ಕರ್ನಾಟಕ

ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಅಹೋರಾತ್ರಿ ಧರಣಿಗಿಳಿದ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌

Pinterest LinkedIn Tumblr

2

ಬೆಂಗಳೂರು: ‘ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯಾಂಗ ವಿಚಾರಣೆ ನಡೆಸಲು ಸಿದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು. ಆದರೆ, ಅದಕ್ಕೆ ಒಪ್ಪದ ಸದಸ್ಯರು, ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿರೋಧಪಕ್ಷದ ಸದಸ್ಯರು, ‘ಜಾರ್ಜ್‌ ಅವರನ್ನು ಸಂಪುಟದಿಂದ ತಕ್ಷಣವೇ ವಜಾ ಮಾಡಿ, ಎಫ್‌ಐಆರ್‌ ದಾಖಲಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಪಟ್ಟು ಹಿಡಿದರು.

ಪೊಲೀಸ್‌ ಅಧಿಕಾರಿಗಳ ಆತ್ಮಹತ್ಯೆ ಕುರಿತು ವಿಧಾನಸಭೆಯಲ್ಲಿ ಎರಡು ದಿನ ಸುದೀರ್ಘವಾಗಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಅಷ್ಟೇ ವಿವರವಾಗಿ ಉತ್ತರ ನೀಡಿದರು.

‘ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಒಬ್ಬರಿಂದ ಪ್ರಕರಣದ ವಿಚಾರಣೆ ಮಾಡಿಸಿ, ಆರು ತಿಂಗಳಲ್ಲೇ ವರದಿ ಪಡೆಯಲಾಗುವುದು’ ಎಂದು ಅವರು ಪ್ರಕಟಿಸಿದರು. ಮುಖ್ಯಮಂತ್ರಿಗಳ ತೀರ್ಮಾನ ವಿರೋಧ ಪಕ್ಷಗಳ ಸದಸ್ಯರಿಗೆ ಸಮಾಧಾನ ತರಲಿಲ್ಲ. ಹಿಡಿದ ಪಟ್ಟಿನಿಂದ ಒಂದಿಂಚೂ ಅವರು ಹಿಂದೆ ಸರಿಯಲಿಲ್ಲ.

ಸಿದ್ದರಾಮಯ್ಯ ಅವರ ಉತ್ತರದ ಉದ್ದಕ್ಕೂ ಆರೋಪ– ಪ್ರತ್ಯಾರೋಪಗಳ ಅಬ್ಬರ ಜೋರಾಗಿತ್ತು. ‘ಸರ್ಕಾರದಲ್ಲಿ ಇರುವವರು ಭಂಡರು’ ಎಂದು ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸಿಟ್ಟಿನಿಂದ ಹೇಳಿದರೆ, ‘ನೀವು ಭಂಡರು… ಜೈಲಿಗೆ ಹೋದವರು, ರೇಪ್‌ ಮಾಡಿದವರೂ ನಿಮ್ಮಲ್ಲಿದ್ದಾರೆ’ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

‘ಜಾರ್ಜ್‌ ಅವರು ನಿರಪರಾಧಿ. ಸೇಡಿನ ರಾಜಕಾರಣ ಮಾಡದ ಅವರಿಂದ ರಾಜಿನಾಮೆ ಪಡೆಯುವ ಪ್ರಶ್ನೆಯೇ ಇಲ್ಲ. ಗಣಪತಿ ಅವರು ಹೆಸರಿಸಿರುವ ಇಬ್ಬರು ಅಧಿಕಾರಿಗಳು (ಎ.ಎಂ. ಪ್ರಸಾದ್, ಪ್ರಣವ್‌ ಮೊಹಂತಿ) ಅವರೂ ಯಾವುದೇ ತಪ್ಪು ಮಾಡಿಲ್ಲ. ತನಿಖೆ ಸಂದರ್ಭದಲ್ಲಿ ಅವರ ಪಾತ್ರ ಏನಾದರೂ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

‘ನಿಮ್ಮ ಸಚಿವರು ಹಾಗೂ ಅಧಿಕಾರಿಗಳು ತಪ್ಪೇ ಮಾಡಿಲ್ಲ ಎಂದು ಮೊದಲೇ ನೀವು ತೀರ್ಮಾನಿಸಿದ ಮೇಲೆ ತನಿಖೆಯಿಂದ ಸತ್ಯ ಬಯಲಾಗುವುದೇ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಗಣಪತಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

‘ಬಿಜೆಪಿ ಆಡಳಿತವಿದ್ದಾಗ 13 ಪ್ರಕರಣಗಳನ್ನು ಸಿಬಿಐ ತನಿಖೆಗಾಗಿ ಒತ್ತಾಯಿಸಿದ್ದೆವು. ಆದರೆ, ಒಂದನ್ನೂ ಕೊಡಲಿಲ್ಲ. ಸಾವಿರಾರು ಕೋಟಿಯ ಗಣಿ ಹಗರಣವನ್ನೂ ಸಿಬಿಐಗೆ ವಹಿಸಲಿಲ್ಲ’ ಎಂದರು.

‘ಸಿಬಿಐ ಎಂದರೆ ಕಾಂಗ್ರೆಸ್‌ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌, ಚೋರ್‌ ಬಚಾವ್‌ ಇನ್‌ಸ್ಟಿಟ್ಯೂಷನ್‌ ಎಂದು ಟೀಕೆ ಮಾಡಿದಿರಿ. ನರೇಂದ್ರ ಮೋದಿ ಅವರು ಪ್ರಧಾನಿ ಆದೊಡನೆ ಎಲ್ಲವೂ ಬದಲಾಗಿ ಅದು ಪವಿತ್ರ ಗಂಗೆ ಆಯಿತೆ’ ಎಂದು ಕೆಣಕಿದರು.

