ಕರ್ನಾಟಕ

ಬಿಜೆಪಿಗೆ ಭಿನ್ನಮತದ ಹೊಗೆ : ಕಾಂಗ್ರೆಸ್-ಜೆಡಿಎಸ್‌ನಲ್ಲಿ ನೆನೆಗುದಿ-ಕೇಸರಿಯಲ್ಲಿ ಬೇಗುದಿ

Pinterest LinkedIn Tumblr

con-BJP-jds-715x350ಬೆಂಗಳೂರು, ಜೂ. ೨೮ – ಸಂಪುಟ ಪುನಾರಚನೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಿಗಿನಿಗಿ ಕೆಂಡದಂತೆ ಕಾಣಿಸಿಕೊಂಡಿದ್ದ ಭಿನ್ನಮತದ ಕಾವು ಕಡಿಮೆಯಾದ ಬೆನ್ನ ಹಿಂದೆಯೇ ಮತ್ತೆ ಸರ್ಕಾರ ರಚಿಸುವ ಹೆಬ್ಬಯಕೆ ಹೊತ್ತಿರುವ ಬಿಜೆಪಿಯಲ್ಲಿ ಅತೃಪ್ತಿಯ ವಾತಾವರಣ ತಲೆದೋರಿದೆ.

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ನಂತರ ಭುಗಿಲೆದ್ದಿದ್ದ ಬಂಡಾಯದ ಕಾವು ಜಾತ್ಯತೀತ ಜನತಾದಳದಲ್ಲಿ ನಿರ್ಣಾಯಕ ಸ್ಥಿತಿ ತಲುಪುತ್ತಿರುವ ನಡುವೆ ಪ್ರಧಾನ ಪ್ರತಿಪಕ್ಷ ಬಿಜೆಪಿಯಲ್ಲಿ ನಾಯಕರ ನಡುವಣ ಕಲಹ ಪೀಕಲಾಟ ಸೃಷ್ಟಿಸಿದೆ.
ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಅವರ ಕಾರ್ಯವೈಖರಿ ಸ್ವಪಕ್ಷೀಯರ ತೀವ್ರ ಟೀಕೆಗೆ ಗುರಿಯಾಗಿರುವುದು ರಹಸ್ಯವಾಗಿ ಉಳಿದಿಲ್ಲ. ಪಕ್ಷಕ್ಕೆ ಹೊಸ ಪದಾಧಿಕಾರಿಗಳ ನೇಮಕದಲ್ಲಿ ಏಕಪಕ್ಷೀಯವಾಗಿ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ. ಅತೃಪ್ತಿಯ ಮೂಲ. ಬಿಜೆಪಿ ನಿಷ್ಠಾವಂತರನ್ನೂ ಕೈಬಿಟ್ಟು ಕೆಜೆಪಿ ಮೂಲದ ಮುಖಂಡರಿಗೆ ಪದಾಧಿಕಾರಿಗಳ ನೇಮಕಾತಿಯಲ್ಲಿ ಮಣೆ ಹಾಕಲಾಗಿದೆ ಎಂಬುದು ಸಹನೆ ಕಳೆದುಕೊಳ್ಳಲು ಬಿಜೆಪಿ ಮುಖಂಡರಿಗೆ ಇರುವ ಕಾರಣ.
ವಿಧಾನ ಪರಿಷತ್ತಿನ ಪ್ರತಿಪಕ್ಷದ ಕೆ.ಎಸ್. ಈಶ್ವರಪ್ಪ ಕಲ್ಬುರ್ಗಿಯಲ್ಲಿ ತಮ್ಮ ಅತೃಪ್ತಿಯನ್ನು ಹೊರಹಾಕಿ ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ಸಾರಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖ ವಿಷಯಗಳನ್ನು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳುವುದು ಬಿಜೆಪಿ ಅಧ್ಯಕ್ಷರಾಗಿದ್ದವರ ವಾಡಿಕೆ. ಇದರಿಂದ ಆಂತರಿಕ ಪ್ರಜಾಪ್ರಭುತ್ವ ಸುರಕ್ಷಿತವಾಗಿತ್ತು. ಈಗ ಬಿಜೆಪಿ ಕೋರ್ ಕಮಿಟಿ ಸಭೆ ಸೇರುವುದೇ ಇಲ್ಲ. ಯಡಿಯೂರಪ್ಪ ತಮಗೆ ಸರಿ ಎನಿಸಿದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡು ಪಕ್ಷದ ಮೇಲೆ ಹೇರುವ ಪ್ರವೃತ್ತಿಯಿಂದ ಸರ್ವಾಧಿಕಾರ ಹಾಗೂ ದಬ್ಬಾಳಿಕೆ ವಾತಾವರಣ ತಲೆದೋರಿದೆ ಎಂಬುದು ಮುಖಂಡರ ನೋವು.
