*ಯೋಗೀಶ್ ಕುಂಭಾಸಿ
ಉಡುಪಿ: ಕಲೆ, ಸಂಸ್ಕೃತಿ , ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಾರಂತರು ಈ ಮಣ್ಣಿನ ಸುಪುತ್ರ, ಅವರ ನೆನಪಿನ ಈ ಥೀಂ ಪಾರ್ಕ್ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಶನಿವಾರ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ) ಕೋಟ ಇವರ ವತಿಯಿಂದ ಕೋಟ ಕಾರಂತ ಥೀಂ ಪಾರ್ಕ್ ನಲ್ಲಿ ಜೋಡೆತ್ತಿನ ಗಾಡಿ ಸಾಂಸ್ಕೃತಿಕ ಬಿಂಬ ಅನಾವರಣ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಉತ್ತಮ ಮಾದರಿಗಳ ಸಂರಕ್ಷಣೆ ಮತ್ತು ನಿರ್ವಹಣೆ ಪ್ರತಿಯೊಬ್ಬರ ಹೊಣೆ ಎಂದ ಸಚಿವರು, ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಸ್ವರಾಜ್ಯದ ಪ್ರತಿಬಿಂಬ ಗಾಂಧಿ ಪುತ್ಥಳಿಯನ್ನು ೩ ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಅನಾವರಣಗೊಳಿಸಿದರು.


ಪ್ರಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಸೆಪ್ಟಂಬರ್ 25 ರಂದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ೪೧೦ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಕ್ರೀಡಾಕೂಟವನ್ನು ಕೋಟಾ ವಿವೇಕ ಕಾಲೇಜು ಮೈದಾನದಲ್ಲಿ ಅಯೋಜಿಸಲಾಗುವುದು, ಇದರಲ್ಲಿ ಸುಮಾರು 7500 ಮಂದಿ ಭಾಗವಹಿಸಲಿದ್ದಾರೆ. ಇದು ರಾಜ್ಯದಲ್ಲೇ ಪ್ರಥಮ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಿ, ಕುಂದಾಪುರ ತಾಲೂಕು ಪಂಚಾಯತ್. ಅಧ್ಯಕ್ಷ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷ ಮಾಲಿನಿ ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್, ಜಿಲ್ಲಾ ಪಂಚಾಯತ್ . ಸದಸ್ಯ ರಾಘವೇಂದ್ರ ಕಾಂಚನ್, ತಾಲೂಕು ಪಂಚಾಯತ್ . ಸದಸ್ಯೆ ಜ್ಯೋತಿ ಶ್ರೀನಿವಾಸ್, ಲಲಿತಾ, ಯುಪಿಸಿಎಲ್ ನ ಆಪರೇಟಿಂಗ್ ಅಫೀಸರ್ ಕಿಶೋರ್ ಆಳ್ವಾ, ಕೋಟಾ ಮಣೂರು ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಆನಂದ ಕುಂದರ್ ಸ್ವಾಗತಿಸಿದರು, ಪಿಡಿಓ ಪಾರ್ವತಿ ವಂದಿಸಿದರು.
Comments are closed.