ಕರ್ನಾಟಕ

ಪ್ರಕರಣ ಮುಚ್ಚಲು ಗಣಪತಿಗೆ ಹುಚ್ಚನ ಪಟ್ಟ! ಜಗದೀಶ್ ಶೆಟ್ಟರ್ ಕಿಡಿ

Pinterest LinkedIn Tumblr

Jagadish-Shettar_5ಬೆಂಗಳೂರು, ಜು. ೧೧- ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವಾಗಿ ಸರ್ಕಾರ ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಬಿಂಬಿಸಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ವಿಧಾನಸಭೆಯಲ್ಲಿಂದು ತರಾಟೆಗೆ ತೆಗೆದುಕೊಂಡರು.

ಗಣಪತಿ ಅವರ ಆತ್ಮಹತ್ಯೆ ವಿಚಾರದಲ್ಲಿ ಗೊಂದಲ ಹುಟ್ಟಿಸಲೆಂದೆ ಅವರ ತಂದೆ ಮತ್ತು ಸಹೋದರ ಡಿವೈಎಸ್ಪಿ ಹೇಳಿಕೆಗಳನ್ನು ಪಡೆಯಲಾಗಿದೆ. ಅವರಿಂದ ವಿಭಿನ್ನ ಹೇಳಿಕೆಗಳನ್ನು ಕೊಡಿಸಿದೆ ಎಂದು ಅವರು ಆರೋಪಿಸಿದರು.

ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತು ನಿಯಮ 69 ರಡಿ ಚರ್ಚೆ ಆರಂಭಿಸಿದ ಶೆಟ್ಟರ್, ಗಣಪತಿ ಅವರು ಆತ್ಮಹತ್ಯೆಗೆ ಮುನ್ನ ಟಿವಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಂದರ್ಶನದ ನಂತರ ಗಣಪತಿ ಅವರ ಪತ್ನಿ ಮತ್ತು ಮಕ್ಕಳನ್ನು ಭೇಟಿ ಮಾಡಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.

ಗಣಪತಿ ಅವರು ಸಚಿವ ಜಾರ್ಜ್ ಅವರ ಕಿರುಕುಳ ಹೆಚ್ಚಾಗಿದೆ ಎಂದು ಹೇಳಿದ್ದರೂ ಅವರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗ ಅಸಮರ್ಥರು ಎಂದು ನಾವು ಆರೋಪ ಮಾಡಿ ಹಲವಾರು ಬಾರಿ ರಾಜೀನಾಮೆಗೆ ಒತ್ತಾಯಿಸಿದರೂ ಸಿದ್ಧರಾಮಯ್ಯ ಅವರನ್ನು ಸಂಪುಟದಲ್ಲಿ ಮುಂದುವರೆಸಿದ್ದಾರೆ. ಸಿ.ಎಂ. ಅವರಿಗೆ ತೀರಾ ಆಪ್ತರಾಗಿರುವ ಜಾರ್ಜ್ ಅವರನ್ನು ಬಿಟ್ಟು ಕೊಡಲು ಅವರು ಒಪ್ಪುತ್ತಿಲ್ಲ ಎಂದರು.
ಗಣಪತಿ ಸಾವಿಗೆ ಮುನ್ನ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಹೇಳಿದ್ದಾರೆ. ಅವರ ವಿರುದ್ಧ ಸರ್ಕಾರ ಐಪಿಸಿ 306 ರ ಪ್ರಕಾರ ಕೇಸ್ ಹಾಕಬೇಕಾಗಿತ್ತು. ಬದಲಿಗೆ ಅಸಹಜ ಸಾವು ಎಂದು ಸಾಬೀತು ಮಾಡಲು ಹೊರಟಿದೆ ಎಂದು ಹೇಳಿದರು.
ಈ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ ತನಿಖೆ ನಡೆಸುವ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಜಾರ್ಜ್ ಅವರ ಕೈಕೆಳಗಡೆ ಕೆಲಸ ಮಾಡಬೇಕಾಗಿದೆ. ಅವರಿಂದ ನೊಂದ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ ಎಂದರು.
ಸರ್ಕಾರ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡುತ್ತಿಲ್ಲ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ತೊಘಲಕ್ ದರ್ಬಾರ್ ನಡೆಸುತ್ತಿದೆ. ಇದೊಂದು ಬಂಡ ಸರ್ಕಾರ ಹೇಳೋರು, ಕೇಳೋರು ಯಾರೂ ಇಲ್ಲ ಎಂದು ಶೆಟ್ಟರ್ ಟೀಕಾ ಪ್ರಹಾರ ಮಾಡಿದರು.
ಆತ್ಮಹತ್ಯೆ ಮಾಡಿಕೊಂಡ ಗಣಪತಿ ಹಾಗೂ ಡಿವೈಎಸ್‌ಪಿ ತಮ್ಮಯ್ಯ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ ಎಂಬ ಮಾಹಿತಿ ಇದೆ. ಇದರ ಲಾಭ ಪಡೆಯಲು ಸರ್ಕಾರ ಮುಂದಾಗಿದೆ ಎಂದರು.
ಈ ಹಂತದಲ್ಲಿ ವಿರೋಧ ಪಕ್ಷದ ಉಪನಾಯಕ ಆರ್. ಅಶೋಕ್, ಗಣಪತಿ ಸಾಧನಾ ವರದಿಯನ್ನು ಪೊಲೀಸ್ ಇಲಾಖೆ ಆಯುಕ್ತರು ಸಿದ್ಧಪಡಿಸಿದ್ದು, ಅದರಲ್ಲಿ ಗಣಪತಿ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಎಲ್ಲ ವಿಚಾರಗಳಲ್ಲೂ ಸಮರ್ಥರಿದ್ದಾರೆ. ಅವರೊಬ್ಬ ಉತ್ತಮ ಅಧಿಕಾರಿ ಎಂದು ದೃಢೀಕರಿಸಲಾಗಿದೆ. ಹೀಗಿರುವಾಗ ಅವರನ್ನು ಮಾನಸಿಕ ಅಸ್ವಸ್ಥ ಎಂದು ಸರ್ಕಾರ ಹೇಳಲು ಹೊರಟಿರುವುದು ಸರಿಯಲ್ಲ ಎಂದರು.
ಹಿರಿಯ ಶಾಸಕ ಸಿ.ಟಿ. ರವಿ, ಗಣಪತಿ ಅವರು ಟಿವಿ ಸಂದರ್ಶನದಲ್ಲಿ ಸಚಿವ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ದ ಮಾತ್ರ ಆರೋಪಿಸಿದ್ದಾರೆ. ಅವರು ಆ ಸ್ಥಿತಿ ತಲುಪಲು ಈ ಮೂವರೆ ಕಾರಣ. ಅವರು ಸಿದ್ಧರಾಮಯ್ಯ ಅವರ ಹೆಸರನ್ನೇಕೆ ಹೇಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ಹೆಸರನ್ನು ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.

Comments are closed.