ಇಂತಹ ಟೀಕೆ ಟಿಪ್ಪಣಿಗಳನ್ನು ನಿರಾಕರಿಸುವ ಯಡಿಯೂರಪ್ಪ `ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇಲ್ಲ. ಇಂತಹ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಲಾರೆ, ಪಕ್ಷದ ವೇದಿಕೆಯಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸಿ ಬಿಕ್ಕಟ್ಟು ಪರಿಹರಿಸಲಾಗುವುದು’ ಎಂಬ ಸಮಜಾಯಿಷಿ ಕೊಟ್ಟಿರುವುದು ಕೆಲ ಮಟ್ಟಿಗೆ ಬಿಸಿಯನ್ನು ತಗ್ಗಿಸಿಸಿದೆ.
ಇದಕ್ಕೆ ಸಮಾನಾಂತರವಾಗಿ ಸಂಪುಟ ಪುನಾರಚನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಸವಾಲು ಹಾಕಿದ್ದ ಗಣನೀಯ ಶಾಸಕರ ಬಲ ಕರಗಿ ಹೋಗಿದೆ. ಹೈಕಮಾಂಡ್ ಸಂದೇಶ ಹಾಗೂ ಮುಖ್ಯಮಂತ್ರಿಗಳ ಆಶ್ವಾಸನೆಯಿಂದ ಅತೃಪ್ತಿಯನ್ನು ನುಂಗಿಕೊಂಡಿರುವ ಶಾಸಕರು ಹಣೆಬರಹ ಜರಿದುಕೊಂಡು ತೆಪ್ಪಗಿರುವಂತಾಗಿದೆ.
ಸಂಪುಟದಿಂದ ಕೈಬಿಡಲಾಗಿರುವ ಶ್ರೀನಿವಾಸ್ ಪ್ರಸಾದ್ ಅವರ ಕೋಪ ಇನ್ನೂ ಆರಿಲ್ಲ. ನಾಯಕತ್ವ ಬದಲಾವಣೆಗೆ ಹೋರಾಟ ಅಚಲ ಎಂಬುದು ಅವರ ನಿಲುವು. ಸಂಪುಟ ಸೇರ್ಪಡೆಗೆ ಅವಕಾಶ ವಂಚಿತರಾಗಿರುವ ಡಾ. ಮಲಕರೆಡ್ಡಿ ಕೂಡ ಇದೇ ನಿಲುವನ್ನು ಹೊಂದಿದ್ದಾರೆ. ಬಹುಶಃ ಭಿನ್ನಮತೀಯ ಶಾಸಕರಿಗೆ ವಿಶ್ವಾಸಾರ್ಹ ನಾಯಕತ್ವ ದೊರಕಿದ್ದರೆ ಮುಖ್ಯಮಂತ್ರಿಗಳಿಗೆ ಗಂಡಾಂತರ ಸ್ಥಿತಿ ಎದುರಿಸಬೇಕಾಗುತ್ತಿತ್ತು. ಈಗ ಸ್ಥಿತಿ ತಿಳಿಯಾಗಿದೆ.
ಜಾತ್ಯತೀತ ಜನತಾದಳದಲ್ಲಿ ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯ ಪರ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಎಂಟು ಮಂದಿ ಶಾಸಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈಗಿರುವಂತೆ ಬಂಡಾಯ ಶಾಸಕರಿಗೆ ಜೆಡಿಎಸ್‌ನಲ್ಲಿ ಇರುವ ಮನಸ್ಸಿಲ್ಲ. ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆಯೂ ಇಲ್ಲ. ಹೀಗಾಗಿ ಜೆಡಿಎಸ್‌ನಲ್ಲಿ ದಟ್ಟವಾದ ಹೊಗೆಯ ವಾತಾವರಣವಿದೆ. ಇದರ ಪರಿಣಾಮ ಏನೆಂಬುದು ಚುನಾವಣೆ ವೇಳೆ ಮಾತ್ರ ಗೊತ್ತಾಗುತ್ತದೆ.

Comments are closed.