
ಬೆಂಗಳೂರು: ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರೆಬಲ್ ಆಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಷ್ ಅವರು ಈಗ ಯೂಟರ್ನ್ ಹೊಡೆದಿದ್ದು, ರಾಜಿನಾಮೆ ನೀಡಿ ದುಡಿಕಿದೆ ಅನಿಸುತ್ತಿದೆ ಎಂದು ಹೇಳುವ ಮೂಲಕ ಅಸಮಧಾನ ಬಿಟ್ಟು ಶಾಸಕರಾಗಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಇಂದು ಬೆಳಗ್ಗೆ ರೆಬಲ್ ಸ್ಟಾರ್ ನಿವಾಸಕ್ಕೆ ತೆರಳಿ, ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ನೀಡಿರುವ ರಾಜಿನಾಮೆಯನ್ನು ವಾಪಾಸ್ ಪಡೆಯುವುದಿಲ್ಲ ಎಂದು ಧೃಡ ನಿರ್ಧಾರ ತಳೆದಿದ್ದ ಅಂಬರೀಷ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬಿ, ಜನರ ಪ್ರೀತಿ ನೋಡಿ ನಾನು ರಾಜಿನಾಮೆ ನೀಡಿ ದುಡುಕಿದೆನಾ ಅನಿಸುತ್ತಿದೆ ಎಂದರು.
ನನ್ನನ್ನು ಅಸಮರ್ಥ, ಇನ್ನೊಂದು, ಮತ್ತೊಂದು ಏನೇ ಅಂದ್ರೂ ಸಂತೋಷ. ಆದರೆ ಏಕಾಏಕಿ ರಾಜಿನಾಮೆ ನೀಡುವಷ್ಟು ದೊಡ್ಡ ನಾಯಕ ನಾನಲ್ಲ. ಹಾಗೆ ತೀರ್ಮಾನಿಸಿದರೆ ಡಿಕ್ಟೇಟರ್ ಶಿಪ್ ಅನ್ಕೋತಾರೆ ಎಂದು ಹೇಳಿದ್ದಾರೆ.
ನನ್ನ ರಾಜಿನಾಮೆ ಬಗ್ಗೆ ಮಂಡ್ಯ ಜನತೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ, ನನಗೂ ಪಕ್ಷ, ಹೈಕಮಾಂಡ್ ಹಾಗೂ ಜನ ಇದ್ದಾರೆ. ಅವರೊಂದಿಗೆ ಚರ್ಚಿಸದೆ ನಾನೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಜನ ನನ್ನನ್ನು ಕೀಳು ಮನುಷ್ಯ ಎಂದು ಕೊಳ್ತಾರೆ. ನಾನು ಏಕಾಏಕಿ ಒಬ್ಬನೆ ರಾಜಿನಾಮೆ ನೀಡುವಷ್ಟು ದೊಡ್ಡ ನಾಯಕ ಅಲ್ಲ. ಎಲ್ಲರನ್ನೂ ಕೇಳಿ ನಾನು ಮಂಡ್ಯದಲ್ಲಿ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಅಂಬರೀಷ್ ಅವರು ತನ್ನ ಆಪ್ತ ಸಹಾಯಕರ ಮೂಲಕ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು. ಆದರೆ ವಿಧಾನಸಭೆ ಉಪ ಸಭಾಧ್ಯಕ್ಷರು ಅವರ ರಾಜಿನಾಮೆಯನ್ನು ಅಂಗೀಕರಿಸದೇ ಖುದ್ದು ಬಂದು ರಾಜಿನಾಮೆ ನೀಡುವಂತೆ ಸೂಚಿಸಿದ್ದರು.
Comments are closed.