ಬಳ್ಳಾರಿ :ಜಿಲ್ಲೆಯ ಹೂವಿನ ಹಡಗಲಿಯ ಮೈಲಾರ ಗ್ರಾಮದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಪಾಲಾಗುತ್ತಿದ್ದ ಐವರನ್ನು ರಕ್ಷಿಸಿದ ಬಳಿಕ ಭಾವಿ ಯೋಧನೊಬ್ಬ ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಭಾನುವಾರ ನಡೆದಿದೆ.
ನೀರು ಪಾಲಾದ ಯುವಕ ಗದಗ ನಿವಾಸಿ ಪ್ರಭು (21) ಎನ್ನುವವನಾಗಿದ್ದು,ಸೇನೆಗೆ ಆಯ್ಕೆಯಾಗಿದ್ದು ಮುಂದಿನ ತಿಂಗಳು ಸೇರ್ಪಡೆಯಾಗುವವನಿದ್ದ.
ಪ್ರವಾಸಕ್ಕೆ ಬಂದಿದ್ದ 20 ಮಂದಿಯ ಕುಟುಂಬ ಸದಸ್ಯರು ಸ್ನಾನಕ್ಕಿಳಿದಿದ್ದ ವೇಳೆ ಐವರು ನೀರಿತ ಸೆಳೆತಕ್ಕೆ ಸಿಲುಕಿದ್ದಾರೆ. ಈ ವೇಳೆ ರಕ್ಷಣೆಗೆ ಧಾವಿಸಿದ ಪ್ರಭು ಎಲ್ಲರನ್ನೂ ರಕ್ಷಿಸಿದ್ದಾನೆ. ದುರದೃಷ್ಟವಷಾತ್ ಆತ ನೀರಿನ ಆಳಕ್ಕೆ ಸಿಲುಕಿ ಮೇಲೆ ಬರಲು ಸಾಧ್ಯವಾಗಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಮಲಕಪ್ಪ ಎಂಬಾತ ಪ್ರಭುವನ್ನು ರಕ್ಷಣೆ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನದಿಯಾಳದಲ್ಲಿದ್ದ ಪ್ರಭು ಶವವನ್ನು ಮೇಲಕ್ಕೆ ತರಲಾಗಿದೆ ಎಂದು ವರದಿಯಾಗಿದೆ.
ಸೇನೆಗೆ ಸೇರಿ ದೇಶ ಸೇವೆ ಮಾಡುವ ಮುನ್ನವೆ ಐವರ ಜೀವ ಉಳಿಸಿರುವ ಪ್ರಭು ಸಾವಿನಲ್ಲೂ ಸಾರ್ಥಕ ಎನಿಸಿಕೊಂಡಿದ್ದಾರೆ.
-ಉದಯವಾಣಿ
Comments are closed.