ಕರ್ನಾಟಕ

ನಟಿ ರಮ್ಯಾಗಿಲ್ಲವಂತೆ ಸಚಿವಗಿರಿ ! ಸಿದ್ದರಾಮಯ್ಯ ಹೇಳಿದ್ದೇನು….

Pinterest LinkedIn Tumblr

Ramya

ಬೆಂಗಳೂರು: ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿ ರಮ್ಯಾ ಅವರ ಹೆಸರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಮುಂಭಾಗ ಹೊಯ್ಸಳ ವ್ಯವಸ್ಥೆಗೆ ಹೊಸ 222 ವಾಹನಗಳನ್ನು ಸೇರ್ಪಡೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಇದೆ. ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತದೋ ಅವರನ್ನು ಸಚಿವ ರನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ಸಂಪುಟ ಪುನಾರಚನೆಗೆ ಸಮಯ ನಿಗದಿಯಾಗಿಲ್ಲ. ಹೈಕಮಾಂಡ್ ಜತೆ ಚರ್ಚೆ ಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು. ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಟ್ಟ ನಂತರ ಮಂಡ್ಯ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ. ಜತೆಗೆ ಸಂಪುಟದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಕಡಿಮೆ ಇದ್ದು, ಉಮಾಶ್ರೀ ಮಾತ್ರ ಸಚಿವರಾಗಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟದ ಪುನಾರಚನೆ ವೇಳೆ ಒಕ್ಕಲಿಗ ಸಮುದಾಯದ ಅಂಬರೀಶ್ ಮತ್ತು ಕಿಮ್ಮನೆ ರತ್ನಾಕರ ಅವರನ್ನು ಕೈ ಬಿಟ್ಟು ಬೇರೆ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಸಹಜವಾಗಿ ಒಕ್ಕಲಿಗರಲ್ಲಿ ಅಸಮಾಧಾನ, ಅತೃಪ್ತಿ ಮಡುಗಟ್ಟಿದೆ.

ಬಾಕಿ ಇರುವ ಒಂದು ಸಚಿವ ಸ್ಥಾನದಲ್ಲಿ ಅವಕಾಶ ಪಡೆಯಲು ಶಾಸಕರಾದ ಎಂ.ಕೃಷ್ಣಪ್ಪ, ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್ ಸೇರಿದಂತೆ ನಾಲ್ವರು ಶಾಸಕರ ನಡುವೆ ಪ್ರಬಲ ಪೈಪೋಟಿ ಇದೆ. ಈ ನಡುವೆ ರಮ್ಯಾ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿ ವಿಧಾನಪರಿಷತ್‌ಗೆ ನಾಮನಿರ್ದೇಶನಗೊಳ್ಳುವ ಮೂಲಕ ಸಚಿವ ಸಂಪುಟ ಸೇರಲು ಲಾಬಿ ನಡೆಸಿದ್ದಾರೆ ಎಂಬ ವದಂತಿಗಳು ಇವೆ. ಆದರೆ, ಸಿದ್ದರಾಮಯ್ಯ ಅವರು ಇದನ್ನು ತಳ್ಳಿ ಹಾಕಿದ್ದಾರೆ.

ಹಾಲಿ ಶಾಸಕರಾಗಿರುವವರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂದು ಈ ಮೊದಲು ಹಿರಿಯ ಸಚಿವ ಡಿ.ಕೆ.ಶಿವಕುಮಾರ್ ಕೂಡ ಸ್ಪಷ್ಟ ಪಡಿಸಿದ್ದರು. ರಮ್ಯಾ ಅವರ ಹೆಸರು ಚಾಲ್ತಿಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅದನ್ನು ತಳ್ಳಿ ಹಾಕಿದ್ದಾರೆ.

Comments are closed.