‘ಭಯ ಇದ್ದವರು ಸಿಬಿಐ ತನಿಖೆಗೆ ಮುಂದಾಗಲಿಲ್ಲ. ನಮಗೆ ಯಾವುದೇ ಭಯವಿಲ್ಲ. ಎಂಟು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೇವೆ. ಈ ಪ್ರಕರಣದಲ್ಲಿ ಸಿಐಡಿ ತನಿಖೆಯೇ ಸಾಕಾಗಿತ್ತು. ಆದರೆ, ನ್ಯಾಯಾಂಗ ಆಯೋಗದಿಂದಲೂ ವಿಚಾರಣೆ ನಡೆಸಲು ಮುಂದಾಗಿದ್ದೇವೆ’ ಎಂದು ಅವರು ಹೇಳಿದರು.

‘ತನಿಖೆ ಆರಂಭಿಸುವ ಮುನ್ನವೇ ಆರೋಪ ಎದುರಿಸುತ್ತಿರುವ ವ್ಯಕ್ತಿಗಳಿಗೆ ಮುಗ್ಧರು ಎಂದು ನೀವೇ ಪ್ರಮಾಣಪತ್ರ ನೀಡಿದ ಮೇಲೆ ವಿಚಾರಣೆ ಯಾವ ದಿಕ್ಕಿನಲ್ಲಿ ನಡೆಯಲಿದೆ ಎಂಬುದು ಗೊತ್ತಾಗುತ್ತದೆ. ಇದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವಲ್ಲದೆ ಬೇರೇನಲ್ಲ’ ಎಂದು ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

ಜಾರ್ಜ್‌ ಅವರನ್ನು ವಜಾ ಮಾಡಬೇಕು ಎಂದು ವಿರೋಧಪಕ್ಷದ ಸದಸ್ಯರು ಬಿಗಿಪಟ್ಟು ಹಿಡಿದರೆ, ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಅಷ್ಟೇ ಖಡಕ್ಕಾಗಿ ಉತ್ತರ ನೀಡಿದರು. ಆಗ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಅಹೋರಾತ್ರಿ ಧರಣಿ ಆರಂಭಿಸಿದರು.
*
ವಿಷಾದ ವ್ಯಕ್ತಪಡಿಸಿದ ಸಿ.ಎಂ
‘ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಖಿನ್ನತೆಗೆ ಒಳಗಾಗಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿರುವ ಅಂಶವನ್ನು ಪ್ರಸ್ತಾಪಿಸಿದ್ದರಿಂದ ಅವರ ಪತ್ನಿ ಪಾವನಾ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ನಮಗೂ ಮಾನವೀಯತೆ ಇದೆ. ದೂರಿನ ಅಂಶವನ್ನು ಯಥಾವತ್ತಾಗಿ ಗೃಹ ಸಚಿವರ ಸ್ವಯಂಪ್ರೇರಣೆ ಹೇಳಿಕೆಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಯಾರನ್ನೋ ನೋಯಿಸುವ ಅಥವಾ ತೇಜೋವಧೆ ಮಾಡುವ ಉದ್ದೇಶ ಇರಲಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಗಣಪತಿ ಅವರ ಪತ್ನಿಗೆ ಸಾವಿನ ಸುದ್ದಿ ತಿಳಿಸಿಲ್ಲ ಎಂಬುದು ಸುಳ್ಳು ಮಾಹಿತಿ. ಇನ್‌ಸ್ಪೆಕ್ಟರ್‌ ಮೇದಪ್ಪ ಎರಡು ಸಲ ದೂರವಾಣಿ ಕರೆಮಾಡಿ ಪಾವನಾ ಅವರೊಂದಿಗೆ ಮಾತನಾಡಿದ್ದಾರೆ. ಮಡಿಕೇರಿಗೆ ಬರುತ್ತಿರುವುದನ್ನು ಖಚಿತ ಮಾಡಿಕೊಂಡಿದ್ದಾರೆ. ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ’ ಎಂದರು.
*
ಡಿವೈಎಸ್ಪಿ ಎಂ.ಕೆ. ಗಣಪತಿ ಅವರು ನೀಡಿದ ಹೇಳಿಕೆಗೂ ಅವರ ಆತ್ಮಹತ್ಯೆಗೂ ಸಂಬಂಧವಿಲ್ಲ.
-ಸಿದ್ದರಾಮಯ್ಯ
ಮುಖ್ಯಮಂತ್ರಿ

*
ಡಿವೈಎಸ್ಪಿ ಕಲ್ಲಪ್ಪ ಪತ್ನಿಗೆ ಕೆಲಸ
ಬೆಂಗಳೂರು: ‘ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಅವರ ಪತ್ನಿ ವಿದ್ಯಾ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸವನ್ನು ನೀಡಲಿದ್ದು, ಸಾಧ್ಯವಾದ ಸಹಾಯ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಪ್ರಕಟಿಸಿದರು. ‘ಕಲ್ಲಪ್ಪ ಅವರ ಪ್ರಕರಣದಲ್ಲಿ ರಾಜಕಾರಣಿಗಳ ಪಾತ್ರವಿರುವ ಕುರಿತು ದೂರುಗಳಿದ್ದು, ಸಿಐಡಿ ಎಲ್ಲ ಅಂಶಗಳ ಮೇಲೂ ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.

Comments are closed.