
ಬೆಂಗಳೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಜಾರ್ಖಂಡ್‍ನ ಸಬಿಯನ್‍ದೋಂಗ್(40) ಕೊಲೆಯಾದ ದುರ್ದೈವಿ.ಕುಡತಿಗೇಟ್‍ನಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣವಾಗುತ್ತಿದ್ದು, ಇಲ್ಲಿ ಜಾರ್ಖಂಡ್ ಮೂಲದ ಸಬಿಯಾನದೊಂಗ್, ಪ್ರಕಾಶ್ ಸೇರಿದಂತೆ ನಾಲ್ವರು ಕಟ್ಟಡ ಕಾರ್ಮಿಕರು ಕೆಲಸ ಮಾಡಿಕೊಂಡು ಇಲ್ಲಿನ ಲೇಬರ್ ಶೆಡ್‍ನಲ್ಲಿ ವಾಸವಾಗಿದ್ದರು. ಸಬಿಯಾನ ಈ ಕಟ್ಟಡದಲ್ಲಿ ಬಾರ್ ಬೆಂಡಿಂಗ್ ಮತ್ತು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದನು.
ರಾತ್ರಿ ಈ ನಾಲ್ವರು ಹೊರಗೆ ಹೋಗಿ ಮದ್ಯ ಸೇವಿಸಿ ವಾಪಾಸಾಗುತ್ತಿದ್ದಾಗ ಶೆಡ್ ಸಮೀಪದ 50 ಮೀಟರ್ ಅಂತರದಲ್ಲಿ ಪ್ರಕಾಶ್ ಮಾರ್ಗಮಧ್ಯೆ ಬಿದ್ದಿದ್ದಾನೆ. ಈ ವೇಳೆ ಸ್ನೇಹಿತರು ಶೆಡ್‍ಗೆ ವಾಪಸಾಗಿದ್ದಾರೆ. ಕೆಲ ಸಮಯದ ಬಳಿಕ ಪ್ರಕಾಶ್ ಎದ್ದು ಶೆಡ್‍ಗೆ ಬಂದು ಸ್ನೇಹಿತರೊಂದಿಗೆ ಜಗಳವಾಡಿದ್ದಾನೆ. ನಾನು ಬಿದ್ದರೂ ನನ್ನನ್ನು ನಿಮ್ಮ ಜತೆ ಏಕೆ ಕರೆದುಕೊಂಡು ಬಾರದೆ ಅಲ್ಲೇ ಬಿಟ್ಟು ಬಂದಿದ್ದೀರಿ ಎಂದು ಪ್ರಕಾಶ್ ಬೈದಿದ್ದಾನೆ.
ಈ ವೇಳೆ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ಸಬಿಯಾನ ಕೈಗೆ ಸಿಕ್ಕ ಸುತ್ತಿಗೆಯಿಂದ ಪ್ರಕಾಶ್‍ಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಪ್ರಕಾಶನೂ ಸುತ್ತಿಗೆ ಎತ್ತಿಕೊಂಡು ಬಲವಾಗಿ ಸಬಿಯಾನ ಹಣೆಗೆ ಹೊಡೆದಿದ್ದರಿಂದ ಕುಸಿದು ಬಿದಿದ್ದಾನೆ. ಶೆಡ್‍ನಲ್ಲಿ ಗಲಾಟೆ ನಡೆಯುತ್ತಿರುವ ಶಬ್ಧ ಕೇಳಿ ಮೇಸ್ತ್ರಿ ಬಂದು ನೋಡಿದಾಗ ಸಬಿಯಾನ ಅಸ್ವಸ್ಥಗೊಂಡಿದ್ದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ಈತನನ್ನು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಶವವನ್ನು ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಮೇಸ್ತ್ರಿ ವರ್ತೂರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಶೆಡ್‍ನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
Comments are closed.