ಕರ್ನಾಟಕ

ಡಿವೈಎಸ್‌ಪಿ ಸಂಸಾರಕ್ಕೆ ಅಪಮಾನದ ಲೇಪ

Pinterest LinkedIn Tumblr

ganapathiಮಡಿಕೇರಿ, ಜು. ೧೨- ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರು ವಿಧಾನ ಮಂಡಲದಲ್ಲಿ ನೀಡಿರುವ ಹೇಳಿಕೆ ಇಡೀ ಕುಟುಂಬಕ್ಕೆ ಮಾಡಿರುವ ಅಪಮಾನ ಎಂದು ಗಣಪತಿ ಕುಟುಂಬ ವರ್ಗದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಣಪತಿ ಕುಟುಂಬ ವರ್ಗದವರು ಇಂದು ಇಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಗೃಹ ಸಚಿವರ ಹೇಳಿಕೆ ಬಗ್ಗೆ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.

ಸೊಸೆ ವಿರುದ್ಧ ದೂರು ಇಲ್ಲ
ಗಣಪತಿ ಅವರ ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆ ಕಾರಣ ಎಂದು ಸರ್ಕಾರ ಕಥೆ ಕಟ್ಟಿ ಬಣ್ಣಿಸಿರುವುದನ್ನು ಗಣಪತಿ ಅವರ ತಂದೆ, ಪತ್ನಿ ಹಾಗೂ ಮಕ್ಕಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೊಸೆ ವಿರುದ್ಧ ದೂರು ದಾಖಲಿಸಿರುವ ಹೇಳಿಕೆಯನ್ನು ಗಣಪತಿ ತಂದೆ ಕುಶಾಲಪ್ಪ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಜುಲೈ 7 ರಂದು ರಾತ್ರಿ 8.30ರ ಸುಮಾರಿಗೆ ದೂರವಾಣಿ ಕರೆ ಬಂದಿತು. ಅನಂತರ 9.30ರ ಸುಮಾರಿಗೆ ನಾನು ಗಣಪತಿ ಆತ್ಮಹತ್ಯೆ ಮಾಡಿಕೊಂಡ ವಸತಿ ಗೃಹಕ್ಕೆ ತೆರಳಿದೆ. ಆದರೆ ಅಲ್ಲಿದ್ದ ಪೊಲೀಸರು ನನ್ನನ್ನು ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯ ಪಕ್ಕದ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು ಎಂಬುದಾಗಿ ಕುಶಾಲಪ್ಪ ಅವರು ಅಂದು ನಡೆದ ಘಟನಾವಳಿಗಳನ್ನು ಸವಿವರವಾಗಿ ಹೇಳಿಕೊಂಡಿದ್ದಾರೆ.
ಮೃತದೇಹ ತೋರಿಸಲು ಹೇಳಿಕೆಗೆ ಸಹಿ
ಗಣಪತಿ ಮೃತದೇಹ ನೋಡಬೇಕು ಎಂದು ಪೊಲೀಸರಲ್ಲಿ ಅವಲತ್ತುಗೊಂಡಾಗ ಹೇಳಿಕೆಗೆ ಸಹಿ ನೀಡುವಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಾಕೀತು ಮಾಡಿದರು. ತಾವು ಹೇಳಿಕೆ ನೀಡುವ ಮನಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದಾಗ ಅವರೇ ಒಂದು ಹೇಳಿಕೆ ಸಿದ್ಧಪಡಿಸಿ ಸಹಿ ಹಾಕಿಸಿಕೊಂಡರು. ಆಗ ಅವರು ಅದನ್ನು ಓದಿ ಹೇಳಿದರೂ ಕೂಡ ಅದನ್ನು ಪರಾಮರ್ಶಿಸುವ ಗಳಿಗೆ ಅದಾಗಿರಲಿಲ್ಲ ಎಂದು ಕುಶಾಲಪ್ಪ ವಿವರಿಸಿದ್ದಾರೆ.
ಪೊಲೀಸರಿಗೆ ಈ ಸಂಬಂಧ ಸೊಸೆಯ ವಿರುದ್ಧವಾಗಲಿ ಅಥವಾ ಇನ್ನಾರ ವಿರುದ್ಧವೇ ಆಗಲಿ ತಾವು ದೂರು ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕಾಗದ ಎಲ್ಲಿ?
ತಮಗೆ ಅನುಕೂಲ ಆಗುವ ರೀತಿಯಲ್ಲಿ ಸಿದ್ಧಪಡಿಸಿದ ಹೇಳಿಕೆಗೆ ಸಹಿ ಹಾಕಿಸಿಕೊಂಡ ಪೊಲೀಸರು, ಮಗನ ಮೃತದೇಹ ಇದ್ದ ಕೊಠಡಿಗೆ ಹೋಗಲು ಕುಟುಂಬದ ಸದಸ್ಯರನ್ನು ಬಿಟ್ಟರು. ಅಲ್ಲಿ ಒಂದು ಕೀ ಹಾಗೂ ಕಾಗದ ಕೂಡ ಕಂಡುಬಂದವು. ಬಹುಶಃ ಆ ಕಾಗದವೇ ಮರಣಪತ್ರವಾಗಿರಬೇಕು ಎಂದು ಕುಶಾಲಪ್ಪ ಶಂಕಿಸಿದ್ದಾರೆ.
ಆದರೆ ಅಲ್ಲಿಗೆ ಕರೆದೊಯ್ದ ಪೊಲೀಸರು ಮಾತ್ರ ನಮಗೆ ಅಲ್ಲಿ ಕಂಡು ಬಂದ ವಸ್ತುಗಳ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಲೇ ಇಲ್ಲ ಎಂದು ಕುಶಾಲಪ್ಪ ಆರೋಪಿಸಿದ್ದಾರೆ.

Comments are closed.