ಕರ್ನಾಟಕ

ವಾಣಿ ವಿಲಾಸ ಆಸ್ಪತ್ರೆಯಿಂದ ಮಗು ಅಪಹರಿಸಿದ ಪ್ರಕರಣ: ಆರೋಪಿ ಸುಳಿವು ನೀಡಿತ್ತು ‘ಶಿಶುವಿನ ಅಳು’!

Pinterest LinkedIn Tumblr

maguuuಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯಿಂದ ಅಪಹರಣವಾಗಿದ್ದ ನವಜಾತ ಶಿಶುವನ್ನು ಪೊಲೀಸರು ಶನಿವಾರ ಪತ್ತೆ ಹಚ್ಚಿದ್ದು, ಸುರಕ್ಷಿತವಾಗಿ ತಾಯಿ ಮಡಿಲು ಸೇರಿಸಿದ್ದಾರೆ.

‘ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಆರೋಪಿ ಬಸವೇಶ್ವರನಗರದ ಭೋವಿ ಕಾಲೊನಿಯ ದೇವಿಬಾಯಿ (24) ಎಂಬಾಕೆಯನ್ನು ಬಂಧಿಸಲಾಗಿದೆ’ಎಂದು ವಿಕ್ಟೋರಿಯಾ ಠಾಣೆ ಪೊಲೀಸರು ತಿಳಿಸಿದರು.

‘ಆರೋಪಿಯ ಪತಿ ಕೂಲಿ ಕಾರ್ಮಿಕರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಈ ದಂಪತಿಗೆ 8 ವರ್ಷದ ಬಾಲಕನಿದ್ದಾನೆ. ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಆರಂಭದಲ್ಲಿ  ಗಂಡು ಮಗು ಜನಿಸಿತ್ತು. ದೇವಿಬಾಯಿ, ಎರಡು ಬಾರಿ ಗರ್ಭ ಧರಿಸಿದರೂ ಆರೋಗ್ಯ ಸಮಸ್ಯೆಯಿಂದಾಗಿ ಗರ್ಭಪಾತ ಆಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದಕ್ಕಾಗಿ ಆಗಾಗ ವಾಣಿ ವಿಲಾಸ ಆಸ್ಪತ್ರೆಗೆ ಬಂದು ಹೋಗುತ್ತಿದ್ದಳು’ ಎಂದು ಮಾಹಿತಿ ನೀಡಿದರು.

‘ಜುಲೈ 12ರಂದು ಆಸ್ಪತ್ರೆಗೆ ದಾಖಲಾಗಿದ್ದ ರಾಜಸ್ತಾನ ಮೂಲದ ರೇಖಾ (24) ಎಂಬುವರಿಗೆ ಜುಲೈ 13ರಂದು ರಾತ್ರಿ 2.25ರ ಸುಮಾರಿಗೆ ಹೆಣ್ಣು ಮಗು ಜನಿಸಿತ್ತು. ರೇಖಾ ಅವರ ತಾಯಿ ಹೀನಾದೇವಿ, ಮಗುವನ್ನು ಎತ್ತಿಕೊಂಡು ಮಧ್ಯಾಹ್ನ ಆಸ್ಪತ್ರೆ ಆವರಣದ ಕಟ್ಟೆಯೊಂದರಲ್ಲಿ ಕುಳಿತಿದ್ದರು. ಈ ವೇಳೆ ದೇವಿಬಾಯಿ ಸಹ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದಳು’ ಎಂದು ಪೊಲೀಸರು ವಿವರಿಸಿದರು.

