ಕರ್ನಾಟಕ

ಹಾಸನ ಬಳಿ ಅಪಘಾತ: ಮೂವರು ಟೆಕಿಗಳು ಸಾವು

Pinterest LinkedIn Tumblr

carಹಾಸನ: ನಗರದ ಹೊರವಲಯದಲ್ಲಿ ಶನಿವಾರ ಮಧ್ಯರಾತ್ರಿ ಖಾಸಗಿ ಬಸ್‌ ಮತ್ತು ಇನ್ನೋವಾ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಮೂವರು ಸಾಫ್ಟ್ವೇರ್‌ ಇಂಜಿನಿಯರ್‌ಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರು ಇಂಜಿನಿಯರ್‌ಗಳನ್ನು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ -75 ರ ಬೈಪಾಸ್‌ನಲ್ಲಿ ರಾಜೀಬ್‌ ಇಂಜಿನಿಯರಿಂಗ್‌ ಕಾಲೇಜು ಸಮೀಪ ರಾತ್ರಿ 2 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಮಂಗಳೂರಿನತ್ತ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿದೆ. ಮೃತರನ್ನು ಕಾರಿನ ಚಾಲಕ ಬೆಂಗಳೂರಿನ ಶಂಕರಮೂರ್ತಿ (30), ಮಧ್ಯಪ್ರದೇಶದ ಚಿತ್ರಕೂಡಪುರ ಜಿಲ್ಲೆಯ ಶುಭಂ ತಿವಾರಿ (26), ರಾಗಿಣಿ ಪಾಂಡೆ (28) ಹಾಗೂ ಅಭಿಷೇಕ್‌ ಗೌರವ್‌ (28) ಎಂದು ಗುರುತಿಸಲಾಗಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿನಾಯಕ ಪಾಂಡೆ ಹಾಗೂ ಅಮೀನ್‌ ಪ್ರೀತ್‌ ಎಂಬ ಯುವತಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ವಿಪ್ರೋ ಹಾಗೂ ಇಂಟೆಲ್‌ ಕಂಪನಿಗಳಲ್ಲಿ ಇವರು ಸಾಫ್ಟ್ವೇರ್‌ ಇಂಜಿನಿಯರ್‌ಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಐದು
ಜನ ಟೆಕ್ಕಿಗಳ ತಂಡ ಮಂಗಳೂರು ಸುತ್ತಲಿನ ಪ್ರವಾಸಿ ಸ್ಥಳಗಳಿಗೆ ಇನ್ನೋವಾ ಕಾರು ಬಾಡಿಗೆಗೆ ಪಡೆದು ಹೊರಟಿತ್ತು. ಕುಣಿಗಲ್‌ನಲ್ಲಿ ರಾತ್ರಿ ಊಟ
ಮುಗಿಸಿಕೊಂಡು ಮಧ್ಯರಾತ್ರಿ ಹಾಸನದ ಬೈಪಾಸ್‌ ರಸ್ತೆಯಲ್ಲಿ ಮಂಗಳೂರಿನತ್ತ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ನ ಮುಂಭಾಗ ಕಿತ್ತು ಹೋಗಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ.
-ಉದಯವಾಣಿ

Comments are closed.