
ಮಂಡ್ಯ: ಸಂಪುಟ ಪುನಾರಚನೆ ನಂತರ ನಡೆದಿರುವ ಮಹತ್ವದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್ನಲ್ಲೂ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸ್ಥಾನದಿಂದ ವಂಚಿತರಾಗಿರುವವರನ್ನು ಪಕ್ಷಕ್ಕೆ ಕರೆತರಲು ವೇದಿಕೆ ಸಿದ್ಧಗೊಳ್ಳುತ್ತಿದ್ದು, ಈ ಬಗ್ಗೆ ಮಹತ್ವದ ಮಾತುಕತೆಗಳು ಸಹ ನಡೆಯುತ್ತಿವೆ. ತಡರಾತ್ರಿ ವಿದೇಶಕ್ಕೆ ಹಾರಿರುವ ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್ ವಿದೇಶದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಂಬರೀಶ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷಕ್ಕೆ ಕರೆತರುವ ಸಂಬಂಧ ಚರ್ಚೆ ನಡೆಸಲಿದ್ದಾರೆ.
ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿರುವ ಅಂಬರೀಶ್ ಹಾಗೂ ಶ್ರೀನಿವಾಸ್ಪ್ರಸಾದ್ ಅವರನ್ನು ಜೆಡಿಎಸ್ಗೆ ಸೇರ್ಪಡೆಗೊಳಿಸುವ ಸಂಬಂಧ ಮಾತುಕತೆ ನಡೆಸಿ ಮುಂದಿನ ವಾರ ವಿದೇಶದಲ್ಲಿರುವ ಕುಮಾರಸ್ವಾಮಿಯವರು ಹಿಂದಿರುಗುತ್ತಿದ್ದು, ಅದಕ್ಕೂ ಮುನ್ನ ವೇದಿಕೆ ಸಿದ್ದಪಡಿಸಲು ಮಹತ್ವದ ಮಾತುಕತೆ ನಡೆಸಲಾಗುತ್ತಿದೆ. ಈ ಸಂಬಂಧ ವಿದೇಶದಿಂದಲೇ ಇವರಿಬ್ಬರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗುತ್ತೆದೆ ಎಂದು ತಿಳಿದು ಬಂದಿದೆ.
ಇದರ ನಡುವೆ ಅಂಬರೀಶ್ ಅವರು ಯಾರ ಜತೆ ಮಾತನ್ನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ ಈಗಾಗಲೇ ಜೆಡಿಎಸ್ನ ವರಿಷ್ಠರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಶ್ರೀನಿವಾಸ್ಪ್ರಸಾದ್, ಅಂಬರೀಶ್ ಅವರನ್ನು ಸೆಳೆಯಲು ಜೆಡಿಎಸ್ ಮತ್ತು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿವೆ.
ಡಿಕೆಶಿ ವಿರುದ್ಧ ಪ್ರತಿಭಟನೆ:
ಮಂಡ್ಯ ಜಿಲ್ಲೆಯ ಗಡಿ ಗ್ರಾಮ ನಿಡಘಟ್ಟದಲ್ಲಿ ಅಂಬರೀಶ್ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಚಿವ ಸ್ಥಾನದಿಂದ ಅಂಬರೀಶ್ ಅವರನ್ನು ಕೈ ಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಂಬಿ ಅಂಭಿಮಾನಿಗಳು ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ. ಅಂಬಿ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಡಿಕೆಶಿ ಗೋ ಬ್ಯಾಕ್ ಎಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಿಕೆಶಿ ನೇಮಕಗೊಂಡ ನಂತರ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದು, ಪ್ರತಿಭಟನೆಯ ಬಿಸಿ ತಟ್ಟಿದೆ.
Comments are closed.