ಕರ್ನಾಟಕ

ದೇವೇಗೌಡರ ಇಫ್ತಾರ್‌ ಕೂಟಕ್ಕೆ ಕಾಂಗ್ರೆಸಿಗರ ದಂಡು

Pinterest LinkedIn Tumblr

gowda-story_ಬೆಂಗಳೂರು: ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ರಂಜಾನ್‌ ಪ್ರಯುಕ್ತ ಮುಸ್ಲಿಮರಿಗಾಗಿ ಶುಕ್ರವಾರ ಆಯೋಜಿಸಿದ್ದ “ಇಫ್ತಾರ್‌ ಕೂಟ’ದಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ನಾಯಕರೇ “ಕೇಂದ್ರ ಬಿಂದು’ವಾಗಿದ್ದರು.

ಕೇಂದ್ರದ ಮಾಜಿ ಸಚಿವರಾದ ಸಿ.ಕೆ. ಜಾಫ‌ರ್‌ ಷರೀಫ್, ಸಿ.ಎಂ. ಇಬ್ರಾಹಿಂ, ಸಚಿವ ರೋಷನ್‌ ಬೇಗ್‌, ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಮೊದಲಾದವರು ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡಿದ್ದರಲ್ಲದೆ, ಚಾಮರಾಜಪೇಟೆಯಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ
ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ. ಬಾವಾ ಕೂಡ ಹಾಜರಾಗಿದ್ದರು.

ಈ ಸಂದರ್ಭ ಮಾತನಾಡಿದ ದೇವೇಗೌಡರು, ರಂಜಾನ್‌ ಪವಿತ್ರ ಹಬ್ಬ. ಕಳೆದ 25 ವರ್ಷಗಳಿಂದಲೂ ಇಫ್ತಾರ್‌ ಕೂಟ ಆಯೋಜಿಸುತ್ತಿದ್ದೇನೆ. ಅಧಿಕಾರದಲ್ಲಿ ಇರಲಿ, ಬಿಡಲಿ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದೇನೆ. ಸಮುದಾಯದ ಜತೆ ನಾನಿದ್ದೇನೆ. ಇಫ್ತಾರ್‌ ಕೂಟದಲ್ಲಿ ಭಾಗವಹಿಸುವುದು ಬೇಡ ಎಂದು ನಮ್ಮ ಆಪ್ತರು ದೂರವಾಣಿ ಮೂಲಕ ಹೇಳಿದರೂ ಪರವಾಗಿಲ್ಲ.

ಪಕ್ಷಭೇದ ಮರೆತು ಎಲ್ಲರೂ ಬಂದಿದ್ದಾರೆ ಎಂದು ರೋಕ್ಷವಾಗಿ ಪಕ್ಷದ ಭಿನ್ನಮತೀಯರಿಗೆ “ಟಾಂಗ್‌’ ನೀಡಿದರು. ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡಿರುವ ಈ ನಾಯಕರದು ಮತ್ತು ನಮ್ಮದು ಸುಮಾರು ವರ್ಷಗಳ ಸ್ನೇಹ. ಇಲ್ಲಿ ರಾಜಕೀಯ ಮಾತನಾಡುವುದಿಲ್ಲ. ಬೇರೆ ಯಾವುದೇ ವಿಷಯಕ್ಕೂ ಅವಕಾಶವಿಲ್ಲ ಎಂದು ಹೇಳಿದರು.

ಇಬ್ರಾಹಿಂ ಮಾತನಾಡಿ, ನಮ್ಮದು ದೇವೇಗೌಡರದು 45 ವರ್ಷಗಳ ಸಂಬಂಧ. ದೇಶದ ಮಾಜಿ ಪ್ರಧಾನಿಗಳಲ್ಲಿ ರಾಜ್ಯದಲ್ಲಿ ಇರುವವರು ದೇವೇಗೌಡರು ಮಾತ್ರ. ಹೀಗಾಗಿ ಪ್ರತಿ ವರ್ಷ ನಾನು ಅವರ ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿನ ಭಿನ್ನಮತ ಕುರಿತು ಪ್ರತಿಕ್ರಿಯಿಸಿದ ಅವರು, ರಂಜಾನ್‌ ಮಾಸದಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ. ನಾನು ಭಿನ್ನಮತೀಯನೂ ಅಲ್ಲ. ರಾಜಕೀಯ ವಿಚಾರಗಳ ಬಗ್ಗೆ ರಂಜಾನ್‌ ಬಳಿಕ ಮುಕ್ತವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಜಾಫ‌ರ್‌ ಷರೀಫ್ ಮಾತನಾಡಿ, ಇದೊಂದು ಪವಿತ್ರ ಸಂದರ್ಭ. ಜೆಡಿಎಸ್‌ ನಾಯಕರೊಂದಿಗೆ ನನಗೆ ಮೊದಲಿನಿಂದಲೂ ಉತ್ತಮ ಸಂಬಂಧ ಇದೆ ಎಂದು ಹೇಳಿದರು.

ಭಿನ್ನಮತೀಯರ ಬೆಂಬಲಿಗರೂ ಗೈರು
ಪಕ್ಷದಿಂದ ಅಮಾನತುಗೊಂಡಿರುವ ಜಮೀರ್‌ ಅಹ ಮದ್‌ ಸೇರಿದಂತೆ ನಗರದ 3 ಶಾಸಕರ ಬೆಂಬಲಿಗರು, ಬಿಬಿಎಂಪಿಯಲ್ಲಿರುವ ಜೆಡಿಎಸ್‌ನ ಮೂವರು ಸದಸ್ಯರು ಇಫ್ತಾರ್‌ ಕೂಟದತ್ತ ತಲೆ ಹಾಕಲಿಲ್ಲ. ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಕೀಲ್‌ ನವಾಜ್‌ ಸೇರಿದಂತೆ ಬಹುತೇಕ ಪದಾಧಿಕಾರಿಗಳು ಗೈರು ಹಾಜರಾಗಿದ್ದರು.

ಚಾಮರಾಜಪೇಟೆ ಮತ್ತು ಪುಲಿಕೇಶಿನಗರದ ಅಲ್ಪಸಂಖ್ಯಾತರ ಘಟಕದ ಮುಖಂಡರು ಹೆಚ್ಚಾಗಿ ಆಗ ಮಿಸಿರಲಿಲ್ಲ. ವಿಧಾನ ಪರಿಷತ್‌ ಸದಸ್ಯ ಆಗಾ, ಮುಖಂಡ ಜಫ್ರುಲ್ಲಾ ಖಾನ್‌ ಉಸ್ತುವಾರಿ ವಹಿಸಿದ್ದರು.
-ಉದಯವಾಣಿ

Comments are closed.