ಕರ್ನಾಟಕ

ಒತ್ತುವರಿಯಾಗಿರುವ 6 ಲಕ್ಷ ಎಕರೆ ಜಮೀನು ಡಿಸೆಂಬರ್ ಒಳಗಾಗಿ ರೈತರಿಗೆ ವಿತರಣೆ

Pinterest LinkedIn Tumblr

kagodಬೆಂಗಳೂರು, ಜು.2- ರಾಜ್ಯಾದ್ಯಂತ ಒತ್ತುವರಿಯಾಗಿರುವ 6 ಲಕ್ಷ ಎಕರೆಯಷ್ಟು ಅರಣ್ಯ ಭೂಮಿಯನ್ನು ಡಿಸೆಂಬರ್ ಒಳಗಾಗಿ ರೈತರಿಗೆ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವವರ ಸಂಖ್ಯೆ ಸುಮಾರು ನಾಲ್ಕೂವರೆ ಲಕ್ಷದಿಂದ ಐದು ಲಕ್ಷ ಜನರಿದ್ದಾರೆ. ಸುಮಾರು 6 ಲಕ್ಷ ಎಕರೆಯಷ್ಟು ಭೂಮಿ ಒತ್ತುವರಿಯಾಗಿದೆ ಎಂದರು.

ಹಲವಾರು ದಾಖಲೆಗಳನ್ನು ಪರಿಶೀಲಿಸಿ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ರೈತರಿಗೆ ನೀಡುವ ಬದಲಿಗೆ ಕೆಲವು ದಾಖಲೆಗಳನ್ನು ಪರಿಶೀಲಿಸಿಕೊಡಬೇಕು ಎಂಬುದು ನಮ್ಮ ಉದ್ದೇಶ ಎಂದರು. ಅದೇ ರೀತಿ ಒಂದು ಸಾವಿರಕ್ಕೂ ಹೆಚ್ಚು ಸರ್ವೇಯರ್‌ಗಳು, 1200ಕ್ಕೂ ಹೆಚ್ಚು ಗ್ರಾಮ ಲೆಕ್ಕಿಗರು ಹಾಗೂ ತಹಸೀಲ್ದಾರ್ ಹುದ್ದೆಗಳು ಖಾಲಿಯಿದ್ದು, ಮೂರು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಸರ್ವೇಯರ್ ಮತ್ತು ಗ್ರಾಮ ಲೆಕ್ಕಿಗರನ್ನು ಅರ್ಹತೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಅದೇ ರೀತಿ ಪಹಣಿಗಾಗಿ ಅಲೆಯುತ್ತಿರುವ ರೈತರ ಅನುಕೂಲಕ್ಕಾಗಿ ಇನ್ನು ಮುಂದೆ ರಾಜ್ಯದ ಎಲ್ಲ ಪಂಚಾಯ್ತಿಗಳಲ್ಲೂ ಪಹಣಿ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಇದೀಗ ಹೋಬಳಿ ಮಟ್ಟದಲ್ಲಿ ಭೂಮಿ ಯೋಜನೆಯಡಿ ಪಹಣಿ ನೀಡಲಾಗುತ್ತಿದೆ. ಆದರೆ, ಕಂಪ್ಯೂಟರ್ ಕೈಕೊಟ್ಟಿದೆ ಎಂಬ ಕಾರಣಕ್ಕಾಗಿ ಪಹಣಿ ರೈತರ ಕೈ ಸೇರುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿರುವುದರಿಂದ ಪಂಚಾಯ್ತಿ ಮಟ್ಟದಲ್ಲಿ ಕೊಡಲು ನಿರ್ಧರಿಸಲಾಗಿದೆ ಎಂದರು. ಗ್ರಾಮ ಲೆಕ್ಕಿಗರು ಆಯಾ ಗ್ರಾಮಗಳಲ್ಲೇ ಕಡ್ಡಾಯವಾಗಿ ಉಳಿದುಕೊಳ್ಳಬೇಕು ಎಂದು ಸೂಚಿಸಿರುವ ಅವರು, ಇದಕ್ಕೆ ಅನುಗುಣವಾಗಿ ಆಯಾ ಗ್ರಾಮಗಳಲ್ಲಿ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೊರಗುತ್ತಿಗೆ ಆಧಾರದ ಮೂಲಕ ನೇಮಕ ಮಾಡಿಕೊಳ್ಳುವುದು ತಪ್ಪು ಪದ್ಧತಿ. ಹೀಗಾಗಿ ಇದನ್ನು ತಕ್ಷಣ ರದ್ದುಮಾಡಬೇಕು. ಹೊರ ಗುತ್ತಿಗೆಯನ್ನು ಏಜೆನ್ಸಿಗಳಿಗೆ ಕೊಡಲಾಗುತ್ತದೆ. ಏಜೆನ್ಸಿಗಳು ನೌಕರರಿಗೆ ಸರಿಯಾಗಿ ಸಂಬಳ ಕೊಡುವುದಿಲ್ಲ. ಹಾಗಾಗಿ ಜನರ ಕೆಲಸವೂ ನಿಗದಿತ ಸಮಯದಲ್ಲಿ ಆಗುವುದಿಲ್ಲ ಎಂದು ಹೇಳಿದರು.

Comments are closed.