
ಬೆಂಗಳೂರು: ಹೊಯ್ಸಳ ವಾಹನಗಳು ತಲುಪಲು ಸಾಧ್ಯವಿಲ್ಲದ ಕಡೆಗೆ ಶೀಘ್ರವಾಗಿ ಧಾವಿಸಲು ಪೊಲೀಸರಿಗೆ ಒಂದು ಸಾವಿರ ಬೈಕ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರು ಪೊಲೀಸರಿಗೆ ಅತ್ಯಾಧುನಿಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೊಸ 222 ಹೊಯ್ಸಳ ವಾಹನಗಳನ್ನು ಪೊಲೀಸ್ ವ್ಯವಸ್ಥೆಗೆ ಸಮರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.







ಇದೇ ರೀತಿಯ ವಾಹನಗಳನ್ನು ರಾಜ್ಯದ ಇತರೆ ಪೊಲೀಸ್ ಆಯುಕ್ತರಿರುವ ನಗರಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೊಯ್ಸಳ ವಾಹನಗಳು ತಲುಪಲು ಸಾಧ್ಯ ಇಲ್ಲದ ಕಡೆಗೆ ಬೈಕ್‌ಗಳಲ್ಲಿ ತಲುಪಲು ಅವಕಾಶವಿದ್ದು, ಅದಕ್ಕಾಗಿ ಒಂದು ಸಾವಿರ ಹೊಸ ಬೈಕ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದರು. 8ಸಾವಿರ ಪೊಲೀಸ್ ಕಾನ್‌ಸ್ಟ್ಟೆಬಲ್‌ಗಳನ್ನು ನೇಮಿಸಲಾಗಿದೆ. ಬೆಂಗಳೂರಿಗೆ 2800 ಮಂದಿ ಕಾನ್‌ಸ್ಟೆಬಲ್‌ಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಇನ್ನೂ 8ಸಾವಿರ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಆಯಾ ಜಿಲ್ಲಾ ಎಸ್ಪಿಗಳಿಗೆ ಅಧಿಕಾರ ನೀಡಲಾಗಿದೆ. ಈಗಾಗಲೇ ನೇಮಕಾತಿ ಆಗಿರುವವರು ತರಬೇತಿ ಪಡೆಯುತ್ತಿದ್ದು, ಅದು ಮುಗಿದ ನಂತರ ನಿಯುಕ್ತಗೊಂಡ ಜಿಲ್ಲೆಗಳಿಗೆ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.
ಮಾಲ್ ಹಾಗೂ ರೆಸ್ಟೋರೆಂಟ್‌ಗಳು ದಿನದ 24 ಗಂಟೆ ಕೆಲಸ ನಿರ್ವಹಿಸಲು ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಬೆಂಗಳೂರಿನಲ್ಲಿ ಈಗಾಗಲೇ ರಾತ್ರಿ 1 ಗಂಟೆವರೆಗೂ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಐಟಿ ಉದ್ಯಮಿಗಳು, ಕಾರ್ಪೊರೇಟೆರ್ ಸಂಸ್ಥೆಗಳ ಉದ್ಯೋಗಿಗಳು 10 ಗಂಟೆಯ ನಂತರ ಯಾವ ಹೋಟೆಲ್‌ಗಳು ತೆರೆದಿರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟರ್‌ಗಳ ಅವಧಿಯನ್ನು ವಾರದ ಎರಡು ದಿನ ಪ್ರಾಯೋಗಿಕವಾಗಿ ವಿಸ್ತರಣೆ ಮಾಡಲಾಗಿತ್ತು.
ಅದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಬದಲಾಗಿ ಅನುಕೂಲವಾಗುತ್ತಿದೆ ಎಂದು ಮನಗಂಡ ನಂತರ ವಾರದ ಪೂರ್ತಿ ರಾತ್ರಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು. ದಿನದ 24 ಗಂಟೆಯೂ ಮಾಲ್ ಮತ್ತು ರೆಸ್ಟೋರೆಂಟ್‌ಗಳು ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಸ್ವಾಗತಿಸುವುದಾಗಿ ಪರಮೇಶ್ವರ್ ತಿಳಿಸಿದರು. ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಹೊಸ ಹೊಯ್ಸಳ ವಾಹನಗಳು ಅತ್ಯಾಧುನಿಕ ಸೌಲಭ್ಯ ಹೊಂದಿವೆ. ಕೊಲೆ, ಅತ್ಯಾಚಾರದಂತಹ ಕೃತ್ಯಗಳು ನಡೆದಾಗ ಪೊಲೀಸರು ತಡವಾಗಿ ಸ್ಥಳಕ್ಕೆ ಆಗಮಿಸುತ್ತಾರೆ ಎಂಬ ಆರೋಪಗಳು ಇದ್ದು, ಅದನ್ನು ತಪ್ಪಿಸಲು ಫಸ್ಟ್ ಆಂಡ್ ಫಾಸ್ಟ್ ಸಿದ್ಧಾಂತದಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೊದಲ ಹಂತದಲ್ಲಿ 222 ಹೊಸ ಹೊಯ್ಸಳ ವಾಹನಗಳನ್ನು ಬೆಂಗಳೂರು ಪೊಲೀಸರಿಗೆ ನೀಡಲಾಗಿದೆ. ಇನ್ನೂ 500 ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವಾಹನಗಳಲ್ಲಿ ಎಸ್‌ಒಎಫ್ ತಂತ್ರಜ್ಞಾನ ಅಳವಡಿಸಲಾಗಿದೆ. ಕೃತ್ಯ ನಡೆದ ಸ್ಥಳ, ಕಂಟ್ರೋಲ್‌ರೂಂಗೆ ಕರೆ ಬಂದ ಸ್ಥಳಗಳನ್ನು ಗುರುತಿಸುವ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಪ್ರತಿಯೊಂದು ಹೊಯ್ಸಳ ವಾಹನಕ್ಕೆ ಸಿವಿಲ್ ವೃಂದದ ಎಎಫ್‌ಐ , ಹೆಡ್‌ಕಾನ್ಸ್‌ಸ್ಟೆಬಲ್ ದರ್ಜೆಯ ಸಿಬ್ಬಂದಿಗಳಿದ್ದು, ಪ್ರತಿ ಪಾಳಿಗೆ ಒಬ್ಬ ಚಾಲಕ, ಒಬ್ಬ ಸಹಾಯಕ ಸಿಬ್ಬಂದಿ ಇರುತ್ತಾರೆ.
ನೂತನ ಹೊಯ್ಸಳ ವಾಹನಗಳನ್ನು ನಿರ್ದಿಷ್ಟವಾಗಿ ಗುರುತಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ನಿಯಂತ್ರಣ ಕೊಠಡಿಗಳ ಸಂದೇಶದ ಮೇರೆಗೆ ಈ ವಾಹಗಳಲ್ಲಿನ ಸಿಬ್ಬಂದಿಗಳು ಕಾರ್ಯನಿರತರಾಗಿ ಸ್ಥಳಕ್ಕೆ ಮೊದಲು ಹೋಗಿ ಮಾಹಿತಿ ಪಡೆದುಕೊಳ್ಳುತ್ತಾರೆ. ಠಾಣೆಯ ಸಿಬ್ಬಂದಿ ಬಂದ ನಂತರ ಅವರಿಗೆ ಉಸ್ತುವಾರಿ ಕೊಟ್ಟು ನಿಗದಿತ ಸ್ಥಳಕ್ಕೆ ವಾಪಾಸಾಗುತ್ತಾರೆ. 14.65 ಕೋಟಿ ರೂ. ವೆಚ್ಚದಲ್ಲಿ ಈ ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು. ಗ್ರಾಮೀಣ ಭಾಗದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಆಧರಿಸಿ ಗಸ್ತು ವ್ಯವಸ್ಥೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.
Comments are closed.