
ತುಮಕೂರು: ವರ್ಷಗಳ ಹಿಂದೆ ಸ್ನೇಹಿತನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿದ್ದು, ಇದೀಗ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ.
ಪಾವಗಡ ತಾಲೂಕಿನ 17 ವರ್ಷದ ಬಾಲಕಿ ಮೊದಲನೇ ಪಿಯುಸಿ ಓದುತ್ತಿದ್ದು, ವರ್ಷದ ಹಿಂದೆ ತನ್ನ ಸ್ನೇಹಿತನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು. ಈ ವಿಚಾರವನ್ನು ಬಾಲಕಿ ಯಾರೊಂದಿಗೂ ಹೇಳಿಕೊಂಡಿಲ್ಲ. ಕೆಲ ತಿಂಗಳ ಬಳಿಕ ಬಾಲಕಿ ಗರ್ಭಿಣಿಯಾದಾಗ ವಿಚಾರ ಬಹಿರಂಗಗೊಂಡಿದೆ.
ಇದೀಗ ಬಾಲಕಿ ಮಗುವೊಂದಕ್ಕೆ ಜನ್ಮ ನೀಡಿದ್ದು, ಸಮಾಜಕ್ಕೆ ಹೆದರುತ್ತಿರುವ ಆಕೆಯ ಪೋಷಕರು ಮಗಳು ಹಾಗೂ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಇದರಂತೆ ಮಕ್ಕಳ ಅಭಿವೃದ್ಧಿ ಕಚೇರಿ (ಸಿಡಿಪಿಒ)ಯ ಅಧಿಕಾರಿ ಉಷಾ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಪೆಮ್ಮನಹಳ್ಳಿಯ ಸುರೇಶ್ (19) ಎಂಬ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಪೋಷಕರು ಗೊಲ್ಲ ಸಮುದಾಯಕ್ಕೆ ಸೇರಿದ್ದು, ಸಮಾಜಕ್ಕೆ ಹೆದರಿ ಮಗಳನ್ನು ಹಾಗೂ ಮಗುವನ್ನು ಒಪ್ಪಿಕೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ಮನಸ್ಸು ಪರಿವರ್ತಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಿಡಿಪಿಒ ಹೇಳಿದ್ದಾರೆ.
Comments are closed.