‘ಹೀನಾದೇವಿ ಅವರನ್ನು ಪರಿಚಯ ಮಾಡಿಕೊಂಡ ದೇವಿಬಾಯಿ, ಪೂರ್ವಾಪರ ವಿಚಾರಿಸಿದ್ದಳು. ಅವರ ಕೈಯಲ್ಲಿದ್ದ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಳು. ಈ ವೇಳೆ  ಹೀನಾದೇವಿ, ಶೌಚಾಲಯಕ್ಕೆ ಹೋಗುತ್ತೇನೆ ಎಂದು ಹೇಳಿ ಮಗುವನ್ನು ಕೈಗೆ ಕೊಟ್ಟು ಹೋಗಿದ್ದರು. ಅವಾಗಲೇ ಮಗು ಸಮೇತ ದೇವಿಬಾಯಿ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ಭೋವಿ ಕಾಲೊನಿಯಲ್ಲಿರುವ ತನ್ನ ಎರಡು ಕೊಠಡಿಯ ಮನೆಗೆ ಶಿಶುವನ್ನು ಕರೆದೊಯ್ದಿದ್ದ ದೇವಿಬಾಯಿ, ಅದನ್ನು ತೊಟ್ಟಿಲಿನಲ್ಲಿ ಮಲಗಿಸಿದ್ದಳು’.
‘ಕೆಲಹೊತ್ತು ಸುಮ್ಮನೇ ಮಲಗಿದ್ದ ಮಗು, ಸಂಜೆ  ಎಚ್ಚರವಾಗಿ ಅಳಲು ಆರಂಭಿಸಿತ್ತು. ಈ ವೇಳೆ ಮಗುವಿಗೆ ಪ್ಯಾಕೆಟ್‌ ಹಾಲು ಕುಡಿಸಲಾಗಿತ್ತು. ಅಷ್ಟಾದರೂ ಮಗು ಅಳುವುದನ್ನು ನಿಲ್ಲಿಸಿರಲಿಲ್ಲ. ದಿನದಿಂದ ದಿನಕ್ಕೆ ಅಳು ಹೆಚ್ಚಾಗಿತ್ತು’.

‘ಮಗುವಿನ ಅಳು ವಿಪರೀತವಾಗುತ್ತಿದ್ದಂತೆ ನೆರೆಹೊರೆಯವರಿಗೆ ವಿಷಯ ಗೊತ್ತಾಗಿತ್ತು. ದೇವಿಬಾಯಿಗೆ ಮಕ್ಕಳಿಲ್ಲ. ಅಳುತ್ತಿರುವ ಮಗು ಯಾರದ್ದು? ಎಂಬ ಅನುಮಾನ ಬಂದಿತ್ತು. ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ಸಹ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಶಿಶುವನ್ನು ಅಪಹರಿಸಿ ತಂದಿದ್ದನ್ನು ದೇವಿಬಾಯಿ ಒಪ್ಪಿಕೊಂಡಿದ್ದಾಳೆ’ ಎಂದು ಪೊಲೀಸರು ವಿವರಿಸಿದರು.
*
ಹೆಣ್ಣು ಮಗುವಿನ ಆಸೆ
‘ಆರೋಪಿ ದೇವಿಬಾಯಿಗೆ ಈಗಾಗಲೇ ಗಂಡು ಮಗುವಿರುವುದರಿಂದ ಹೆಣ್ಣು ಮಗು ಬೇಕು ಎಂಬ ಆಸೆ ಇತ್ತು. ಗರ್ಭಪಾತದಿಂದಾಗಿ ಆ ಆಸೆ ಈಡೇರಿರಲಿಲ್ಲ. ಹೀಗಾಗಿ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು’ ಎಂದು ತನಿಖಾಧಿಕಾರಿಯ ತಿಳಿಸಿದರು.

‘ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗಲೆಲ್ಲ ಹೆಣ್ಣು ಮಗು ಎತ್ತಿಕೊಂಡವರು ಕಂಡರೆ ಅವರ ಬಳಿ ಹೋಗಿ ಮಾತನಾಡಿಸುತ್ತಿದ್ದಳು. ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿದ್ದಳು. ಆದರೆ ಇದೇ ಮೊದಲ ಬಾರಿಗೆ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಳು’ ಎಂದು  ಅವರು ಮಾಹಿತಿ ನೀಡಿದರು.

Comments are closed.