಂದ ಆಕ್ರೋಶಗೊಂಡಿರುವ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.
ಆರೋಪಿಯನ್ನು ಕಲಬುರಗಿ ಜಿಲ್ಲೆ ಅಫಜಲಪುರ ಠಾಣೆಯ ಪೇದೆ ಆನಂದ ಹಿರೇಮಠ ಎಂದು ಗುರುತಿಸಲಾಗಿದೆ.
ಧಾರವಾಡ ಮೂಲದ ಸ್ಟಾಫ್ ನರ್ಸ್ ಸಾವಿತ್ರಿ ಆರೋಪಿಸಿರುವ ಪ್ರಕಾರ, ಪೇದೆ ಆನಂದ ಹಿರೇಮಠ ಆಕೆಯೊಂದಿಗೆ ನಿರಂತರ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದನಂತೆ. ಅಲ್ಲದೇ ಆಕೆಗೆ ಮಾಂಗಲ್ಯ ಸಹ ಕಟ್ಟಿ ಗೌಪ್ಯವಾಗಿ ಮದುವೆಯೂ ಆಗಿದ್ದ. ಆದ್ರೆ ಕಳೆದ ವರ್ಷ ಏಕಾಏಕಿ ಬೇರೊಂದು ಹುಡುಗಿಯನ್ನು ಮದುವೆಯಾಗಿದ್ದಾನೆ. ಇದರಿಂದ ಕೆರಳಿದ ಪ್ರೇಯಸಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬೆಂಗಳೂರಿನಲ್ಲಿ ದೇವಸ್ಥಾನದಲ್ಲಿ ಸಾವಿತ್ರಿಯ ಕೈಹಿಡಿದಿದ್ದಾನೆ ಆನಂದ ಹಿರೇಮಠ. ಕುಟುಂಬದವರಿಗೆ ಮುಂದೊಂದು ದಿನ ತಿಳಿಸಿದರಾಯಿತು ಎಂದು ಹೇಳಿ ವರಿಸುತ್ತಾನೆ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹನುಮಂತನಗರದಲ್ಲಿ ರೂಮ್ ಮಾಡಿಕೊಂಡಿದ್ದ ಪೇದೆ ಆನಂದ ಹಿರೇಮಠ ತನ್ನ ಪ್ರೇಯಸಿಯನ್ನು ಬೇಕೆಂದಾಗೆಲ್ಲಾ ಕರೆಸಿಕೊಳ್ಳುತ್ತಿರುತ್ತಾನೆ. ಪ್ರಿಯಕರನ ಕರೆಗೆ ಓಗೊಟ್ಟು ಆ ಅಮಾಯಕ ಹೆಣ್ಮಗಳು ಈತನ ರೂಮಿನಲ್ಲಿ ಎರಡು ಮೂರು ದಿನಗಳ ಕಾಲ ಉಳಿದುಕೊಳ್ಳುತ್ತಿರುತ್ತಾಳೆ. ಈ ರೀತಿಯಲ್ಲಿ ಹಲವು ಬಾರಿ ನಡೆಯುತ್ತದೆ.
ಕಲಬುರ್ಗಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಡಿ ಎಂದು ಈಕೆ ಕೇಳಿಕೊಂಡರೂ ಸುಮ್ಮನೆ ದಿನ ದೂಡುತ್ತಿದ್ದನಂತೆ. ಇದ್ದಕ್ಕಿದ್ದಂತೆ ಒಂದು ದಿನ ಆತ ತಾನು ಮನೆಯವರ ಬಲವಂತಕ್ಕೆ ಕಟ್ಟುಬಿದ್ದು ಬೇರೆ ಮದುವೆಯಾಗಿದ್ದೇನೆ ಎಂದಾಗ ಸಾವಿತ್ರಿಗೆ ಆಘಾತವಾಗುತ್ತದೆ. ಅಷ್ಟೇ ಅಲ್ಲ, ಆನಂದನನ್ನು ವರಿಸಿದ ಆ ಯುವತಿಯೇ ಖುದ್ದಾಗಿ ಸಾವಿತ್ರಿಗೆ ಫೋನ್ ಮಾಡಿ ತನ್ನ ಗಂಡನನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿರುತ್ತಾಳೆ. ಇಷ್ಟಾದರೂ ತನ್ನ ಬುದ್ಧಿಬಿಡದ ಪೇದೆ ಆನಂದ ಹಿರೇಮಠ, ಸಾವಿತ್ರಿ ಜೊತೆ ಹೀಗೆಯೇ ಸಂಬಂಧ ಮುಂದುವರಿಸಲು ನಿರ್ಧರಿಸುತ್ತಾನೆ.
ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಸಾವಿತ್ರಿ ದೂರು ಕೂಡ ದಾಖಲಿಸಿದ್ದಾಳೆ. ಆದರೆ, ಯಾವುದೇ ಉಪಯೋಗವಾಗದೇ ಹೋದ್ದರಿಂದ ಮಾಧ್ಯಮದ ಮೊರೆ ಹೋಗಿದ್ದಾಳೆ ಈಕೆ. ತಾನು ಮೊದಲನೇ ಹೆಂಡತಿ. ತನ್ನನ್ನು ಗಂಡ ತನ್ನ ಮನೆಗೆ ಸೇರಿಸಿಕೊಳ್ಳಬೇಕು. ತನಗೆ ನ್ಯಾಯ ಬೇಕು ಎಂದು ಪರಿತಪಿಸುತ್ತಿರುವ ಸಾವಿತ್ರಿಗೆ ನ್ಯಾಯ ಸಿಗುತ್ತದಾ?
Comments are closed.